ಕೊಟ್ಟಿಗೆಹಾರ:ಬಣಕಲ್ ಗ್ರಾ.ಪಂ ವ್ಯಾಪ್ತಿಯ ಇಂದಿರಾನಗರದಲ್ಲಿ ರಸ್ತೆ ಕಾಮಗಾರಿಗೆಂದು ತಂದು ಹಾಕಿದ್ದ ಜಲ್ಲಿಯನ್ನು ಬೇರೆಡೆ ನಡೆಯುತ್ತಿರುವ ಕಾಮಗಾರಿಗೆ ಟ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗಲು ಬಂದದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಡಿಸೆಂಬರ್ ೨೭ ರಂದು ಬಣಕಲ್ ಗ್ರಾ.ಪಂ ಚುನಾವಣೆ ನಡೆದಿದ್ದು ಚುನಾವಣೆಗೂ ಮುನ್ನ ಇಂದಿರಾನಗರದ ರಸ್ತೆ ಕಾಮಗಾರಿಗೆಂದು ಜಲ್ಲಿಯನ್ನು ತಂದು ಇಂದಿರಾನಗರದ ರಸ್ತೆ ಬದಿಯಲ್ಲಿ ಹಾಕಿದ್ದು, ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಮುಗಿದ ನಂತರ ರಸ್ತೆ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಲಾಗಿತ್ತು. ಆದರೆ ಶುಕ್ರವಾರ ಇಂದಿರಾನಗರದಲ್ಲಿ ಹಾಕಿದ್ದ ಜಲ್ಲಿಯನ್ನು ಬೇರೆಡೆಗೆ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್ ಬಂದಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಗೂ ಮುನ್ನ ರಸ್ತೆ ಅಭಿವೃದ್ದಿಗೆ ತಂದು ಹಾಕಿದ್ದ ಜಲ್ಲಿಯನ್ನು ಬೇರೆಡೆಗೆ ತೆಗೆದುಕೊಂಡು ಹೋಗುತ್ತಿರುವುದು ಯಾಕೆ? ನೀತಿ ಸಂಹಿತೆ ಮುಗಿದಿದ್ದರೂ ಇನ್ನೂ ಯಾಕೆ ರಸ್ತೆ ಅಭಿವೃದ್ದಿ ಪ್ರಾರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜಲ್ಲಿ ತಗೆದುಕೊಂಡು ಹೋಗಲು ಅವಕಾಶ ಕೊಡಲಿಲ್ಲ.
ಈ ಸಂದರ್ಭದಲ್ಲಿ ಗ್ರಾ.ಪಂ ನೂತನ ಸದಸ್ಯರಾದ ಆದಂ ಕುಟ್ಟ, ಸಿರಾಜ್, ಆತಿಕಾ ಭಾನು, ಜರಿನಾ ಭಾನು, ವಿನಯಗೌಡ, ಜರಿದಾ ಹಾಗೂ ಇಂದಿರಾನಗರದ ಗ್ರಾಮಸ್ಥರ ಅಶ್ರಪ್, ಬದ್ರುದ್ದೀನ್, ಆರೀಪ್, ವಿನಯ್, ಹನೀಪ್ ಮುಂತಾದವರು ಇದ್ದರು.
ಬಣಕಲ್ ಗುಡ್ಡಟ್ಟಿ ರಸ್ತೆ ಅಭಿವೃದ್ದಿಯೂ ಮರೀಚಿಕೆ
ಬಣಕಲ್ ಗುಡ್ಡಟ್ಟಿ ರಸ್ತೆ ಅಭಿವೃದ್ದಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಲ್ಲೆ ಬಂದರೂ ರಸ್ತೆ ಕಾಮಗಾರಿ ಆರಂಭವಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಬಣಕಲ್ ಗುಡ್ಡಟ್ಟಿ ರಸ್ತೆ ಅಭಿವೃದ್ದಿಯಾಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಡಿಸೆಂಬರ್ ೨೭ ರಂದು ನಡೆದ ಬಣಕಲ್ ಗ್ರಾ,ಪಂ ಚುನಾವಣೆಯ ಮತದಾನದಲ್ಲಿ ಮತದಾನ ಬಹಿಷ್ಕಾರ ಮಾಡಲು ಕುವೆಂಪುನಗರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ನಿರ್ಧರಿಸಿದ್ದರು. ಆದರೆ ಸ್ಥಳೀಯ ಮುಖಂಡರು ರಸ್ತೆ ಅಭಿವೃದ್ದಿಯ ಭರವಸೆ ನೀಡಿದ್ದರು. ಸಂಬಂಧಪಟ್ಟ ಗುತ್ತಿಗೆದಾರರು ಜಲ್ಲಿಯನ್ನು ತಂದು ಹಾಕಿ ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ರಸ್ತೆ ಕಾಮಗಾರಿ ಆರಂಭಿಸುವ ಭರವಸೆಯನ್ನು ನೀಡಿದ್ದರು. ಆದರೆ ಚುನಾವಣೆ ನೀತಿ ಸಂಹಿತೆ ಮುಗಿದು ಹಲವು ದಿನಗಳು ಕಳೆದರೂ ಕೂಡ ರಸ್ತೆ ಕಾಮಗಾರಿ ಆರಂಭವಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಶೀಘ್ರವಾಗಿ ರಸ್ತೆ ಕಾಮಗಾರಿ ಆರಂಭಿಸಿದೇ ಇದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
‘ಬಣಕಲ್ ಗ್ರಾಮ ಪಂಚಾಯತಿ ಚುನಾವಣೆಯ ನೀತಿಸಂಹಿತೆ ಇದ್ದುದ್ದರಿಂದ ರಸ್ತೆ ಕಾಮಗಾರಿ ವಿಳಂಬವಾಗಿತ್ತು. ಈಗ ನೀತಿ ಸಂಹಿತೆ ಮುಗಿದಿರುವುದರಿಂದ ಶೀಘ್ರದಲ್ಲಿ ರಸ್ತೆ ಕಾಮಗಾರಿ ಆರಂಭವಾಗಲಿದೆ’
-ಎಂ.ಪಿ.ಕುಮಾರಸ್ವಾಮಿ. ಶಾಸಕರು ಮೂಡಿಗೆರೆ.