Advertisement
ಇಲ್ಲಿನ ಅಜೆಕಾರಿನ ದೆಪ್ಪುತ್ತೆ ಗುಂಡ್ಯಡ್ಕ ನಿವಾಸಿ ರತ್ನಾಕರ ಪೂಜಾರಿ ಅವರ ಗೂಡಂಗಡಿಯ ಮುಂದೆ ಮಾಟಕ್ಕೆ ಬಳಸಿರುವ ಲಿಂಬೆ ಹಣ್ಣು, ತೆಂಗಿನ ಕಾಯಿ, ಕುಂಬಳ ಕಾಯಿ, ಕುಂಕುಮ ಮೊದಲಾದ ವಸ್ತುಗಳು ಕಂಡುಬಂದಿದ್ದು, ಕೋಳಿಯನ್ನು ಕಡಿದಿರುವ ರಕ್ತದ ಕುರುಹು ಕೂಡ ಕಂಡುಬಂದಿದೆ.
ರತ್ನಾಕರ ಪೂಜಾರಿ ಅವರ ಹಿರಿಯ ಸಹೋದರಿಯ ಅಳಿಯ ಸಚ್ಚರಿಪೇಟೆಯ ದರ್ಶನಪಾತ್ರಿ ಗೋಪಾಲ ಪೂಜಾರಿ ವೈಯಕ್ತಿಕ ಹಗೆ ತೀರಿಸಲು ಈ ಮಾಟ ಮಾಡಿರಬಹುದು ಎಂದು ಶಂಕಿಸಿ ರತ್ನಾಕರ ಪೂಜಾರಿ ಅವರು, ಗೋಪಾಲ ಪೂಜಾರಿ ವಿರುದ್ದ ಅಜೆಕಾರು ಠಾಣೆಗೆ ದೂರು ನೀಡಿದ್ದಾರೆ. ಗೋಪಾಲ ಪೂಜಾರಿ ದರ್ಶನಪಾತ್ರಿ, ಆರೂಢ ಪ್ರಶ್ನೆ ಹಾಕುವ ವೃತ್ತಿ ನಿರ್ವಹಿಸುತ್ತಿದ್ದು ಒಳ್ಳೆಯ ಹೆಸರು ಪಡೆದಿದ್ದ .ಈತನೇ ತನ್ನ ಮೇಲೆ ಹಗೆ ತೀರಿಸಿಕೊಳ್ಳಲು ಈ ಕೃತ್ಯ ಎಸಗಿರಬಹುದು ಎಂದು ರತ್ನಾಕರ ಪೂಜಾರಿ ಶಂಕೆ ವ್ಯಕ್ತಪಡಿಸಿದ್ದಾರೆ. ಅಪರಿಚಿತ ವ್ಯಕ್ತಿ ಬಗ್ಗೆ ಶಂಕೆ
ರತ್ನಾಕರ ಪೂಜಾರಿ ಅವರ ಅಂಗಡಿಯ ಬಳಿ ಬುಧವಾರ ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ನಿಂತಿದ್ದು ಅವನೇ ಮಾಟ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಅಪರಿಚಿತನ ಮುಖ ಚಹರೆ ಗೋಪಾಲ ಪೂಜಾರಿಯನ್ನು ಹೋಲುತ್ತಿರುವ ಕುರಿತು ರತ್ನಾಕರ ಪೂಜಾರಿ ಅನುಮಾನಿಸಿದ್ದಾರೆ.