Advertisement

ರಾಜ್ಯದಲ್ಲಿ ಹರತಾಳ ಪೂರ್ಣ

02:18 PM Apr 07, 2017 | Team Udayavani |

ಕಾಸರಗೋಡು: ಪಾಂಬಾಡಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಜಿಷ್ಣು ಪ್ರಣೋಯ್‌ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ತಮಗೆ ಪೂರ್ಣ ನ್ಯಾಯ ಲಭಿಸಬೇಕೆಂದು ಬೇಡಿಕೆಯನ್ನು ಮುಂದಿಟ್ಟು ಜಿಷ್ಣುವಿನ ತಾಯಿ ಮಹಿಜಾ ಮತ್ತು ಸಂಬಂಧಿಕರು ತಿರುವನಂತಪುರದಲ್ಲಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿ ಮುಂದೆ ಎ.5 ರಂದು ನಿರಾಹಾರ ಸತ್ಯಾಗ್ರಹದಲ್ಲಿ ತೊಡಗಿದ ಸಂದರ್ಭದಲ್ಲಿ ಪೊಲೀಸರು ಆಕೆಯನ್ನು ರಸ್ತೆಯಲ್ಲೇ ಎಳೆದುಕೊಂಡು ಹೋಗಿ ದೌರ್ಜನ್ಯವೆಸಗಿದ ಹೇಯ ಕೃತ್ಯವನ್ನು ಪ್ರತಿಭಟಿಸಿ ಯುಡಿಎಫ್‌ ಮತ್ತು ಬಿಜೆಪಿ ನೇತೃತ್ವದಲ್ಲಿ ಗುರುವಾರ ರಾಜ್ಯದಾದ್ಯಂತ ನಡೆದ ಹರತಾಳ ಪೂರ್ಣಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.

Advertisement

ಕಾಸರಗೋಡು ಜಿಲ್ಲೆಯಲ್ಲಿ ಹರತಾಳ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಕುಂಬಳೆ, ಪನತ್ತಡಿ ಮತ್ತು ಕಳ್ಳಾರು ಗ್ರಾಮ ಪಂಚಾಯತ್‌ಗಳನ್ನು ಹರತಾಳದಿಂದ ಹೊರತುಪಡಿಸಲಾಗಿತ್ತು. ಜಿಲ್ಲೆಯ ಇತರೆಡೆಗಳಲ್ಲಿ ಹರತಾಳ ಪೂರ್ಣಗೊಂಡಿದೆ. ಹರತಾಳದಿಂದ ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್‌ ಸಂಚಾರ ಸಂಪೂರ್ಣವಾಗಿ ಮೊಟಕುಗೊಂಡಿತು. ಅಂಗಡಿಮುಂಗಟ್ಟುಗಳು ಮುಚ್ಚಿಕೊಂಡಿತ್ತು. ಚಂದ್ರಗಿರಿ ರೂಟ್‌ನಲ್ಲಿ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಪೊಲೀಸ್‌ ಬೆಂಗಾವಲಿನಲ್ಲಿ ಸರ್ವೀಸ್‌ ನಡೆಸಿದವು.

ಹರತಾಳದಿಂದ ಅಂಗಡಿಗಳು, ಹೊಟೇಲ್‌ಗ‌ಳು ಮುಚ್ಚಿಕೊಂಡಿತ್ತು. ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಬಹಳಷ್ಟು ಕಡಿಮೆ ಇತ್ತು. ಬ್ಯಾಂಕ್‌ ಮೊದಲಾದವು ತೆರೆಯಲಿಲ್ಲ. ಕೆಲವೊಂದು ಆಟೋ ರಿಕ್ಷಾಗಳು ಬಿಟ್ಟರೆ ರಸ್ತೆಯಲ್ಲಿ ವಾಹನಗಳು ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿತ್ತು. ಹರತಾಳ ಶಾಂತಿಯುತವಾಗಿ ನಡೆದಿದ್ದು ಅಹಿತಕರ ಘಟನೆ ವರದಿಯಾಗಿಲ್ಲ.

ಹರತಾಳಕ್ಕೆ ಕರೆ ನೀಡಿರುವ ಯುಡಿಎಫ್‌ ಮತ್ತು ಬಿಜೆಪಿ ಕಾರ್ಯಕರ್ತರು ಹಲವೆಡೆಗಳಲ್ಲಿ ಮೆರವಣಿಗೆ ನಡೆಸಿದರು. ಕಾಸರಗೋಡು ನಗರದಲ್ಲಿ ಬಿಜೆಪಿ ಮತ್ತು ಯುವಮೋರ್ಚಾ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next