Advertisement
ಜಯನಗರ 5ನೇ ಬ್ಲಾಕ್, ಮಾರೇನಹಳ್ಳಿ ಕೆರೆ ಅಂಗಳದಲ್ಲಿ ರಾಜು ಎಂಬುವವರು ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿರುವುದರಿಂದ ಪಾಯ ಸಡಿಲಗೊಂಡು ಕಟ್ಟಡ ವಾಲಿದೆ. ಇದರಿಂದ ತೀವ್ರ ಆತಂಕಕ್ಕೊಳಗಾದ ಸುತ್ತಮುತ್ತಲಿನ ಮನೆಯವರು ಮನೆಗಳನ್ನು ಖಾಲಿ ಮಾಡಿ ಬೀದಿಯಲ್ಲಿ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ನಷ್ಟವಾದರೆ ಪಾಲಿಕೆ ಹೊಣೆಯಲ್ಲ!: ಕಳೆದ ನಾಲ್ಕೈದು ತಿಂಗಳಿಂದ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಇದೀಗ ವಾಲಿಕೊಂಡ ಕಟ್ಟಡವು ಅಕ್ಕ ಪಕ್ಕದ ಮನೆಗಳ ಮೇಲೆ ಉರುಳಿ ಬಿದ್ದು, ಆಸ್ತಿ ನಷ್ಟವಾದರೆ ಅದಕ್ಕೆ ಪಾಲಿಕೆ ಹೊಣೆಯಲ್ಲ ಎಂಬ ನೋಟಿಸ್ ಜಾರಿಗೊಳಿಸಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಯುಕ್ತರ ಮಾತಿಗೆ ಕ್ಯಾರೇ ಎನ್ನದ ಅಧಿಕಾರಿಗಳು: ಕಳೆದ ವರ್ಷ ಬೆಳ್ಳಂದೂರು ಗೇಟ್ ಬಳಿ ಕಾನೂನು ಬಾಹಿರವಾಗಿ ಹಾಗೂ ಕಳಪೆ ಸಾಮಗ್ರಿಗಳನ್ನು ಬಳಸಿ ಕಟ್ಟಡ ನಿರ್ಮಿಸಿದ್ದರಿಂದ ಕಟ್ಟಡ ಕುಸಿದು ಹಲವು ಜನ ಪ್ರಾಣ ಕಳೆದುಕೊಂಡಿದ್ದರು. ಈ ವೇಳೆ ಬಿಬಿಎಂಪಿ ಆಯುಕ್ತರು ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮಾಲೀಕರು ನಿಯಮಗಳನ್ನು ಪಾಲಿಸುತ್ತಿರುವ ಹಾಗೂ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಈವರೆಗೆ ವರದಿ ಸಲ್ಲಿಕೆಯಾಗಿಲ್ಲ.
ನಗರದಲ್ಲಿ ಕಟ್ಟಡ ನಿರ್ಮಾಣ ನಿಯಮಗಳ ಉಲ್ಲಂಘನೆಗೆ ಪಾಲಿಕೆಯ ಆಯುಕ್ತರು ಪರೋಕ್ಷವಾಗಿ ಬೆಂಬಲಿಸುತ್ತಾರೆ ಎಂಬ ಆರೋಪವಿದೆ. ಅದಕ್ಕೆ ಪೂರಕವೆಂಬಂತೆ ಕೆಲವೊಂದು ವಾರ್ಡ್‌ಗಳಲ್ಲಿ ಪಾಲಿಕೆಯ ಅಧಿಕಾರಿಗಳೇ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವಂತೆ ಮಾಲೀಕರಿಗೆ ಪ್ರೋತ್ಸಾಹಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಆ ಹಿನ್ನೆಲೆಯಲ್ಲಿ ನಿಯಮ ಬಾಹಿರ ಕಟ್ಟಡಗಳ ಮಾಹಿತಿ ನೀಡುವಂತೆ ಆಯುಕ್ತರು ವರದಿ ಕೇಳಿದರೂ ಅಧಿಕಾರಿಗಳು ಈವರೆಗೆ ಅದಕ್ಕೆ ಮುಂದಾಗದಿರುವುದು ಪಾಲಿಕೆಯ ದುರಾಡಳಿತಕ್ಕೆ ಹಿಡಿತ ಕನ್ನಡಿಯಾಗಿದೆ.
ಹಲವು ತಿಂಗಳುಗಳಿಂದ ಕಟ್ಟಡ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿದ್ದರೂ, ಅದನ್ನು ತಡೆಯಲು ಅಧಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ. ಹೀಗಾಗಿ ಸಂಬಂಧಿಸಿದ ಸಹಾಯಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳ ಅಮಾನತಿಗೆ ಆದೇಶ ಹೊರಡಿಸಲಾಗುವುದು.-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು