Advertisement

ಆರ್ಥಿಕತೆಯ ಅಡಿಪಾಯ ಸದೃಢ; ಟೀಕಾಕಾರರಿಗೆ ಪ್ರಧಾನಿ ಉತ್ತರ

07:20 AM Oct 23, 2017 | Team Udayavani |

ದಹೇಜ್‌ (ಗುಜರಾತ್‌): ಅಪನಗದೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಆರ್ಥಿಕ ಬೆಳವಣಿಗೆ ಕೊಂಚ ಕುಂಠಿತವಾಗಿದ್ದರೂ, ಭಾರತದ ಆರ್ಥಿಕತೆಯ ಮೂಲ ಅಡಿಪಾಯ ಇನ್ನೂ ಗಟ್ಟಿಯಾಗಿಯೇ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ತಿಳಿಸಿದರು.   

Advertisement

ಇತ್ತೀಚೆಗೆ, ಗುಜರಾತ್‌ಗೆ ಭೇಟಿ ನೀಡಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, “”ಅಪನಗದೀಕರಣ ಹಾಗೂ ಜಿಎಸ್‌ಟಿಯ ದುಷ್ಪರಿಣಾಮದಿಂದಾಗಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ. 5.7ಕ್ಕೆ ಇಳಿದಿದೆ” ಎಂದು ಟೀಕಿಸಿದ್ದರು. ರಾಹುಲ್‌ ಸೇರಿದಂತೆ ವಿರೋಧ ಪಕ್ಷಗಳ ಟೀಕೆಗೆ ಮೋದಿ ಇದೇ ಮೊದಲ ಬಾರಿ ಉತ್ತರಿಸಿದ್ದಾರೆ.

“”ದೃಢ ಆರ್ಥಿಕ ನಿರ್ಧಾರಗಳಿಂದ ಕಲ್ಲಿದ್ದಲು, ವಿದ್ಯುತ್‌, ನೈಸರ್ಗಿಕ ಅನಿಲ ಹಾಗೂ ಇನ್ನಿತರ ಕ್ಷೇತ್ರಗಳ ಉತ್ಪಾದನಾ ಸಾಮರ್ಥ್ಯ ಗಣನೀಯ ವಾಗಿ ಹೆಚ್ಚಿದೆ. ದಾಖಲೆಯ ಮಟ್ಟದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ. ವಿದೇಶಿ ವಿನಿಮಯ ಮೀಸಲು ನಿಧಿಯು 30 ಸಾವಿರ ಕೋಟಿ ಡಾಲರ್‌ಗಳಿಂದ 40 ಸಾವಿರ ಕೋಟಿ ಡಾಲರ್‌ಗಳಿಗೆ ಹಿಗ್ಗಿದೆ. ಜಿಎಸ್‌ಟಿಯಿಂದ ಭ್ರಷ್ಟಾಚಾರ ನಿಯಂತ್ರಣವಾಗಿದೆ” ಎಂದರು. 

ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಜಿಎಸ್‌ಟಿಯಲ್ಲಿ ನೊಂದಾಯಿಸಿಕೊಳ್ಳುತ್ತಿ ರುವುದನ್ನು ಮೆಚ್ಚಿದ ಮೋದಿ, ಜಿಎಸ್‌ಟಿಗೆ ಸ್ವಯಂ ನೋಂದಾಯಿತರಾಗುವ ವ್ಯಾಪಾರಿಗಳ ಪೂರ್ವಾಪರ ವ್ಯವಹಾರಗಳನ್ನು ಕೆದಕುವುದಿಲ್ಲ ಎಂದು ವಾಗ್ಧಾನ ನೀಡಿದರು. 

ಇದೇ ವೇಳೆ, ಗುಜರಾತ್‌ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸದ ಚುನಾವಣಾ ಆಯೋಗ ಮೋದಿ ಆಣತಿಯಂತೆ ವರ್ತಿಸುತ್ತಿದೆ ಎಂದಿದ್ದ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರಿಗೆ ಉತ್ತರಿಸಿದ ಮೋದಿ, “ಮರುಮತ ಎಣಿಕೆಯಲ್ಲಿ ಚುನಾವಣೆ ಗೆದ್ದವರು’ ಟೀಕೆ ಮಾಡುವುದು ಸಲ್ಲ ಎಂದು ಚುಚ್ಚಿದರು. 

Advertisement

ವಿಕಾಸ ವಿರೋಧಿಗಳಿಗೆ ನಯಾಪೈಸೆ ನೀಡಲ್ಲ
“ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎಂಬ ಧ್ಯೇಯದೊಂದಿಗೆ ಕೇಂದ್ರಸರಕಾರ ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ. ಇದನ್ನು ವಿರೋಧಿಸುತ್ತಿರುವವರು ಇರುವ ರಾಜ್ಯಗಳಿಗೆ ಬಿಡಿಗಾಸನ್ನೂ ನೀಡುವುದಿಲ್ಲ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ. ಈ ಮೂಲಕ, ಬಿಜೆಪಿ ವಿರೋಧ ಪಕ್ಷಗಳು ಆಡಳಿತವಿರುವ ಯಾವುದೇ ರಾಜ್ಯಕ್ಕೆ ಯಾವುದೇ ಆರ್ಥಿಕ ಸಹಾಯ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. 

ರೊ-ರೊ ಸೇವೆ ಉದ್ಘಾಟನೆ
ಗುಜರಾತ್‌ನ ಭಾವಾನಗರ್‌ನ ಘೋಘಾದಿಂದ ಬಾರುಚ್‌ ಜಿಲ್ಲೆಯ ದಹೇಜ್‌ಗೆ ಸಾಗರ ಸಂಪರ್ಕ ಕಲ್ಪಿಸಲು ನೆರವಾಗುವ “ರೋಲ್‌-ಆನ್‌, ರೋಲ್‌-ಆಫ್’ ಮಿನಿ ಹಡಗು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ದಹೇಜ್‌ನಲ್ಲಿ ಉದ್ಘಾಟಿಸಿ, ಮೊದಲ ಯಾನದಲ್ಲಿ ಖುದ್ದು ಪ್ರಯಾಣಿಸಿದರು. ಈ ಹೊಸ ಸೇವೆಯಿಂದಾಗಿ ಸೌರಾಷ್ಟ್ರದಿಂದ ದಕ್ಷಿಣ ಗುಜರಾತ್‌ ನಡುವಿನ ಪ್ರಯಾಣದ ಅವಧಿ 5 ಗಂಟೆಗಳಷ್ಟು ಇಳಿಕೆಯಾಗಲಿದೆ. ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಏಷ್ಯಾದಲ್ಲೇ ಇಂಥದ್ದೊಂದು ಸೇವೆ ನೀಡಲಾಗು ತ್ತಿರುವುದು ಇದೇ ಮೊದಲು.

Advertisement

Udayavani is now on Telegram. Click here to join our channel and stay updated with the latest news.

Next