Advertisement
ಗೌರಿಹಬ್ಬ ಕೆಲವೊಂದು ಸಮುದಾಯಗಳಿಗೆ ಸೀಮಿತವಾಗಿದ್ದು, ಗಣೇಶನ ಹಬ್ಬ ಪ್ರತಿಯೊಬ್ಬರೂ ಆಚರಣೆ ಮಾಡುತ್ತಾರೆ. ಜೊತೆಗೆ ಗಲ್ಲಿಗೊಂದರಂತೆ ಸಾಮೂಹಿಕ ಗಣಪನ ಮೂರ್ತಿಗಳ ಪ್ರತಿಷ್ಠಾಪನೆ ನಡೆಯುತ್ತಿದೆ. ಎಲ್ಲಿ ನೋಡಿದರೂ ಗಣಪನ ಪ್ರತಿಷ್ಠಾಪನೆ ಸಿದ್ಧತೆ ಕಂಡುಬಂತು. ಗೌರಿ ಹಬ್ಬವನ್ನು ಬೆಳಗ್ಗೆ 9.10 ಗಂಟೆಯೊಳಗೆ ಮುಗಿಸಿ, ನಂತರ ಇಡೀ ದಿನ ಗಣಪನ ಹಬ್ಬ ಆಚರಣೆಗೆ ಮಹಿಳೆಯರು ಸಿದ್ಧತೆ ಮಾಡಿಕೊಂಡಿದ್ದಾರೆ.
Related Articles
Advertisement
ಪಿಒಪಿ ಗಣಪನ ಮಾರಾಟ ನಿಷೇಧಿಸಿರುವುದರಿಂದ ಈ ಬಾರಿ ಗಣಪನ ಮೂರ್ತಿಗಳ ಬೆಲೆ ಮತ್ತಷ್ಟು ಬೆಲೆ ಏರಿಕೆ ಕಂಡಿದೆ, ಜತೆಗೆ ನಾಗರಿಕರು ಪರಿಸರ ಸ್ನೇಹಿ ಗಣಪನನ್ನೇ ಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವುದು ಪರಿಸರ ಸಂರಕ್ಷಣೆಯಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ.
ಜನರ ಆಶಯಕ್ಕೆ ತಕ್ಕಂತೆ ಬರೀ ಜೇಡಿ ಮಣ್ಣಿನಿಂದ ಮಾಡಿದ ಮತ್ತು ಬಣ್ಣ ಲೇಪಿಸದ ಗಣಪನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದ್ದು, ಕಲಾವಿದರೂ ಇಂತಹ ಮೂರ್ತಿಗಳನ್ನೇ ಹೆಚ್ಚು ತಯಾರಿಸಿ ವ್ಯಾಪಾರಕ್ಕಿಟ್ಟಿದ್ದಾರೆ. ದೊಡ್ಡ ಗಾತ್ರದ ಗಣಪತಿಗಳನ್ನು ಹೆಚ್ಚಾಗಿ ಮಾರುಕಟ್ಟೆಯಲ್ಲಿಟ್ಟಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಬೀದಿಯಲ್ಲೂ ಗಣಪನ ಪ್ರತಿಷ್ಠಾಪಿಸುವುದರಿಂದಾಗಿ ಇವೂ ತಮ್ಮ ಬೆಲೆ ಏರಿಸಿಕೊಂಡು ಬೀಗುತ್ತಿವೆ.
ಗ್ರಾಹಕರಿಗೆ ಸಮಾಧಾನ ತಂದ ಹೂವು ದರ:
ವರಮಹಾಲಕ್ಷ್ಮಿಹಬ್ಬದ ಸಂದರ್ಭದಲ್ಲಿ ದಿಢೀರ್ ಬೆಲೆ ಏರಿಸಿಕೊಂಡು ಬೀಗಿದ್ದ ಹೂ ಬೆಲೆ ಇದೀಗ ಸಾಕಷ್ಟು ಕುಸಿತ ಕಂಡಿದೆ, ಹೊರ ರಾಜ್ಯಗಳ ಹೂ ಮಾರುಕಟ್ಟೆಗೆ ಬಂದಿರುವುದರಿಂದ ವರಮಹಾ ಲಕ್ಷ್ಮಿಹಬ್ಬದ ಸಂದರ್ಭದಲ್ಲಿ 280 ರೂ. ಕೆ.ಜಿ.ಗೆ ಬೆಲೆ ಏರಿಸಿಕೊಂಡಿದ್ದ ಬಟನ್ ರೋಸ್ ಈಗ 100 ರೂ.ಗೆ ಇಳಿದಿದೆ, ಸೇವಂತಿ ಕೆ.ಜಿ.ಗೆ 160 ರೂ. ಇದ್ದು, ಮಲ್ಲಿಗೆ 600 ರೂ. ಇದ್ದರೆ ಕನಕಾಂಬರ ಒಂದು ಸಾವಿರ ದಾಟಿದೆ. ಅಕ್ಕಿ, ಬೆಲ್ಲ, ಶೇಂಗಾ, ಎಣ್ಣೆಗಳಲ್ಲಿ ಅಂತಹ ವ್ಯತ್ಯಾಸ ಕಂಡು ಬಾರದಿದ್ದರೂ, ಬೆಲೆ ಏರಿಕೆ ನಾಗರಿಕರ ಜೇಬಿಗೆ ಕತ್ತರಿ ಹಾಕಿರುವುದಂತೂ ದಿಟ. ಒಂದೆಡೆ ಹಬ್ಬದ ಸಂಭ್ರಮವಾದರೆ ಮತ್ತೂಂದೆಡೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವವರಿಗೆ ಬೆಲೆ ಏರಿಕೆಯ ತಾಪ ಕಣ್ಣೀರು ತರಿಸಿದ್ದರೂ, ಸಂಪ್ರದಾಯ ಬದ್ಧವಾಗಿ ಹಬ್ಬ ಆಚರಿಸಬೇಕೆಂಬ ಅನಿವಾರ್ಯತೆ ಜಿಲ್ಲೆಯ ಜನರದ್ದಾಗಿದೆ.
● ಕೆ.ಎಸ್.ಗಣೇಶ್