ಬೆಂಗಳೂರು: “ಬೇಲಿಯೇ ಎದ್ದು ಹೊಲ ಮೇಯ್ದ ಕತೆಯಿದು! ಅನುಕಂಪದ ಆಧಾರದಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದ ದ್ವೀತಿಯ ದರ್ಜೆ ಸಹಾಯಕಿ (ಎಸ್‌ಡಿಎ), ಅಬಕಾರಿ ಇಲಾಖೆ ಉಪ ಆಯುಕ್ತರ ಸಹಿಯನ್ನೇ ನಕಲು ಮಾಡಿ ಒಂದು ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಶ್ವೇಶ್ವರಯ್ಯ ಟವರ್‌ನಲ್ಲಿರುವ ಅಬಕಾರಿ ಆಯುಕ್ತರ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಶೋಭಾರಾಣಿ (30) ವಂಚಕಿ.
ಹಿರಿಯ ಅಧಿಕಾರಿಯ ಸಹಿ, ಸೀಲು ನಕಲು ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿರುವುದು ಪತ್ತೆಯಾಗುತ್ತಿದ್ದಂತೆ ಫೆ.8ರಂದು ಆರೋಪಿ ಶೋಭಾಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಲ್ಲದೆ ಈ ಕುರಿತು ಅಬಕಾರಿ ಡಿವೈಎಸ್‌ಪಿ ವೀಣಾ ಅವರು ನೀಡಿದ ದೂರಿನ ಮೇರೆಗೆ, ಶೋಭಾರಾಣಿ ವಿರುದ್ಧ ಅಧಿಕಾರ ದುರ್ಬಳಕೆ, ವಂಚನೆ ಆರೋಪ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು, ಆಕೆಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೋಭಾಳ ತಂದೆ ಏಳು ವರ್ಷಗಳ ಹಿಂದೆ ಅಕಾಲಿಕ ಮರಣ ಹೊಂದಿದ ನಂತರ ಅನುಕಂಪದ ಆಧಾರದಲ್ಲಿ ಶೋಭಾಗೆ ಎಸ್‌ಡಿಎ ಹುದ್ದೆ ನೀಡಲಾಗಿತ್ತು. ಅಬಕಾರಿ ಇಲಾಖೆ ಉಪ ಆಯುಕ್ತರ ಕಚೇರಿ, ನಗದು ವರ್ಗಾವಣೆ ಸೇರಿ ಹಲವು ಜವಾಬ್ದಾರಿಗಳನ್ನು ಶೋಭಾ ನಿರ್ವಹಿಸುತ್ತಿದ್ದಳು. ಈ ಮಧ್ಯೆ ಕಳೆದ ವರ್ಷ ಜುಲೈ 5ರಂದು ಉಪ ಆಯುಕ್ತರ ಸಹಿ ಹಾಗೂ ಸೀಲುಗಳನ್ನು ನಕಲಿ ಮಾಡಿ, ರಾಜ್ಯ ಖಜಾನೆಯಿಂದ ಮೊದಲ ಬಾರಿಗೆ 24,600 ರೂ.ಗಳನ್ನು ತನ್ನ ವೈಯಕ್ತಿಕ ಎಸ್‌ಬಿಐ ಖಾತೆಗೆ ಶೋಭಾ ವರ್ಗಾವಣೆ ಮಾಡಿಕೊಂಡಿದ್ದಳು.
ಈ ವಿಚಾರ ಉಪ ಆಯುಕ್ತರ ಗಮನಕ್ಕೆ ಬಾರದ ಕಾರಣ ಗಣ ವರ್ಗಾವಣೆಯಾಗಿದ್ದು ಬೆಳಕಿಗೆ ಬಂದಿರಲಿಲ್ಲ. ಇದರಿಂದ ಮತ್ತೂಮ್ಮೆ ಧೈರ್ಯ ಮಾಡಿದ ಶೋಭಾ, ಅಕ್ಟೋಬರ್ 13ರಂದು ಮೊದಲು 49,144 ರೂ. ನಂತರ 37,500 ರೂ.ಗಳನ್ನು ತನ್ನ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾಳೆ ಎಂದು ಡಿವೈಎಸ್‌ಪಿ ದೂರಿನಲ್ಲಿ ವಿವರಿಸಿದ್ದಾರೆ.
ವಂಚಕಿ ಸಿಕ್ಕಿಬಿದ್ದಿದ್ದು ಹೇಗೆ?: ಕೆಲ ದಿನಗಳ ಹಿಂದೆ ಉಪಆಯುಕ್ತರು ಕಚೇರಿಗೆ ಸಂಬಂಧಿಸಿದ ಹಣಕಾಸು ವ್ಯವಹಾರದ ದಾಖಲೆಗಳನ್ನು ಪರಿಶೀಲಿಸಿದ್ದು, ತಮ್ಮದೇ ಹೆಸರಿನಲ್ಲಿ ಬೇರೊಂದು ಬ್ಯಾಂಕ್ ಖಾತೆಗೆ 1.11 ಲಕ್ಷ ರೂ. ವರ್ಗಾವಣೆ ಆಗಿರುವುದು ಗೊತ್ತಾಗಿದೆ.
ಕೂಡಲೇ ಕಚೇರಿ ಸಿಬ್ಬಂದಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಶೋಭಾ ಖಾತೆಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಆಕೆಯ ವಿಚಾರಣೆ ನಡೆಸಿ, ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಆರೋಪಿ ಶೋಭಾ, ಈ ಹಿಂದೆಯೂ ಇದೇ ರೀತಿ ಸರ್ಕಾರಕ್ಕೆ ವಂಚಿಸಿದ್ದಾಳೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.