ಚನ್ನಪಟ್ಟಣ: ಕಾಡಾನೆಗಳ ಹಾವಳಿಯಿಂದಾಗಿ ರೈತರ ಬೆಳೆ ನಷ್ಟವಾಗಿ ಬದುಕು ಕಷ್ಟವಾಗಿದೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ತನವೇ ನೇರ ಕಾರಣ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ರಾಮು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜೆ.ಸಿ.ರಸ್ತೆಯಲ್ಲಿರುವ ತಾಲೂಕು ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಾಲೂಕಿನಲ್ಲಿ ಕಾಡಾನೆ ಹಾವಳಿ ಬಹುದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲಗೊಂಡಿದೆ.ತಾಲೂಕಿನಲ್ಲಿ ಅರಣ್ಯ ಇಲಾಖೆ ಬದುಕಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದು ಆರೋಪಿಸಿದರು.
ಬೀಗ ಹಾಕುತ್ತೇವೆ: ತಾಲೂಕಿನ ಕೋಂಡಬಹಳ್ಳಿ ಭಾಗದಲ್ಲಿ ನಡೆಯುತ್ತಿರುವ ಕಾಡಾನೆಗಳ ಹಾವಳಿಯನ್ನು ತಕ್ಷಣ ತಪ್ಪಿಸದಿದ್ದಲ್ಲಿ ತಾಲೂಕಿನ ರೈತರು ಒಗ್ಗೂಡಿ, ಅರಣ್ಯ ಇಲಾಖೆಗೆ ಮುತ್ತಿಗೆ ಹಾಕುವ ಜತೆಗೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ. ಕಾಡಾನೆಗಳು ಒಂದು ವಾರದಿಂದ ರೈತರ ಬೆಳೆಯನ್ನು ನಿರಂತರವಾಗಿ ಹಾನಿ ಮಾಡುತ್ತಿವೆ. ಆನೆಗಳನ್ನು ಮತ್ತೆ ಕಾಡಿಗೆ ಹಿಂದಿರುಗಿಸುವ ಜವಾಬ್ದಾರಿ ಹೊತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳ ಹೊಣೆಗೇಡಿ ತನಕ್ಕೆ ರೈತ ಸಂಘ ತಕ್ಕ ಪಾಠ ಕಲಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆನೆ ಇಲ್ಲಿಗೆ ಏಕೆ ಬಂತು: ವನ್ಯ ಜೀವಿ ಪ್ರದೇಶದಲ್ಲಿ ಆನೆಗಳಿಗೆ ಬೇಕಾದ ಮೇವು, ನೀರು ಸೇರಿದಂತೆ ಮೂಲಸೌಕರ್ಯಕಲ್ಪಿಸಿದ್ದರೆ ಈ ಆನೆಗಳ ಹಿಂಡುನಾಡಿನತ್ತ ಯಾಕೆ ಬರುತ್ತಿದ್ದವು. ಕಾಡಿನಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದು, ಆನೆಗಳ ಕಾರಿಡಾರ್ ಅಡ್ಡಿ ಮಾಡಿದ್ದರಿಂದ ರೈತರು ಸಮಸ್ಯೆ ಅನುಭವಿಸುವಂತಾಗಿದೆ. ಇದಕ್ಕೆ ಯಾರು ಹೊಣೆ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಸೂಕ್ತ ಪರಿಹಾರ ನೀಡಿ: ಆನೆ ದಾಳಿಯಿಂದ ರೈತರ ಬೆಳೆ ನಷ್ಟವಾದಲ್ಲಿ ಅದಕ್ಕೆ ವೈಜ್ಞಾನಿಕವಾಗಿ ಲೆಕ್ಕಾಚಾರ ಹಾಕಿ ಪರಿಹಾರ ನೀಡಬೇಕು. ಅಧಿಕಾರಿಗಳು ಬೇಕಾಬಿಟ್ಟು ಪರಿಹಾರ ನೀಡಿ, ಮೊದಲೇ ನೊಂದಿರುವ ರೈತರನ್ನು ಮತ್ತೆ ನೋಯಿಸುತ್ತಿದ್ದಾರೆ. ಇವರು ನೀಡುವ ಪರಿಹಾರಕ್ಕೆ ಅರ್ಜಿ ಹಿಡಿದು ಅರಣ್ಯ ಇಲಾಖೆ ಅಲೆದು ಅಲೆದು ಸಾಕಾಗುತ್ತದೆ. ಇದನ್ನು ತಪ್ಪಿಸಿ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ, ತಾಲೂಕು ಅಧ್ಯಕ್ಷ ರಾಮೇಗೌಡ, ಕಾರ್ಯಾಧ್ಯಕ್ಷ ಗುರುಲಿಂಗಯ್ಯ, ಜಿಲ್ಲಾ ಉಪಾಧ್ಯಕ್ಷ ತಿಮ್ಮೇಗೌಡ ಹಾಜರಿದ್ದರು.