Advertisement
ಈಚೆಗೆ ದೇಶಾದ್ಯಂತ ಸಾವಿರಾರು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ರಾಯಚೂರು ಕೇಂದ್ರೀಯ ವಿದ್ಯಾಲಯದ 15ರಲ್ಲಿ 13 ಶಿಕ್ಷಕರು, ಹಟ್ಟಿ ಚಿನ್ನದ ಗಣಿ ಶಾಲೆಯಲ್ಲಿ 11ರಲ್ಲಿ ಆರು ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ.
Related Articles
Advertisement
ಕೇಂದ್ರ ಸರ್ಕಾರ ವರ್ಗಾವಣೆ ಪ್ರಕ್ರಿಯೆ ಸಂಪೂರ್ಣ ಆನ್ ಲೈನ್ ಮೂಲಕವೇ ನಡೆಸುತ್ತದೆ. ವರ್ಗಾವಣೆ ಬೇಕಾದವರು ತಮಗೆ ಬೇಕಾದ ರಾಜ್ಯ-ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಹಾಕಿದರೆ ಜ್ಯೇಷ್ಠತಾ ಆಧಾರದಡಿ ಅರ್ಹತೆ ಇದ್ದರೆ ನೇರವಾಗಿ ವರ್ಗಾವಣೆ ಆದೇಶ ಸಿಕ್ಕು ಬಿಡುತ್ತದೆ. ಇದಾದ ಕೂಡಲೇ ತಮ್ಮ ಊರುಗಳತ್ತ ಮುಖ ಮಾಡುವ ಶಿಕ್ಷಕರು, ತಾವಿದ್ದ ಶಾಲೆ ಪರಿಸ್ಥಿತಿ ಏನು ಎತ್ತ ಎಂಬ ಬಗ್ಗೆ ಹೇಳುವವರು ಕೇಳುವವರೇ ಇಲ್ಲದಾಗಿದೆ.
ಇದನ್ನೂ ಓದಿ: ವ್ಯಕ್ತಿಗೆ ಪೊಲೀಸರಿಂದ ಥಳಿತ-ಆರೋಪ
ಮಕ್ಕಳ ಕಲಿಕೆಗೆ ಕಂಟಕ
ರಾಯಚೂರಿನ ಕೇಂದ್ರೀಯ ವಿದ್ಯಾಲಯದಲ್ಲಿ 435 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಪ್ರಧಾನ ವಿಷಯಗಳಾಗಿ ಹಿಂದಿ, ಇಂಗ್ಲಿಷ್, ಸಂಸ್ಕೃತ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಕಲಿಯಬೇಕಿದೆ. ಅದರ ಜತೆಗೆ ಕಂಪ್ಯೂಟರ್, ಸಂಗೀತ, ಚಿತ್ರಕಲೆ ಸೇರಿದಂತೆ ಕೆಲವೊಂದು ಪಠ್ಯೇತರ ಚಟುವಟಿಕೆಗಳ ಕಲಿಕೆ ಕೂಡ ಕಡ್ಡಾಯ. ಈಗ ಕೇವಲ ಮೂವರು ಅತಿಥಿ ಶಿಕ್ಷಕ ಮೇಲೆ ಬೋಧನೆ ನಡೆಯುತ್ತಿದೆ. ಚಿತ್ರಕಲೆ ಶಿಕ್ಷಕರಿಗೆ ಅರ್ಹತೆ ಆಧಾರದ ಮೇಲೆ ಪ್ರಾಚಾರ್ಯ ಹುದ್ದೆ ನೀಡಲಾಗಿದೆ. ವಿಪರ್ಯಾಸವೆಂದರೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಈ ಶಾಲೆಗೆ ಕಾಯಂ ಪ್ರಾಚಾರ್ಯರು ಕೂಡ ಇಲ್ಲ.
ಮೇಲಿಂದಲೇ ನಿಯಂತ್ರಣ
ಶಂಖದಿಂದ ಬಂದರೆ ತೀರ್ಥ ಎನ್ನುವಂತೆ ಸಣ್ಣ ವಿಚಾರ ನಿರ್ಧರಿಸಬೇಕಾದರೂ ಈ ಶಾಲೆಗಳು ಕೇಂದ್ರ ಕಚೇರಿಯನ್ನೇ ಸಂಪರ್ಕಿಸಬೇಕು. ಈಗ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಕೂಡ ಸಂಸ್ಥೆ ಮುಖ್ಯಸ್ಥರಾದ ಡಿಸಿಯವರು ಅನುಮತಿ ಪಡೆಯಲೇಬೇಕು. ಆದರೆ, ಅವರು ಕೇಂದ್ರೀಯ ವಿದ್ಯಾಲಯಗಳ ನಿಯಮಾನುಸಾರ ಅತಿಥಿ ಶಿಕ್ಷಕರನ್ನು ಪರೀಕ್ಷೆಗೆ ಒಳಪಡಿಸಿಯೇ ಆಯ್ಕೆ ಮಾಡುವಂತೆ ಸೂಚಿಸುತ್ತಾರೆ. ಇದರಿಂದ ಸಾಕಷ್ಟು ಶಿಕ್ಷಕರು ಅರ್ಹತೆ ಪಡೆಯುವಲ್ಲಿ ವಿಫಲ ಹೊಂದುತ್ತಾರೆ. ಒಟ್ಟಾರೆ ಮಕ್ಕಳ ಭವಿಷ್ಯ ರೂಪಿಸಲು ಮಹತ್ವ ಪಾತ್ರ ವಹಿಸಬೇಕಾದ ಕೇಂದ್ರೀಯ ವಿದ್ಯಾಲಯಗಳು ಮಕ್ಕಳಿಗೆ ಭವಿಷ್ಯಕ್ಕೆ ಮಾರಕವಾಗಿರುವುದು ವಿಪರ್ಯಾಸ.
ಕೇಂದ್ರ ಸರ್ಕಾರ ನಡೆಸಿದ ವರ್ಗಾವಣೆ ಪ್ರಕ್ರಿಯೆಯಿಂದ ರಾಯಚೂರು ಹಾಗೂ ಹಟ್ಟಿ ಕೇಂದ್ರೀಯ ವಿದ್ಯಾಲಯಗಳು ಖಾಲಿಯಾಗಿವೆ. ಈ ಸಮಸ್ಯೆ ಕೂಡಲೇ ಗಮನಕ್ಕೆ ತರುವಂತೆ ಸಂಸದರಿಗೂ ಮನವಿ ಮಾಡಿದ್ದು, ಸಂಬಂಧಿಸಿದ ಇಲಾಖೆಗೂ ಪತ್ರ ಬರೆಯಲಾಗುವುದು. ಒಂದು ವಾರದೊಳಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಲಾಗಿದೆ. ಈಗಿರುವ ಪ್ರಾಚಾರ್ಯರ ವರ್ಗಾವಣೆಯಾಗಿದ್ದು, ಅವರನ್ನು ಬಿಡುಗಡೆ ಮಾಡದೆ ತಡೆ ಹಿಡಿಯಲಾಗಿದೆ. -ಸಂತೋಷ್ ಕಾಮಗೌಡ, ಶಾಲೆ ಪ್ರಭಾರ ಮುಖ್ಯಸ್ಥ
-ಸಿದ್ಧಯ್ಯಸ್ವಾಮಿ ಕುಕನೂರು