Advertisement

ಸಂಪೂರ್ಣ ಹದಗೆಟ್ಟ ಹೆಬ್ರಿ ಸರಕಾರಿ ಪ್ರಾಥಮಿಕ ಶಾಲೆ ರಸ್ತೆ

09:18 PM Aug 21, 2019 | mahesh |

ಹೆಬ್ರಿ: ಹೆಬ್ರಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆಯು ಹೊಂಡಗುಂಡಿಗಳಿಂದ ಕೂಡಿ ಸಂಪೂರ್ಣ ಹದಗೆಟ್ಟಿದ್ದು ವಿದ್ಯಾರ್ಥಿಗಳ ಹೆತ್ತವರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ರಸ್ತೆಯಲ್ಲೇ ಹರಿಯುವ ನೀರು
ರಸ್ತೆಯ ಸಮೀಪದಲ್ಲೆ ಶಾಲಾ ಆಟದ ಮೈದಾನವಿದ್ದು ಮಳೆ ನೀರು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಹರಿಯುತ್ತಿರುವ ಪರಿಣಾಮ ರಸ್ತೆ ಹದಗೆಟ್ಟಿದೆ. ಅಲ್ಲದೆ ನೀರಿನ ರಭಸಕ್ಕೆ ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್‌ಗಾಗಿ ಅಳವಡಿಸಿದ ಇಂಟಾರ್‌ಲಾಕ್‌ಗಳು ಹಾನಿಗೊಂಡಿವೆ.

ಪಕ್ಕದಲ್ಲೇ ತಾಲೂಕು ಕಚೇರಿ
ನೂತನವಾಗಿ ರಚನೆಗೊಂಡ ಹೆಬ್ರಿ ತಾಲೂಕಿಗೆ ತಾತ್ಕಾಲಿಕವಾಗಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ತಾಲೂಕು ಕಚೇರಿಯನ್ನಾಗಿ ಮಾಡಿದ್ದು ಕಚೇರಿ ಕೆಲಸಗಳಿಗೆ ಇದೇ ಮಾರ್ಗದಲ್ಲಿ ನಿತ್ಯ ಜನ ಓಡಾಡುತ್ತಿದ್ದು ಸಮಸ್ಯೆಯಾಗಿ ಪರಿಣಮಿಸಿದೆ.

ಎಚ್ಚರ ತಪ್ಪಿದರೆ ಆನಾಹುತ
ಈ ಮಾರ್ಗ ತೀರಾ ಕಿರಿದಾಗಿದ್ದು ದಿನನಿತ್ಯ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಈ ರಸ್ತೆಯ ಮೂಲಕವೇ ಓಡಾಟ ನಡೆಸುತ್ತಾರೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದು ಸ್ಥಳೀಯರ ಆರೋಪ.

ಕಳೆದ ಬಾರಿ ಹೆಬ್ರಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಹೆಬ್ರಿ ಗ್ರಾಮ ಪಂಚಾಯತ್‌ ಈ ರಸ್ತೆಯ ಎರಡೂ ಬದಿಗಳಲ್ಲಿ ಇಂಟರ್‌ಲಾಕ್‌ ಅಳವಡಿಸಿ ದ್ವಿಚಕ್ರವಾಹನದ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದೆ. ಆದರೇ ತೀರಾ ಇಕ್ಕಟ್ಟಾದ ರಸ್ತೆಯ ಬದಿಯಲ್ಲಿ ವಾಹನಗಳು ನಿಲ್ಲುವುದರಿಂದ ಅಲ್ಲಲ್ಲಿ ಕಸದ ರಾಶಿ ಹೆಚ್ಚಾಗಿ ನೀರು ಹರಿದು ಹೋಗದೆ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಅಲ್ಲದೆ ರಸ್ತೆಯ ಇಕ್ಕಲೆಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆಯನ್ನೂ ಮಾಡುವುದರಿಂದ ಸಮೀಪದಲ್ಲಿಯೇ ಇರುವ ಶಾಲೆಯ ವರೆಗೆ ವಾಸನೆ ಬರುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದು ಮಕ್ಕಳ ಹೆತ್ತವರ ದೂರು.

ಗ್ರಾಮ ಸಭೆಯಲ್ಲಿ ಪ್ರಸ್ತಾವ
ಶಾಲಾ ರಸ್ತೆ ಆದ್ದರಿಂದ ಮಕ್ಕಳಿಗೆ ತೊಂದರೆಯಾಗ ಬಾರದು ಎಂಬ ನಿಟ್ಟಿನಲ್ಲಿ ರಸ್ತೆಯಲ್ಲೆ ಹರಿಯುತ್ತಿರುವ ನೀರಿನ ಬಗ್ಗೆ ಗ್ರಾಮ ಸಭೆಯಲ್ಲಿ ಪಂಚಾಯತ್‌ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಪಂಚಾಯತ್‌ ಪರಿಶೀಲನೆ ನಡೆಸಿದೆ. ಪಾರ್ಕಿಂಗ್‌ ಜಾಗ, ಶಾಲಾ ಮೈದಾನ ಮತ್ತು ವಠಾರದಲ್ಲಿ ರಾತ್ರಿ ಹೊತ್ತು ಪಡ್ಡೆ ಹುಡುಗರು ಮದ್ಯಪಾನ ಮಾಡಿ ಶಾಲಾ ವಠಾರ ಗಲೀಜು ಮಾಡುತ್ತಿರುವ ಬಗ್ಗೆ ಹೆಬ್ರಿ ಠಾಣೆಗೆ ದೂರು ನೀಡಲಾಗಿದೆ.
-ಚಂಪಕ, ಮುಖ್ಯ ಶಿಕ್ಷಕಿ, ಸ.ಮಾ.ಹಿ.ಪ್ರಾ. ಶಾಲೆ ಹೆಬ್ರಿ

ಪ್ರಸ್ತಾವನೆ ಸಲ್ಲಿಕೆ
ರಸ್ತೆ ಸಂಪೂರ್ಣ ಹದಗೆಟ್ಟ ಬಗ್ಗೆ ಜಿ.ಪಂ. ಸದಸ್ಯರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ಈ ಬಗ್ಗೆ ಶಾಸಕರ ಗಮನಕ್ಕೂ ತಂದಿದ್ದು ಶೀಘ್ರ ದುರಸ್ತಿ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.
-ಎಚ್‌.ಕೆ. ಸುಧಾಕರ, ಅಧ್ಯಕ್ಷರು ಗ್ರಾ.ಪಂ. ಹೆಬ್ರಿ

– ಉದಯಕುಮಾರ್‌ ಶೆಟ್ಟಿ ಹೆಬ್ರಿ

Advertisement

Udayavani is now on Telegram. Click here to join our channel and stay updated with the latest news.

Next