Advertisement
ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆಗೆ ಸಿದ್ಧತೆ ನಡೆದಿದ್ದು, ಅಂದುಕೊಂಡಂತೆ ಎಲ್ಲವೂ ನಡೆದರೆ ಒಂದೆರಡು ತಿಂಗಳಲ್ಲಿ ಪ್ರಯಾಣಿಕರಿಂದ ತುಂಬಿತುಳುಕುವ ಸಾಮಾನ್ಯ ಬಸ್‌ಗಳಲ್ಲೂ ಉಚಿತ ವೈ-ಫೈ ಸೇವೆ ಸಿಗಲಿದೆ. ಹೊಸದಾಗಿ ರಸ್ತೆಗಿಳಿಯಲಿರುವ ಸಾವಿರ ಸಾಮಾನ್ಯ ಬಸ್‌ಗಳಲ್ಲಿ ಈ ಹೈಟೆಕ್ ಸೇವೆ ಲಭ್ಯವಾಗಲಿದೆ.
Related Articles
Advertisement
ನಿಲ್ದಾಣಗಳಲ್ಲೂ ವೈ-ಫೈ: ವೋಲ್ವೊ ಬಸ್‌ಗಳು ಮತ್ತು ಆಯ್ದ ಪ್ರಮುಖ ನಿಲ್ದಾಣಗಳಲ್ಲೂ ಉಚಿತ ವೈ-ಫೈ ನೀಡಲಾಗುತ್ತಿದೆ. ಈ ಸಂಬಂಧದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಪಿಐಟಿ ಎಂಬ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ.
ಹಳೆಯ 200 ಮತ್ತು ಹೊಸದಾಗಿ ಬಂದಿರುವ 150 ಸೇರಿ ಒಟ್ಟಾರೆ 350 ವೋಲ್ವೊ ಬಸ್‌ಗಳಲ್ಲಿ ಈ ಸೇವೆ ಇರಲಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ಜನರಿಗೆ ಸೇವೆ ಲಭ್ಯವಾಗಲಿದೆ. ಮುಖ್ಯವಾಗಿ ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ವಿಮಾನ ನಿಲ್ದಾಣ ಮಾರ್ಗಗಳಲ್ಲಿ ಈ ಇಂಟರ್‌ನೆಟ್ ಸೇವೆ ಪಡೆಯಬಹುದು. ಆದರೆ, ಇಲ್ಲಿಯೂ ಒಂದು ದಿನಕ್ಕೆ 30 ಎಂಬಿ ಡಾಟಾ ಬಳಕೆಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಶಿವಾಜಿನಗರ, ಶಾಂತಿನಗರ, ದೊಮ್ಮಲೂರು, ವೈಟ್‌ಫೀಲ್ಡ್, ಯಶವಂತಪುರ, ವಿಜಯನಗರ, ಕೆಂಗೇರಿ, ಬನಶಂಕರಿ, ಜಯನಗರ, ಬನ್ನೇರುಘಟ್ಟ, ಕೋರಮಂಗಲ ನಿಲ್ದಾಣಗಳಲ್ಲಿ ಉಚಿತ ಇಂಟರ್‌ನೆಟ್ ಸೇವೆ ಲಭ್ಯವಾಗಲಿದೆ. ಉದ್ದೇಶಿತ ನಿಲ್ದಾಣಗಳು ಅಥವಾ ಬಸ್‌ಗಳನ್ನು ಏರಿದ ತಕ್ಷಣ ಮೊಬೈಲ್‌ನಲ್ಲಿ ವೈ-ಫೈ ಆನ್ ಮಾಡಬೇಕು. ಆಗ ಪಾಸ್‌ವರ್ಡ್ ಕೇಳುತ್ತದೆ. ಆ ಬಸ್ ಅಥವಾ ನಿಲ್ದಾಣಗಳಲ್ಲಿ ಸೂಚಿಸಲಾದ ನಿರ್ದೇಶನಗಳ ಮೂಲಕ ಪ್ರಯಾಣಿಕರು ಈ ಸೇವೆ ಪಡೆಯಬಹುದು.
ಆಯಾ ನಿಲ್ದಾಣಗಳಲ್ಲಿನ ಜನಸಾಂದ್ರತೆಗೆ ಅನುಗುಣವಾಗಿ ವೈ-ಫೈ ಸೇವೆ ಇರುತ್ತದೆ. ಉದಾಹರಣೆಗೆ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರದಟ್ಟಣೆ ಹೆಚ್ಚಿರುವುದರಿಂದ ಗರಿಷ್ಠ 500 ಪ್ರಯಾಣಿಕರು ಒಟ್ಟಿಗೆ ಈ ಸೇವೆ ಪಡೆಯಬಹುದು. ಅದೇ ರೀತಿ, ಶಿವಾಜಿನಗರ, ಶಾಂತಿನಗರದಲ್ಲಿ ಈ ಸೇವೆಯನ್ನು 100 ಜನ ಮಾತ್ರ ಒಟ್ಟಿಗೆ ಪಡೆಯಲು ಸಾಧ್ಯವಾಗಲಿದೆ. ಇದಕ್ಕಿಂತ ಹೆಚ್ಚು ಜನ ಈ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದೂ ಸ್ಪಷ್ಪಪಡಿಸುತ್ತಾರೆ.
ಓಲಾ-ಉಬರ್‌ಗೂ ಸೆಡ್ಡು?ಆ್ಯಪ್ ಆಧಾರಿತ ಓಲಾ-ಉಬರ್ ಟ್ಯಾಕ್ಸಿಗಳು ಹವಾನಿಯಂತ್ರಿತ ಜತೆಗೆ ಉಚಿತ ಇಂಟರ್‌ನೆಟ್ ಸೇವೆ ಕಲ್ಪಿಸಲು ಸಿದ್ಧತೆ ನಡೆಸಿವೆ. ಇದಕ್ಕೆ ಪ್ರತಿಯಾಗಿ ಬಿಎಂಟಿಸಿ ಕೂಡ ಪ್ರಯಾಣಿಕರಿಗೆ ಉಚಿತ ವೈ-ಫೈ ಸೇವೆ ನೀಡಲು ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಿಂದಲೂ ಬಿಎಂಟಿಸಿ ಬಸ್‌ಗಳಿಂದ ಪ್ರಯಾಣಿಕರು ವಿಮುಖರಾಗಿದ್ದಾರೆ. ಈ ಮಧ್ಯೆ ಟ್ಯಾಕ್ಸಿಗಳಲ್ಲಿ ವೈ-ಫೈ ಸೇವೆಯನ್ನೂ ಆರಂಭಿಸಿದರೆ ಮತ್ತಷ್ಟು ಹೊಡೆತ ಬೀಳಲಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಬಸ್‌ಗಳಲ್ಲೂ ವೈ-ಫೈ ನೀಡುವ ಮೂಲಕ ಪ್ರತಿಸ್ಪರ್ಧೆಗೆ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ವೋಲ್ವೊ ಬಸ್‌ಗಳಲ್ಲಿ ವೈ-ಫೈ ಸೇವೆ ನೀಡುವ ಸಂಬಂಧ ಈಗಾಗಲೇ ಟೆಂಡರ್ ಪೂರ್ಣಗೊಂಡಿದೆ. ಮಿಡಿ ಬಸ್‌ಗಳು ಸೇರಿದಂತೆ ಹೊಸದಾಗಿ ಬಿಎಂಟಿಸಿಗೆ ಸೇರ್ಪಡೆಗೊಳ್ಳಲಿರುವ ಸಾವಿರ ಸಾಮಾನ್ಯ ಬಸ್‌ಗಳಲ್ಲೂ ಉಚಿತ ವೈ-ಫೈ ನೀಡಲಾಗುವುದು. ಇದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಲಿದೆ. ಜತೆಗೆ ನಿಗಮಕ್ಕೆ ಆದಾಯವೂ ಬರಲಿದೆ.
-ಡಾ.ಏಕರೂಪ್ ಕೌರ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ * ವಿಜಯಕುಮಾರ್ ಚಂದರಗಿ