Advertisement

ಪಾಲಿಕೆ ಮಾಜಿ ಸದಸ್ಯ ಮಾದೇಶ್‌ ಆಸ್ತಿ ಮುಟ್ಟುಗೋಲು

11:42 AM Jul 19, 2017 | |

ಮೈಸೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಗರ ಪಾಲಿಕೆ ಮಾಜಿ ಸದಸ್ಯ ಸಿ.ಮಹದೇಶ(ಅವ್ವ ಮಾದೇಶ) ಸಮಾಜಘಾತುಕ ಕೃತ್ಯಗಳಿಂದ ಅಕ್ರಮವಾಗಿ ಸಂಪಾದಿಸಿದ್ದ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಿ.ಮಹದೇಶ ಹಾಗೂ ಆತನ ಸಹೋದರ ಸಿ.ಮಂಜು ಇಬ್ಬರೂ ಬಳ್ಳಾರಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Advertisement

ಈ ಇಬ್ಬರು ಕೊಲೆ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳು ಹಾಗೂ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿ ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ ಹಣ ಮತ್ತು ಆಸ್ತಿ ಸಂಪಾದನೆ ಮಾಡಿದ್ದರು. ಈ ಹಿನ್ನೆಲೆ ಇಬ್ಬರು ಆರೋಪಿಗಳು ಅಕ್ರಮವಾಗಿ ಗಳಿಸಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಗರ ಪೊಲೀಸರು ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಕೋರಿಕೆ ಪತ್ರ ಸಲ್ಲಿಸಿದ್ದರು.

ಈ ಹಿನ್ನೆಲೆ ಪೊಲೀಸರು ಸಲ್ಲಿಸಿದ್ದ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಜಾರಿ ನಿರ್ದೇಶನಾಲಯ ಆರೋಪಿಗಗಳು ಮೈಸೂರು ನಗರದ 12 ಕಡೆಗಳಲ್ಲಿ ಅಕ್ರಮವಾಗಿ ಸಂಪಾದಿಸಿದ್ದ ಜಮೀನು ಹಾಗೂ ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 5.35 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಷ್ಟೇ ಅಲ್ಲದೆ ಇಬ್ಬರೂ ಇದೇ ರೀತಿ ಸಂಪಾದಿಸಿರುವ ಆಸ್ತಿಗಳ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮುಂದುವರೆಸಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್‌ ತಿಳಿಸಿದರು. 

ಕೋಕಾ ಕಾಯ್ದೆಯಡಿ ತನಿಖೆ: 2008ರಲ್ಲಿ ನಡೆದಿದ್ದ ಹುಣಸೂರು ಜೋಡಿ ಕೊಲೆ ಪ್ರಕರಣ ಹಾಗೂ 2016ರಲ್ಲಿ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್‌ ದೇವೇಂದ್ರ ಕೊಲೆ ಪ್ರಕರಣದಲ್ಲಿ ಅವ್ವ ಮಾದೇಶ, ಆತನ ಸಹೋದರ ಮಂಜು ಸೇರಿದಂತೆ ಹಲವು ಮಂದಿ ಭಾ ಗಿಯಾಗಿದ್ದರು. ಈ ನಡುವೆ ಪ್ರಕರಣದ ತೀವ್ರತೆ ಅರಿತ ಪೊಲೀಸರು ಕೋಕಾ ಕಾಯ್ದೆಯಡಿ ತನಿಖೆ ನಡೆಸುವ ಮೂಲಕ ಒಟ್ಟು 28 ಆರೋಪಿಗಳ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಆರೋಪಿಗಳಾದ ಅವ್ವ ಮಾದೇಶ ಹಾಗೂ ಸಿ.ಮಂಜು ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸಲಾಗಿದೆ. ಇದು ನಗರದಲ್ಲಿ ವಸೂಲಿ ಹಾಗೂ ರೌಡಿ ಚಟುವಟಿಕೆಗಳಿಂದ ಅಕ್ರಮವಾಗಿ ಆಸ್ತಿ ಸಂಪಾದಿಸುತ್ತಿರುವವರಿಗೆ ಎಚ್ಚರಿಕೆಯಾಗಿದ್ದು, ಹೀಗಾಗಿ ಮುಂದೆ ಸಮಾಜಘಾತುಕ ಚಟುವಟಿಕೆಗಳ ಮೂಲಕ ಅಕ್ರಮವಾಗಿ ಹಣ ಸಂಪಾದಿಸುವವರ ವಿರುದ್ಧ ಕೋಕಾ ಕಾಯ್ದೆಯಲ್ಲಿ ತನಿಖೆ ನಡೆಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
-ಡಾ.ಸುಬ್ರಹ್ಮಣ್ಯೇಶ್ವರ ರಾವ್‌, ನಗರ ಪೊಲೀಸ್‌ ಆಯುಕ್ತ.

Advertisement
Advertisement

Udayavani is now on Telegram. Click here to join our channel and stay updated with the latest news.

Next