Advertisement
ಆ ಪತ್ರಕರ್ತೆಯ ಮಾತು ಕೇಳಿದ್ದೇ ರೋಹಿತ್, ”ಹಾಗಿದ್ದರೆ ಪಾಕಿಸ್ತಾನದಲ್ಲಿ ಡೀಪ್‌ಸೆrೕಟ್ ಇದೆ ಎಂದು ಒಪ್ಪಿಕೊಳ್ಳುತ್ತೀರಾ?” ಎಂದು ಕೇಳಿದಾಗ ಆಕೆ ನಸುನಕ್ಕು, ”ನಾನು ಮಾತನಾಡುತ್ತಿರುವುದು ಭಾರತದಲ್ಲಿನ ಡೀಪ್‌ಸ್ಟೇಟ್ ಬಗ್ಗೆ” ಎಂದರು. ಸತ್ಯವೇನೆಂದರೆ, ಪಾಕಿಸ್ಥಾನದ ಪತ್ರಕರ್ತೆಯ ಮಾತು ಕೇಳಿ ನನಗೆ ಆಶ್ಚರ್ಯವೇನೂ ಆಗಲಿಲ್ಲ, ಏಕೆಂದರೆ ಪಾಕಿಸ್ಥಾನದ ನನ್ನ ಗೆಳೆಯರ ಬಾಯಿಂದ ಇದೇ ಮಾತನ್ನು ಅನೇಕಬಾರಿ ಕೇಳಿದ್ದೇನೆ.
Related Articles
Advertisement
ಸಮಸ್ಯೆಯೇನೆಂದರೆ, ಇಂದು ಭಾರತ ಮತ್ತು ಪಾಕಿಸ್ಥಾನದ ನಡುವೆ ಮಾತುಕತೆ ನಡೆಸಲು ಪದಗಳೇ ಉಳಿದಿಲ್ಲ. 26/11 ದಾಳಿಗೆ ಪಾಕಿಸ್ಥಾನದ ಡೀಪ್‌ಸ್ಟೇಟ್ ಕಾರಣ ಎನ್ನುವುದನ್ನು ಈಗಲೂ ಪಾಕಿಸ್ಥಾನಿಯರಿಗೆ ಅರ್ಥಮಾಡಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಅಮೆರಿಕದ ಜೈಲಿನಿಂದ ಡೇವಿಡ್ ಹೆಡ್ಲಿ ಕೊಟ್ಟಿರುವ ಹೇಳಿಕೆಯೇ ಸಾಕು, ಆರೋಪ ರುಜುವಾತಾಗುವುದಕ್ಕೆ.
ಆದರೆ, ಇದು ಪಾಕಿಸ್ಥಾನಕ್ಕೆ, ಅಲ್ಲಿನ ಪತ್ರಕರ್ತರಿಗೆ, ಜನರಿಗೆ ಸಾಕಾಗುವುದಿಲ್ಲ. ಏಕೆಂದರೆ, ಆ ದೇಶ ಬೇರೆ ಯಾವುದೋ ಲೋಕದಲ್ಲಿ ಬದುಕುತ್ತಿದೆ. ಕುಲಭೂಷಣ್ ಜಾಧವ್ ಕುರಿತ ಅಂತಾರಾಷ್ಟ್ರೀಯ ತೀರ್ಪು ತನ್ನ ಪರವಾಗಿಯೇ ಇದೆ ಎಂದು ಪಾಕಿಸ್ಥಾನ ಭಾವಿಸುತ್ತಿರುವುದೂ ಇದೇ ಕಾರಣಕ್ಕೆ. ಇಮ್ರಾನ್ ಖಾನ್ ಅವರು ಟ್ವೀಟ್ ಮಾಡಿ, ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದರು. ನ್ಯಾಯಾಲಯ ಜಾಧವ್‌ರನ್ನು ಬಿಡುಗಡೆಗೊಳಿಸಲು ಆದೇಶಿಸಿಲ್ಲ ಎನ್ನುವ ಆಧಾರದ ಮೇಲೆ ಅವರು ಹಾಗೆ ಟ್ವೀಟ್ ಮಾಡಿದ್ದರು.
ಗಡಿಯ ಈ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಟ್ವೀಟ್ ಮಾಡಿ, ತೀರ್ಪು ಭಾರತದ ಪರ ಬಂದಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದರು. ಏಕೆಂದರೆ, ಜಾಧವ್‌ಗೆ ನೀಡಲಾಗಿದ್ದ ಮರಣದಂಡನೆಗೆ ತಡೆ ಬಿದ್ದಿದೆ, ಅವರನ್ನು ಭೇಟಿಯಾಗುವ ಅಧಿಕಾರ ನಮ್ಮ ರಾಜತಾಂತ್ರಿಕರಿಗೆ ಸಿಕ್ಕಿದೆ.
ಇಮ್ರಾನ್ ಟ್ವೀಟ್ಗಿಂತ ಮೋದಿಯವರ ಟ್ವೀಟು ಏಕೆ ಮಹತ್ವ ಪಡೆಯುತ್ತದೆ. ಏಕೆಂದರೆ ಮೋದಿ ಅಸಲಿ ಪ್ರಧಾನಮಂತ್ರಿ, ಇಮ್ರಾನ್ ಪಾಕಿಸ್ಥಾನದ ಡೀಪ್‌ಸ್ಟೇಟ್‌ನ ಕೈಗೊಂಬೆಯಷ್ಟೆ.
ಭಾರತದ ಸಮಸ್ಯೆಯೇನೆಂದರೆ, ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಆರ್‌ಎಸ್‌ಎಸ್ ಪಾತ್ರವನ್ನು ಎಷ್ಟೊಂದು ದೊಡ್ಡದು ಮಾಡಿ ಬಿಂಬಿಸುತ್ತಾ ಬರುತ್ತಿದ್ದಾರೆಂದರೆ, ನನ್ನ ಪಾಕಿಸ್ಥಾನಿ ಮಿತ್ರರೆಲ್ಲ ಆರ್‌ಎಸ್‌ಎಸ್ ಸಂಘಟನೆ ಭಾರತದ ಡೀಪ್‌ಸ್ಟೇಟ್ ಆಗಿ ಬದಲಾಗಿದೆ ಎಂದೇ ಭಾವಿಸುತ್ತಾರೆ. ಕೆಲವು ಕಾಂಗ್ರೆಸ್ ನಾಯಕರು 26/11 ಮುಂಬೈ ಉಗ್ರ ದಾಳಿಯ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಹೇಳಿದಾಗಲೂ ಹೀಗೆಯೇ ಆಗಿತ್ತು.
ಚುನಾವಣೆಯ ಸಂದರ್ಭದಲ್ಲಿ ಆರ್‌ಎಸ್‌ಎಸ್ ಬಿಜೆಪಿಗೆ ಸಹಾಯ ಮಾಡುತ್ತದೆ ಎನ್ನುವುದು ನಮಗೆ ತಿಳಿದಿದೆ. ಆದರೆ ನರೇಂದ್ರ ಮೋದಿ ಈ ಬಾರಿ ಮತ್ತು ಹಿಂದಿನ ಬಾರಿ ಗೆದ್ದದ್ದು ತಮ್ಮ ಸ್ವಂತ ಬಲದ ಮೇಲೆಯೇ. ಮೋದಿ ಇರಲಿಲ್ಲ ಎಂದರೆ ನಿಸ್ಸಂಶಯವಾಗಿಯೂ ಬಿಜೆಪಿಗೆ 300ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಿಕೊಡಲು ಸಂಘಕ್ಕೆ ಸಾಧ್ಯವಾಗುತ್ತಿರಲಿಲ್ಲ.
ಆದಾಗ್ಯೂ, ಸಂಘದ ಕೆಲವು ಹಿರಿಯ ನಾಯಕರು ಆಡಳಿತದಲ್ಲಿ, ಕೆಲವು ನೀತಿಗಳ ವಿಚಾರದಲ್ಲಿ ಸ್ವಲ್ಪ ಮಟ್ಟದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎನ್ನುವುದೇನೋ ನಿಜ. ಆದರೆ, ವಿದೇಶಾಂಗ ಅಥವಾ ಸುರಕ್ಷಾ ನೀತಿಯಂಥ ಕ್ಷೇತ್ರಗಳಲ್ಲಿ ಸಂಘದ ಹಸ್ತಕ್ಷೇಪದ ಪ್ರಶ್ನೆಯೇ ಉದ್ಭವವಾಗುವುದಿಲ್ಲ.
ಭಾರತದಲ್ಲಿ ಡೀಪ್‌ಸ್ಟೇಟ್ ಅನ್ನು ಹುಡುಕುವವರು ತಮ್ಮ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರಷ್ಟೆ. ಪಾಕಿಸ್ಥಾನಕ್ಕೆ ಹೇಗೆ ಅರ್ಥಮಾಡಿಸುವುದು – ಪ್ರಧಾನಿಯಾದ ನಂತರ ಮೋದಿಯವರು ಸ್ನೇಹದ ಹಸ್ತ ಚಾಚಿದರೆ, ಪಾಕ್‌ನ ಡೀಪ್‌ಸ್ಟೇಟ್ ನಮ್ಮತ್ತ ಜಿಹಾದಿಗಳನ್ನು ಕಳಿಸಿತೆಂದು. ನವಾಜ್ ಷರೀಫ್ ರಾಜಕೀಯ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಂತೆಯೇ, ಅವರನ್ನು ರಾಜನೀತಿಯಿಂದಲೇ ಕೆಳಕ್ಕುರುಳಿಸಲಾಯಿತು ಎಂದು?
ಅಟಲ್ ಬಿಹಾರಿ ವಾಜಪೇಯಿಯವರು ಸ್ನೇಹ ಹಸ್ತ ಚಾಚಿದಾಗ, ಪಾಕಿಸ್ಥಾನದ ಡೀಪ್ ಸ್ಟೇಟ್ ನಮಗೆ ಕೊಟ್ಟದ್ದು ಕಾರ್ಗಿಲ್ ಯುದ್ಧವನ್ನು. ಪಾಕಿಸ್ಥಾನದೊಂದಿಗೆ ಶಾಂತಿ ಸ್ಥಾಪಿಸಬಹುದು ಎಂದು ಭಾವಿಸಿದರೆ, ನಮ್ಮ ಸಮಯ ವ್ಯರ್ಥವಾಗುತ್ತದಷ್ಟೆ!
(ಲೇಖನ ಕೃಪೆ: ಜನಸತ್ತಾ)
ತವ್ಲೀನ್ ಸಿಂಗ್, ಹಿರಿಯ ಪತ್ರಕರ್ತೆ