Advertisement

ನಾಲ್ಕು ಜಿಲ್ಲೆಗಳಿಗೆ ಬಂತು 29,500 ಡೋಸ್‌ ಕೋವಿಶೀಲ್ಡ್‌

04:23 PM Jan 15, 2021 | Team Udayavani |

ಕಲಬುರಗಿ: ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಶ್ರಮಿಸಿದ ವಾರಿಯರ್ಸ್‌ಗೆ ಪ್ರಥಮ ಹಂತದಲ್ಲಿ ಲಸಿಕೆ ನೀಡುವ ನಿಟ್ಟಿನಲ್ಲಿ ಜಿಲ್ಲೆಗೆ ಗುರುವಾರ 29,500 ಡೋಸ್‌ ಕೋವಿಶೀಲ್ಡ್‌ ಲಸಿಕೆ ಆಗಮಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳಿಗೆ ಹಂಚಿಕೆಯಾಗಲಿದೆ.

Advertisement

ಬೆಂಗಳೂರಿನಿಂದ ಮಿನಿ ಟ್ರಕ್‌ನಲ್ಲಿ ಕೋವಿಶೀಲ್ಡ್‌ ಲಸಿಕೆ ಪೊಲೀಸ್‌ ಭದ್ರತೆಯಲ್ಲಿ ಕಲಬುರಗಿಗೆ ತರಲಾಗಿದ್ದು, ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಕೋಲ್ಡ್‌ ರೂಮ್‌ನಲ್ಲಿ ದಾಸ್ತಾನು ಮಾಡಲಾಗಿದೆ. ಬೆಂಗಳೂರಿನಿಂದಲೇ ಪೊಲೀಸರ ಭದ್ರತೆಯಲ್ಲಿ ಬಂದ ಲಸಿಕೆಯನ್ನು ಯಾದಗಿರಿ ಜಿಲ್ಲೆಯ ಶಹಾಪುರ ಗಡಿಯಲ್ಲಿ ಕಲಬುರಗಿ ಪೊಲೀಸರ ಭದ್ರತೆ ಒದಗಿಸಿ ವ್ಯಾಕ್ಸಿನ್‌ ತರಲಾಯಿತು.

ಗುರುವಾರ ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಕಚೇರಿ ಆವರಣಕ್ಕೆ ವಾಹನ ಬರುತ್ತಿದ್ದಂತೆ ಪೂಜೆ ಸಲ್ಲಿಸಲಾಯಿತು. ಡಿಎಚ್‌ಒ ಡಾ.ರಾಜಶೇಖರ್‌ ಮಾಲಿ, ಆರ್‌ಸಿಎಚ್‌ಒ ಡಾ.ಪ್ರಭುಲಿಂಗ ಮಾನಕರ ಹಾಗೂ ಹಿರಿಯ ಅಧಿಕಾರಿಗಳು ಹೂವಿನ ಹಾರ ಹಾಕಿ, ತೆಂಗಿನಕಾಯಿ ಒಡೆದು ಸೀಲ್‌ ಮಾಡಲಾಗಿದ್ದ ಬೀಗ ತೆಗೆದು ಲಸಿಕೆ ಇಳಿಸಿಕೊಂಡರು. ಒಟ್ಟು 29,500 ಡೋಸ್‌ ಕೋವಿಶೀಲ್ಡ್‌ ಲಸಿಕೆಯಲ್ಲಿ ಕಲಬುರಗಿ ಜಿಲ್ಲೆಗೆ 12 ಸಾವಿರ ಡೋಸ್‌, ರಾಯಚೂರು ಜಿಲ್ಲೆಗೆ 9 ಸಾವಿರ
ಡೋಸ್‌, ಬೀದರ್‌ ಜಿಲ್ಲೆಗೆ 5,500 ಡೋಸ್‌ ಮತ್ತು ಯಾದಗಿರಿ ಜಿಲ್ಲೆಗೆ 3 ಸಾವಿರ ಡೋಸ್‌ ಹಂಚಿಕೆಯಾಗಿದೆ. ಗುರುವಾರ ಸಂಜೆಯೇ ಆಯಾ ಜಿಲ್ಲೆಗಳ ಆರೋಗ್ಯ ಇಲಾಖೆಯವರು ಲಸಿಕೆಯನ್ನು ಕೊಂಡೊಯ್ದರು.

ಅರ್ಧದಷ್ಟು ಲಸಿಕೆ ಲಭ್ಯ: ಕೊರೊನಾ ನಿಯಂತ್ರಣಕ್ಕಾಗಿ ಹೋರಾಟ ನಡೆಸಿದ ಸರ್ಕಾರಿ ಮತ್ತು ಖಾಸಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸ್ಟಾಫ್‌ ನರ್ಸ್‌ಗಳು, ಲ್ಯಾಬ್‌ ತಂತ್ರಜ್ಞರು, ಡಿ-ಗ್ರೂಪ್‌ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮೊದಲ ಲಸಿಕೆ  ಫಲಾನುಭವಿಗಳಾಗಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಲಸಿಕೆ ಫಲಾನುಭವಿಗಳ ವಿವರ ಸಂಗ್ರಹಿಸಿ, ಅವರ ಗುರುತಿನ ಚೀಟಿ ಸಮೇತ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ ಲೋಡ್‌ ಮಾಡಿದ್ದಾರೆ. ಪಟ್ಟಿ ಮಾಡಿರುವ ಒಟ್ಟು ವಾರಿಯರ್ಸ್‌ಗಳ ಅರ್ಧದಷ್ಟು ಲಸಿಕೆಯನ್ನು ಜಿಲ್ಲೆಗಳಿಗೆ ಪೂರೈಸಲಾಗಿದೆ.

ಕಲಬುರಗಿ ಜಿಲ್ಲೆಗೆ 23,110 ಡೋಸ್‌, ರಾಯಚೂರು ಜಿಲ್ಲೆಗೆ 18,310 ಡೋಸ್‌, ಬೀದರ್‌ ಜಿಲ್ಲೆಗೆ ಡೋಸ್‌ ಮತ್ತು 11,180 ಡೋಸ್‌, ಮತ್ತು ಯಾದಗಿರಿ ಜಿಲ್ಲೆಗೆ 6 ಸಾವಿರ ಡೋಸ್‌ ಪೂರೈಸಲು ಸರ್ಕಾರ ಮುಂದಾಗಿದೆ. ಉಳಿದ ಡೋಸ್‌ ಲಸಿಕೆ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಜತೆಗೆ ಆರೋಗ್ಯ ಸಿಬ್ಬಂದಿ ಜತೆಗೆ ಮುಂಚೂಣಿಯಲ್ಲಿ ಹೋರಾಟ ನಡೆಸಿದ ಪೊಲೀಸರು, ಪೌರ ಕಾರ್ಮಿಕರು, ಅಬಕಾರಿ ಇಲಾಖೆ ಸಿಬ್ಬಂದಿಗೆ ಎರಡನೇ ಹಂತದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳ ಮಾಹಿತಿ.

Advertisement

137 ಕೇಂದ್ರ, 775 ಸಿಬ್ಬಂದಿ
ಕೋವಿಶೀಲ್ಡ್‌ ಲಸಿಕೆ ವಿತರಣೆಗೆ ಜಿಲ್ಲಾದ್ಯಂತ 137 ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಲಸಿಕೆ ಅಭಿಯಾನಕ್ಕಾಗಿ 155 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ತಲಾ ಐವರಂತೆ ಒಟ್ಟಾರೆ 775 ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಡಿಎಚ್‌ಓ ಡಾ.ರಾಜಶೇಖರ್‌ ಮಾಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 21,774 ಆರೋಗ್ಯ ಕಾರ್ಯಕರ್ತೆಯರು ವಿವರ ಸಂಗ್ರಹಿಸಲಾಗಿದ್ದು, ತಲಾ ಒಂದು ಡೋಸ್‌ನಂತೆ ಲಸಿಕೆ ಕೊಡಲಾಗುತ್ತದೆ. ಜಿಲ್ಲೆಗೆ ಸದ್ಯ 12 ಸಾವಿರ ಡೋಸ್‌ ಪೂರೈಕೆಯಾಗಿದ್ದು, ಅಷ್ಟೂ ಡೋಸ್‌ ವಿತರಣೆಗೆ ಕ್ರಮ ವಹಿಸಲಾಗಿದೆ. ಜಿಮ್ಸ್‌ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ, ನಗರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 10 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಜ.18ರಂದು ಎಲ್ಲ ಕೇಂದ್ರಗಳಲ್ಲಿ ಲಸಿಕೆ ನೀಡಲು ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ನಾಳೆ ಎಂಟು ಕಡೆ ವಿತರಣೆ
ಕೋವಿಶೀಲ್ಡ್‌ ಲಸಿಕೆ ಪೂರೈಕೆ ಆಗುತ್ತಿದ್ದಂತೆ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜ.16ರಂದು ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ಲಸಿಕೆ ವಿತರಣೆಗೆ ಪ್ರಧಾನಿ ಚಾಲನೆ ನೀಡಲಿದ್ದು, ನಂತರ ಜಿಲ್ಲೆಯಲ್ಲಿ ಲಸಿಕೆ ವಿತರಣೆ ಆರಂಭವಾಗಲಿದೆ. ಅಂದು ನಗರದ ಜಿಮ್ಸ್‌ ವೈದ್ಯಕೀಯ ಕಾಲೇಜು, ಆರು ತಾಲೂಕು ಆಸ್ಪತ್ರೆಗಳು ಮತ್ತು ಅಫಜಲಪುರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next