Advertisement
ತುಳು ನಾಡಿನ ಜನತೆಯನ್ನು ಅನಾದಿ ಕಾಲದಲ್ಲಿ ವಿಚಿತ್ರ ರೋಗವೊಂದು ಬಾಧಿಸಿ ಊರಿಗೇ ಊರೇ ನರಳುತ್ತಿದ್ದ ಸಮಯದಲ್ಲಿ ನಾಗಬ್ರಹ್ಮ ದೇವರು ನಾಡಿನ ರೋಗ(ಮಾರಿ)ಕಳೆಯಲು ಆಟಿಕಳಂಜನನ್ನು ಭೂಮಿಗೆ ಕಳುಹಿಸಿದ. ಹಾಗೆ ಬಂದ ಆಟಿಕಳಂಜ ಎಲ್ಲಾ ಮನೆ ಮನೆಗೆ ತೆರಳಿ ಮಾರಿಯನ್ನು (ರೋಗ) ನಿವಾರಿಸಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಿ ಹರಸಿದ. ಇದಕ್ಕೆ ಪ್ರತಿಫಲವಾಗಿ ಜನರು ನೀಡುವ ಭತ್ತ, ಅರಸಿನ, ಉಪ್ಪು, ತೆಂಗಿನಕಾಯಿ, ಹುಳಿ, ಮೆಣಸುಗಳನ್ನು ಪಡೆದು ಊರನ್ನು ಉದ್ಧರಿಸಿದ. ಹೀಗೆ ಊರಿನ ಉದ್ಧಾರಕ್ಕೆಂದು ನಾಗಬ್ರಹ್ಮನ ಸೃಷ್ಟಿಯೇ ಈ ಆಟಿ ಕಳಂಜ. ಇದರ ಪ್ರತೀಕ ಎಂಬಂತೆ ಆಟಿ ಕಳಂಜ ಇಂದಿಗೂ ಆಟಿ ತಿಂಗಳಲ್ಲಿ ಪ್ರತೀ ಮನೆಗೆ ತೆರಳಿ ಮನೆಯವರು ನಿಡುವ ದವಸ ಧಾನ್ಯಗಳನ್ನು ಪಡೆಯುವ ಪದ್ಧತಿ ಇದೆ.
ಆಟಿ ಕಳಂಜ ತಿಂಗಳ ಮೂವತ್ತು ದಿನವು ಊರು ಸುತ್ತುವುದಿಲ್ಲ. ಆರಂಭದಿಂದ 16 ದಿನ ಮಾತ್ರ ತಿರುಗಾಟ. ಕಾಲಿಗೆ ಹಾಳೆಯಿಂದ ಮಾಡಿದ ಕವಚದ ರಕ್ಷಣೆಯಲ್ಲಿ ಗಗ್ಗರವನ್ನು ಕಟ್ಟಿ, ತೆಂಗಿನ ಗರಿಯಿಂದ ನಿರ್ಮಿಸಿದ ಸಿರಿಯನ್ನು ಸೊಂಟಕ್ಕೆ ಬಿಗಿದು ಮುಖಕ್ಕೆ ವಿಶೇಷ ಬಣ್ಣ ಬಳಿದುಕೊಂಡು ಪಣೋಲಿ ಮರದ ಗರಿಯಿಂದ ನಿರ್ಮಿಸಿದ ಕೊಡೆಯನ್ನು ಹಿಡಿದುಕೊಂಡು “ಕಳೆಂಜ ಕಳೆಂಜೆನಾ ಆಟಿದ ಕಳೆಂಜೆನಾ ಊರುದ ಮಾರಿ ಕಳೆಯರೆಂದ್ ಆಟಿದ ಕಳೆಂಜೆ ಬತ್ತೇನಾ” ಎಂಬ ಹಾಡನ್ನು ಹೇಳಿಕೊಂಡು ಸಹಾಯಕ ಬಡಿಯುವ ತೆಂಬರೆಯ ತಾಳಕ್ಕೆ ಹೆಜ್ಜೆ ಹಾಕಿಕೊಂಡು ಕಳಂಜ ಮನೆ ಬಾಗಿಲಿಗೆ ಬರುತ್ತಾನೆ. ಬಳಿಕ ಗದ್ದೆ, ತೋಟಗಳಿಗೆ ಕೃಷಿಗೂ ತಟ್ಟಿದ ಮಾರಿಯನ್ನು ಕಳೆಯುತ್ತಾನೆ. ಹೀಗೆ ತಿರುಗಾಟ ನಡೆಸಿ ಕೊನೆಯ ದಿನ ತನ್ನ ಎಲ್ಲಾ ಪರಿಕರಗಳನ್ನು ಊರಿನ ಗಡಿಯಲ್ಲಿರುವ ಕಾಸರಕನ ಮರಕ್ಕೆ ಕಟ್ಟಿ ಊರಿಗೆ ಬಂದ ಮಾರಿ ಏಳು ಕಡಲಾಚೆಗೆ ಬೀಳಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾನೆ. ಅಲ್ಲಿಗೆ ತಿರುಗಾಟ ಅಂತ್ಯ.
Related Articles
ಆಟಿ ಕಳಂಜಕ್ಕಿಂತ ಮುನ್ನ ಕಿನ್ನಿಕಳಂಜ ತನ್ನ ಸೇವೆಯನ್ನು ಪೂರೈಸಿದ ಬಳಿಕ ಆಟಿ ಕಳಂಜ ಊರ ಸೇವೆಗೆ ತೆರಳುತ್ತಾನೆ. ಆಟಿಯಲ್ಲಿ ಆಟಿಕಳಂಜ ಬಂದರೆ, ಸೋಣದಲ್ಲಿ (ಆಗಸ್ಟ್) ಸೋಣದ ಮದಿಮಾಲ್, ಜಾತ್ರೆಯಲ್ಲಿ(ನವಂಬರ್) ಮಾದಿರ, ಮತ್ತು ಸುಗ್ಗಿ(ಮಾರ್ಚ್) ತಿಂಗಳಲ್ಲಿ ಕೊರಗತನಿಯ-ಹೀಗೆ ಬೇರೆ ಬೇರೆ ಅವತಾರಗಳಲ್ಲಿ ಸೃಷ್ಟಿಯಾದ ಆಟಿಕಳಂಜ ನಾಡಿಗೆ ಬಂದು ಜನರ ಕಷ್ಟ ದುರಿತಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ. ಆದರೆ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಇವೆಲ್ಲವೂ ಮರೆಯಾಗುತ್ತಿದೆ. ಆದರೂ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಕಾಣ ಸಿಗುತ್ತಾನೆ.
Advertisement
ತುಳುನಾಡಿನ ಜಾನಪದದ ಭಾಗವಾದ ಆಟಿಕಳಂಜ ಆಧುನಿಕ ಸಂದರ್ಭದಲ್ಲಿ ನಿಧಾನವಾಗಿ ತೆರೆಮರೆಗೆ ಸರಿಯುತ್ತಿರುವಂಥದ್ದು. ನಮ್ಮೊಳಗಿನ ನಂಬಿಕೆಯನ್ನು ಗಟ್ಟಿಗೊಳಿಸಿ ತುಳುನಾಡಿನ ಸಂಸ್ಕೃತಿಯನ್ನು ಮೆರೆಸುತ್ತಿದ್ದ ಆಟಿಕಳಂಜ ಈಗ ಮತ್ತೆ ಬರುತ್ತಿದ್ದಾನೆ.
– ಸದಾನಂದ ಆಲಂಕಾರು