ತೆಕ್ಕಟ್ಟೆ: ಹಿಂದಿನ ಕೇಂದ್ರದ ಯುಪಿಎ ಡಾ| ಮನಮೋಹನ್ ಸಿಂಗ್ ಸರಕಾರ ಇಡೀ ದೇಶದಲ್ಲಿಯೇ ಉತ್ತಮವಾದ ಮೀನು ಮಾರುಕಟ್ಟೆ ನಿರ್ಮಾಣ ಮಾಡಬೇಕು ಎನ್ನು ವ ದೃಷ್ಟಿಯಿಂದ ಎಷ್ಟೇ ಕೋಟಿ ರೂಪಾಯಿ ವೆಚ್ಚದ ಮೀನು ಮಾರುಕಟ್ಟೆಯಾಗಿದ್ದರು ಕೂಡಾ ಶೇ.90 ರಷ್ಟು ಭಾಗ ಕೇಂದ್ರ ಸರಕಾರ ಕೊಡುತ್ತೇವೆ ಎನ್ನುವ ಯೋಜನೆಯನ್ನು ತಂದು ಇಂದು ದೇಶದ ಬೇರೆ ಬೇರೆ ಕಡೆಗಳಲ್ಲಿ ಮೀನು ಮಾರುಕಟ್ಟೆಯನ್ನು ಪ್ರಾರಂಭ ಮಾಡಲಿಕ್ಕೆ ಅಡಿಪಾಯವನ್ನು ಹಾಕಿದವರು ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಸರಕಾರ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಮಾ. 9ರಂದು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ನಿ.) ಮಂಗಳೂರು, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ (ಎನ್‌ಎಫ್‌ಡಿಬಿ) ಹೈದರಾಬಾದ್ ಮತ್ತು ಮೀನುಗಾರಿಕೆ ಇಲಾಖೆ ನೀಡಿದ ಅನುದಾನದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸಿದ ಸುಮಾರು ರೂ. 43 ಲಕ್ಷ ವೆಚ್ಚದ ನೂತನ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಉಡುಪಿಯಲ್ಲಿ ಸುಮಾರು 2 ಕೋಟಿ 55 ಲಕ್ಷ ರೂ. ವೆಚ್ಚದ ಮಹಿಳಾ ಮೀನು ಮಾರುಕಟ್ಟೆಯನ್ನು ಉದ್ಘಾಟನೆ ಮಾಡಿದ್ದೇನೆ ಇದು ಇಡೀ ದೇಶದಲ್ಲಿಯೇ ಅತೀ ದೊಡ್ಡ ಮೀನು ಮಾರುಕಟ್ಟೆ ಎನ್ನುವ ಹೆಮ್ಮೆ ನಮಗಿದೆ. ಆದರೆ ಈಗ ಬಂದ ಕೇಂದ್ರ ಮೋದಿ ಸರಕಾರ ಶೇ.90 ರಷ್ಟು ಭಾಗವನ್ನು ತೆಗೆದು ಶೇ.50 ಕ್ಕೆ ಇಳಿಸಿದ್ದು ಇನ್ನು ಮುಂದೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೇರಿ ಮೀನು ಮಾರುಕಟ್ಟೆಯನ್ನು ನಿರ್ಮಿಸಲು ಸಾಧ್ಯವಾಗದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಸಮ್ಮಾನಿಸಲಾಯಿತು.
ತೆಕ್ಕಟ್ಟೆ ಗ್ರಾ.ಪಂ. ಅಧ್ಯಕ್ಷ ಶೇಖರ ಕಾಂಚನ್ ಕೊಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿ ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ಪುತ್ರನ್, ತೆಕ್ಕಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಾ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಹಿರಿಯಣ್ಣ, ವಿಕಾಸ ಹೆಗ್ಡೆ, ರಮೇಶ್ ಕುಮಾರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ನಿ.) ಮಂಗಳೂರು ಇದರ ಅಧ್ಯಕ್ಷ ರಾಜೇಂದ್ರ ವಿ.ನಾಯ್ಕ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ನಿ.) ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಶೆಟ್ಟಿ, ಗುತ್ತಿಗೆದಾರ ಎಚ್.ಗೋಪಾಲ್ ಶೆಟ್ಟಿ ಹೊಸಮಠ ಕೊರ್ಗಿತೆಕ್ಕಟ್ಟೆ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.
ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಕಾಂಚನ್ ಕೊಮೆ ಸ್ವಾಗತಿಸಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ನಿ.) ಮಂಗಳೂರು ಇದರ ಅಧ್ಯಕ್ಷ ರಾಜೇಂದ್ರ ವಿ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಶೆಟ್ಟಿ ನಿರೂಪಿಸಿ, ವಂದಿಸಿದರು.
ಮಲ್ಲಿಗೆಯ ಹಾರವನ್ನು ಮಹಿಳಾ ಮೀನುಗಾರರಿಗೆ ನೀಡಿದ ಸಚಿವರು
ತೆಕ್ಕಟ್ಟೆಯಲ್ಲಿ ನೂತನ ಸುಸಜ್ಜಿತ ಮೀನು ಮಾರುಕಟ್ಟೆಯ ಉದ್ಘಾಟನೆಗಾಗಿ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಸಭೆಯ ಶಿಷ್ಟಾಚಾರದಂತೆ ಸ್ವಾಗತಿಸಿ ಮಲ್ಲಿಗೆ ಹೂವಿನ ಹಾರ ಹಾಕಿದಾಗ ಸಚಿವರು ತನಗೆ ಹಾಕಿರುವ ಮಲ್ಲಿಗೆ ಹೂವಿನ ಹಾರವನ್ನು ಸಭೆಯಿಂದ ಇಳಿದು ಬಂದು ಕಾರ್ಯಕ್ರಮದ ಮುಂದಿನ ಸಾಲಿನಲ್ಲಿ ಕುಳಿತಿದ್ದ ಮಹಿಳಾ ಮೀನುಗಾರರಿಗೆ ನೀಡುವ ಮೂಲಕ ನೆರೆದವರ ಗಮನ ಸೆಳೆದರು.