ಪಲ್ಲೆಕಿಲೆ: “ನಮಗೀಗ ಗೆಲುವಿನ ಸೂತ್ರವೇ ಮರೆತು ಹೋಗಿದೆ…!’ ಈ ಒಂದೇ ಸಾಲಿನಿಂದ ಲಂಕೆಯ ಏಕದಿನ ಸರಣಿ ಸೋಲಿಗೆ ಕಾರಣವಿತ್ತವರು ಉಸ್ತುವಾರಿ ನಾಯಕ ಚಾಮರ ಕಪುಗೆಡರ. ರವಿವಾರ ಪಲ್ಲೆಕಿಲೆಯಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್‌ಗಳಿಂದ ಶರಣಾದ ಬಳಿಕ ಕಪುಗೆಡರ ಇಂಥದೊಂದು ಹೇಳಿಕೆ ನೀಡಿದ್ದಾರೆ.
“ನಮಗೆ ಹೊರಗಿನ ಸಮಸ್ಯೆಗಳೇನೂ ಇಲ್ಲ. ನನ್ನ ಪ್ರಕಾರ ಗೆಲುವಿನ ಸೂತ್ರವೇ ನಮಗೆಲ್ಲ ಮರೆತು ಹೋಗಿದೆ. ಇಂಥ ಗಂಡಾಂತರ ಸ್ಥಿತಿ ಅನೇಕ ತಂಡಗಳಿಗೆ ಎದುರಾಗಿದ್ದನ್ನು ಕಂಡಿದ್ದೇನೆ. ಸತತವಾಗಿ ಸೋಲುತ್ತಿದ್ದ ತಂಡವೊಂದು ಇನ್ನೇನು ಗೆಲುವನ್ನು ಸಮೀಪಿಸಿದ ಹಂತದಲ್ಲೇ ಈ ಹರ್ಡಲ್ಸ್ ದಾಟುವಲ್ಲಿ ವಿಫಲವಾಗುತ್ತದೆ. ಇದು ಗೆಲುವಿನ ಸೂತ್ರವನ್ನು ಮರೆತಿರುವ ತಂಡವೊಂದರ ಸ್ಥಿತಿ. ಸದ್ಯ ನಾವೂ ಇದೇ ಸ್ಥಿತಿಯಲ್ಲಿದ್ದೇವೆ. ನಮಗೀಗ ತುರ್ತಾಗಿ ಬೇಕಿರುವುದು ಒಂದೇ ಒಂದು ಗೆಲುವು. ಇಲ್ಲಿಂದಾಚೆ ತಂಡ ಹೊಸ ಹುಟ್ಟು ಕಾಣಲು ಸಾಧ್ಯ ಎಂಬ ನಂಬಿಕೆ ಇದೆ…’ ಎಂಬುದಾಗಿ ಕಪುಗೆಡರ ಹೇಳಿದರು.
“ಮರಳಿ ಹಳಿ ಏರುವುದು ಹೇಗೆ ಎಂಬ ಕುರಿತು ನಾವು ಸಾಕಷ್ಟು ಚರ್ಚೆ ನಡೆಸಿದ್ದೇವೆ. ಕಳೆದೆರಡು ಪಂದ್ಯಗಳಲ್ಲಿ ನಮ್ಮ ಬೌಲಿಂಗ್ ಚೆನ್ನಾಗಿಯೇ ಇತ್ತು. ಆದರೆ ಬ್ಯಾಟ್ಸ್‌ಮನ್‌ಗಳಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಹೊರಹೊಮ್ಮುತ್ತಿಲ್ಲ. ಇವರಿಂದ ದೊಡ್ಡ ಮೊತ್ತ ಸಂಗ್ರಹಗೊಂಡಲ್ಲಿ ಜಯ ಒಲಿಯುವುದು ಅಸಾಧ್ಯವೇನಲ್ಲ…’ ಎಂದು ಕಪುಗೆಡರ ಅಭಿಪ್ರಾಯಪಟ್ಟರು.
ರೋಹಿತ್-ಧೋನಿ ಅಜೇಯ ಆಟ: ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 9 ವಿಕೆಟಿಗೆ ಕೇವಲ 217 ರನ್ ಗಳಿಸಿದರೆ, ಭಾರತ 45.1 ಓವರ್‌ಗಳಲ್ಲಿ 4 ವಿಕೆಟಿಗೆ 218 ರನ್ ಬಾರಿಸಿ ಸರಣಿ ವಶಪಡಿಸಿಕೊಂಡಿತು.
ಆರಂಭಕಾರ ರೋಹಿತ್ ಶರ್ಮ ಅವರ ಅಜೇಯ ಶತಕ, ಅವರು ಧೋನಿ ಜತೆ ಮುರಿಯದ 5ನೇ ವಿಕೆಟಿಗೆ ಪೇರಿಸಿದ 157 ರನ್ ಸಾಹಸದಿಂದ ಭಾರತ ಸುಲಭ ಜಯ ಸಾಧಿಸಿತು. ಟೀಮ್ ಇಂಡಿಯಾದ ಜಯಭೇರಿ ವೇಳೆ ರೋಹಿತ್ ಶರ್ಮ 124 ರನ್ (145 ಎಸೆತ, 16 ಬೌಂಡರಿ, 2 ಸಿಕ್ಸರ್) ಹಾಗೂ ಧೋನಿ 67 ರನ್ ಮಾಡಿ (86 ಎಸೆತ, 4 ಬೌಂಡರಿ, 1 ಸಿಕ್ಸರ್) ಅಜೇಯರಾಗಿದ್ದರು. ಧವನ್ (5), ಕೊಹ್ಲಿ (3). ರಾಹುಲ್ (17) ಮತ್ತು ಜಾಧವ್ (0) ವಿಕೆಟ್ 61 ರನ್ ಆಗುವಷ್ಟರಲ್ಲಿ ಉದುರಿ ಹೋದಾಗ ಲಂಕೆಗೆ ಮೇಲುಗೈ ಸಾಧಿಸುವ ಅವಕಾಶ ಎದುರಾಗಿತ್ತು. ಆದರೆ ಇದನ್ನು ಬಳಸಿಕೊಳ್ಳುವಲ್ಲಿ ಲಂಕಾ ಬೌಲರ್‌ಗಳು ವಿಫಲರಾದರು.
27 ರನ್ನಿಗೆ 5 ವಿಕೆಟ್ ಹಾರಿಸಿದ ಜಸ್‌ಪ್ರೀತ್ ಬುಮ್ರಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.