ಬಳ್ಳಾರಿ: ಕೋವಿಡ್ 19 ಸೋಂಕಿತ ಶವಗಳನ್ನು ಎಳೆದು, ಬಿಸಾಡಿ ಅಂತ್ಯಸಂಸ್ಕಾರ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಮುಂದಾಗಿದೆ. ಜಿಲ್ಲೆಯಲ್ಲಿ 3 ದಿನದಿಂದ ಕೋವಿಡ್ ಸೋಂಕಿಗೆ ಮೃತಪಟ್ಟಿರುವವರ ಸಂಖ್ಯೆ ಹೆಚ್ಚಾಗಿದೆ.
ಭಾನುವಾರ 4, ಸೋಮವಾರ 10, ಮಂಗಳವಾರ 5 ಸೇರಿ ಇಲ್ಲಿವರೆಗೆ 29 ಜನರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶವಗಳನ್ನು ಅಂತ್ಯಸಂಸ್ಕಾರ ಮಾಡುತ್ತಿರುವ ಸಿಬ್ಬಂದಿ ಸ್ಮಶಾನದಲ್ಲಿ ಶವಗಳನ್ನು ಎಳೆದು ತಂದು ಕುಣಿಯಲ್ಲಿ ಬಿಸಾಡಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಪರ- ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನಮ್ಮ ಜಿಲ್ಲೆಯದ್ದಾಗಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಹಿರಂಗ ಕ್ಷಮೆಯಾಚನೆ: ಸಂಜೆ ವೇಳೆಗೆ ಜಿಲ್ಲಾಧಿಕಾರಿಗಳು ಘಟನೆ ಕುರಿತಂತೆ ಬಹಿರಂಗ ಕ್ಷಮೆಯಾಚಿಸಿದರು.
ಶವ ಮುಟ್ಟೋಕೆ ಭಯ!: ಕೋವಿಡ್ ಆಸ್ಪತ್ರೆ ಸಿಬ್ಬಂದಿ ಹೇಳುವಂತೆ ಜಿಲ್ಲೆಯಲ್ಲಿ ಸೋಮವಾರ 8 ಜನರು ಕೋವಿಡ್ ಸೋಂಕಿಗೆ ಮೃತಪಟ್ಟಿದ್ದಾರೆ. ಮಂಗಳವಾರ 5 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. 2-3 ದಿನದ ಹಿಂದೆ ಮೃತಪಟ್ಟ ಶವಗಳನ್ನು ಸೋಮವಾರ ಮಧ್ಯಾಹ್ನ ಶವಸಂಸ್ಕಾರ ಮಾಡಲಾ ಗಿದೆ. ಇದನ್ನು ನಮ್ಮಲ್ಲೇ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಎರಡು ದಿನದ ಶವಗಳನ್ನು ಫ್ರೀಜರ್‌ನಲ್ಲಿಟ್ಟಿದ್ದರು. ಬಹಳ ಭಾರವಾಗಿರುತ್ತವೆ. ನಮ್ಮ ಕೆಲಸ ಮಾಡೋದಕ್ಕೆ ಯಾರಿಂದಲೂ ಆಗುವುದಿಲ್ಲ. ಯಾರೂ ಡೆಡ್ ಬಾಡಿಗಳನ್ನು ಮುಟ್ಟುವುದಿಲ್ಲ. ನಮಗೂ ಸೋಂಕು ಆವರಿಸುವ ಭಯದಿಂದ ಆ ರೀತಿ ಅವಸರದಲ್ಲಿ ಮಾಡಿರುತ್ತೇವೆ. ವಾರದಿಂದ ನಮ್ಮ ಕೆಲಸ ಇದೇ ಆಗಿದ್ದು, ಸಾಕಾಗಿದೆ ಎಂದು ಜಿಲ್ಲಾಡಳಿತ, ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ ಹೆಸರು ಹೇಳಲಿಚ್ಛಿಸದ ಸಿಬ್ಬಂದಿ.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಸಿಬ್ಬಂದಿ ನಡವಳಿಕೆ ಅತ್ಯಂತ ಅಮಾನವೀಯ ಹಾಗೂ ತೀವ್ರ ನೋವಿನ ಸಂಗತಿ. ಕೋವಿಡ್ ಸೋಂಕಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ, ಸೋಂಕಿತರ ಅಂತ್ಯಸಂಸ್ಕಾರವನ್ನು ಗೌರವದಿಂದ ನೆರವೇರಿಸಿ ಎಂದು ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿನಂತಿಸುತ್ತೇನೆ.
-ಬಿ.ಎಸ್.ಯಡಿಯೂರಪ್ಪ, ಸಿಎಂ