ಪ್ರೀತಿ ಎಂಬುದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಎಂಬುದು ಸತ್ಯ. ಮನಸ್ಸುಗಳ ವಿಶಿಷ್ಟ ಆಕರ್ಷಣೆ, ಅಂದರೆ ಸೌಂದರ್ಯ, ನಡವಳಿಕೆ, ನಾಯಕತ್ವ ಗುಣ ಹಾಗೂ ಇನ್ನಿತರ ನಾನಾ ಚಲನವಲನಗಳಿಂದ ಮನಸ್ಸಿಗೆ ಖುಷಿ ಕೊಡುವಂಥ ಕೆಲವೊಂದು ಆಕರ್ಷಣೆಗಳಿಂದ ಮನಸ್ಸು ಪರಿವರ್ತನೆ ಹೊಂದಿ ವಯಸ್ಸಿನ ದೋಷದಿಂದಲೋ ಹುಡುಗ-ಹುಡುಗಿಯರ ನಡುವೆ ಪ್ರೀತಿ ಉದ್ಭವವಾಗುತ್ತದೆ.
ಕಾಲೇಜು ಮೆಟ್ಟಿಲೇರಿದ ನಂತರ ಹುಡುಗ-ಹುಡುಗಿಯರ ಮನಸ್ಸುಗಳು ತಲ್ಲಣಗೊಳ್ಳುತ್ತದೆ. ಕೆಲವರು, ಯಾರಿಗಾದರೂ ನನ್ನ ಮೇಲೆ ಪ್ರೀತಿ ಇದೆಯೋ ಅಥವಾ ನನಗೆ ಮಾತ್ರ ಆತನಲ್ಲಿ ಪ್ರೀತಿ ಇದೆಯೋ ಎಂಬಂತೆ, ಉತ್ತರ ಇಲ್ಲದ ಸಂಶಯ ಅವರನ್ನು ಕಾಡುತ್ತಲೇ ಇರುತ್ತದೆ. ಕೆಲವು ಹುಡುಗಿಯರಿಗೆ ಹುಡುಗರ ನಡವಳಿಕೆಗಳು ಖುಷಿ ಎಂದು ಅನಿಸಿದರೆ ಅವರನ್ನು ನೋಡುವ, ಮಾತನಾಡುವ ಹಂಬಲ ಅವರಲ್ಲಿ ಇರುತ್ತದೆ. ಆದರೆ, ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ಹುಡುಗರು ಪಕ್ಕನೆ ತಮ್ಮ ಗೆಳೆಯರೊಡನೆ ಇಂತಹ ವಿಷಯವನ್ನು ಹೇಳಿಯೇ ಬಿಡುತ್ತಾರೆ. ಅದೇನು ಆತುರವೋ ಅಥವಾ ಮನಸ್ಸನ್ನು ಹಿಡಿದಿಟ್ಟುಕೊಳ್ಳಲಾಗದೆಯೋ ಎರಡು ಮನಸ್ಸುಗಳು ಒಂದಾಗಿ ಪ್ರೀತಿ ಎಂಬ ಬಲೆಗೆ ಬಿದ್ದುಬಿಡುತ್ತಾರೆ.
ಮನಸ್ಸುಗಳು ಒಂದಾಗಿ, ಪ್ರೇಮಾಂಕುರ ಆದ ಸ್ವಲ್ಪ ದಿನಗಳ ನಂತರ ಪ್ರೀತಿ ಹೆಚ್ಚಾಗಿ ಇಬ್ಬರಿಗೂ ಒಂದು ದಿನವೂ ಬಿಟ್ಟಿರಲಾಗದಷ್ಟು ಪ್ರೀತಿ ಉಂಟಾಗುತ್ತದೆ. ನೀನಿಲ್ಲದೆ ನಾನಿಲ್ಲ ಎಂಬ ಭಾವನೆಯೂ ಬರುತ್ತದೆ. ಆದರೆ, ಅವರಿಗೆ ಅಲ್ಲಿ ಎದುರಾಗುವ ಮುಖ್ಯ ಸಮಸ್ಯೆ ಎಂದರೆ, ಮನೆಯಲ್ಲಿ ಏನನ್ನುತ್ತಾರೋ ಎಂಬ ಭಯ. ಅನ್ಯಧರ್ಮ, ಅನ್ಯಜಾತಿ ಆದರೆ, ಸಮಾಜದವರು, ಮನೆಯವರು ನಮ್ಮ ಪ್ರೀತಿಯನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಚಿಂತೆ. ಎಲ್ಲವೂ ಆಕಸ್ಮಿಕವಾಗಿ ಮನಸ್ಸಿನ ಇಚ್ಛೆಗೆ ಅನುಗುಣವಾಗಿ ನಡೆದುಹೋಗಿರುತ್ತದೆ. ಇನ್ನು ಕೆಲವು ಹುಡುಗರಿಗೆ, ಹುಡುಗಿಯ ಮನೆಯವರು ತನ್ನನ್ನು ಒಪ್ಪಿಕೊಳ್ಳಬಹುದೆ ಅಥವಾ ಆಸ್ತಿ-ಅಂತಸ್ತನ್ನು ಗಮನಿಸುತ್ತಾರೋ, ತಮಗೆ ಉದ್ಯೋಗ ಸಿಕ್ಕದೇ ಹೋದಲ್ಲಿ ನಿರಾಕರಿಸಬಹುದೆ, ಎಂಬ ಆಲೋಚನೆಗಳು ತಲೆಯಲ್ಲಿ ಸುತ್ತುತ್ತವೆ. ಇದು ಸಹಜ. ಹೆಚ್ಚಿನವರಿಗೆ ಮನೆಯಲ್ಲಿ ನಮ್ಮ ಪ್ರೀತಿಯ ವಿಷಯವನ್ನು ಪ್ರಸ್ತಾಪಿಸುವುದು ಹೇಗೆ? ಇದು ಅಸಾಧ್ಯವಾದ ಮಾತು ಎಂಬ ಆಲೋಚನೆಗಳು ಕಾಡುತ್ತವೆ.
ಪ್ರೀತಿ-ಪ್ರೇಮದ ಬಲೆಗೆ ಬೀಳುವ ಮೊದಲು ಎಲ್ಲರೂ ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕಾಗುತ್ತದೆ. ಓದುತ್ತಿರುವಾಗಲೇ ಉದ್ಯೋಗದ ಕಡೆಗೂ ಗಮನಹರಿಸಬೇಕು. ಏನಾದರೂ ಸಾಧನೆ ಮಾಡಬೇಕು, ಓದುತ್ತಿರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ನಡೆಸಬೇಕು. ಓದು ಮುಗಿದ ತಕ್ಷಣ ಯಾವುದಾದರೂ ಸರಿ, ಉದ್ಯೋಗ ಸಿಕ್ಕಿದರೆ ಅದಕ್ಕೆ ಹೋಗಿಬಿಡಬೇಕು. ಹೀಗೆ, ಮಾಡುವುದರಿಂದ ಭವಿಷ್ಯದ ಕನಸು ನನಸಾಗಲು ಸಾಧ್ಯ. ಜತೆಗೆ ತಾವು ಬಯಸಿದವರೂ ಕೂಡ ಸಿಗುತ್ತಾರೆ.
ಇಂದಿನ ಸಮಾಜದಲ್ಲಿ ಓದು ಮುಗಿದ ತತ್‌ಕ್ಷಣ ಹುಡುಗಿಯನ್ನು ಅವಳು ಪ್ರೀತಿ ಮಾಡಿದ್ದಾಳೆ ಎಂಬ ಕಾರಣಕ್ಕಾಗಿ ಯಾವನಾದರೂ ಒಬ್ಬ ಸಾಮಾನ್ಯ ಹುಡುಗನಿಗೆ ಕೊಡಲು ಒಪ್ಪುವುದಿಲ್ಲ. ಹುಡುಗನ ಗುಣನಡತೆ, ಉದ್ಯೋಗ ಎಲ್ಲವನ್ನೂ ನೋಡುತ್ತಾರೆ. ಆದ್ದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೀತಿ-ಪ್ರೇಮದ ಮೊದಲು ವಾಸ್ತವ ಬದುಕಿನ ಅರಿವು ಇರಬೇಕಾಗುತ್ತದೆ. ಪ್ರೀತಿ ಮಾಡುವುದು ತಪ್ಪೇನೂ ಅಲ್ಲ, ಆದರೆ, ಪ್ರೀತಿಸಿದ್ದೇ ಆದರೆ, ಮುಂದೆ ಜೊತೆಯಾಗಿ ಬಾಳುವ ಗಟ್ಟಿ ನಿರ್ಧಾರವೂ ಅಷ್ಟೇ ಮುಖ್ಯ.
ಶ್ರೀಕಾಂತ್, ತೃತೀಯ ಬಿ.ಕಾಂ. ವಿವೇಕಾನಂದ ಪದವಿಪೂರ್ವ ಕಾಲೇಜು, ಪುತ್ತೂರು.