ಚಿಂಚೋಳಿ: ಕುಂಚಾವರಂ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆ ಕಾಂಕ್ರಿಟ್ ತೊಟ್ಟಿಗಳನ್ನು ನಿರ್ಮಿಸಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರಿಂದ, ಪ್ರಾಣಿಗಳ ನೀರಿನ ದಾಹ ತಣಿಯುತ್ತಿದೆ.
ವನ್ಯಜೀವಿಧಾಮ ಅರಣ್ಯಪ್ರದೇಶದ ಗೊಟ್ಟಂಗೊಟ್ಟ, ಸೇರಿಭಿಕನಳ್ಳಿ, ಮಂಡಿ ಬಸವಣ್ಣ, ಲಾಲ ತಲಾಬ, ಬುರುಗದೊಡ್ಡಿ, ಚಿಕ್ಕನಿಂಗದಳ್ಳಿ, ಚಂದ್ರಂಪಳ್ಳಿ ಭಾಗದಲ್ಲಿ ದಟ್ಟದಾದ ಗಿಡಮರಗಳ ಆಸರೆಯಲ್ಲಿ ಜೀವಿಸುತ್ತಿರುವ ಕಾಡು ಪ್ರಾಣಿಗಳಿಗಾಗಿ ನಿರ್ಮಿಸಿದ ತೊಟ್ಟಿಗಳಲ್ಲಿ ನೀರು ತುಂಬಿಸುತ್ತಿರುವ ಕೆಲಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಯಾವಾಗಲೂ ತುಂಬಿ ಹರಿಯುವ ಕೋತ್ವಾಲ ನಾಲಾ, ಎತ್ತಪೋತಾ ಜಲಪಾತಗಳಲ್ಲಿ ಹರಿಯುವ ನೀರನ್ನು ಕುಡಿದು ಬದುಕುತ್ತಿದ್ದ ಕಾಡು ಪ್ರಾಣಿಗಳು ನೀರಿಲ್ಲದೇ ಕಂಗಾಲಾಗಿದ್ದವು. ಸದ್ಯ ಅರಣ್ಯ ಇಲಾಖೆ ಕ್ರಮದಿಂದ ಬಾಯಾರಿಕೆ ನೀಗಿಸಿಕೊಳ್ಳುತ್ತಿವೆ.
ವಸಂತ ಖುತುವಿನಲ್ಲಿ ಗಿಡ-ಮರಗಳ ಎಲೆಗಳು ಉದುರಿ ಹೋಗಿದ್ದರಿಂದ ಕಾಡು ಪ್ರಾಣಿಗಳು ನೆರಳಿನ ಆಸರೆ ಇಲ್ಲದೇ, ಬೇಟೆಗಾರರ ಕಣ್ಣಿಗೆ ಕಾಣಿಸದೇ ದೊಡ್ಡ ಕಲ್ಲುಬಂಡೆಗಳ ಮಧ್ಯೆ, ಗಿಡಗಂಟಿಗಳ ಪೊದೆಯಲ್ಲಿ ಕಾಲ ಕಳೆಯುತ್ತಿವೆ. ಸೂರ್ಯಾಸ್ತ ಆಗುತ್ತಿದ್ದಂತೆ ತೊಟ್ಟಿಯಲ್ಲಿ ಹಾಕಿದ ನೀರನ್ನು ಕುಡಿಯಲು ಓಡೋಡಿ ಬಂದು ದಾಹ ನೀಗಿಸಿಕೊಳ್ಳುತ್ತಿವೆ. ಭಾರತ ಕ್ರಿಕೆಟ್ ತಂಡದ ಮಾಜಿ ಅಧ್ಯಕ್ಷ ಅನೀಲ ಕುಂಬ್ಳೆ ರಾಜ್ಯ ವನ್ಯಜೀವಿಧಾಮ ಸಂರಕ್ಷಣೆ ಮಂಡಳಿ ಉಪಾಧ್ಯಕ್ಷರಾಗಿದ್ದಾಗ 2011ರಲ್ಲಿ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶಕ್ಕೆ ಭೇಟಿ ನೀಡಿ ವನ್ಯಜೀವಿಧಾಮ ಅರಣ್ಯಪ್ರದೇಶವೆಂದು ಘೋಷಿಸಲು ಸರಕಾರಕ್ಕೆ ಶಿಫಾರಸು ಮಾಡಿದ್ದರು. ಅನಂತರ ಕಳೆದ ಎಂಟು ವರ್ಷಗಳಿಂದ ವನ್ಯಜೀವಿ ಧಾಮದಲ್ಲಿ ಚುಕ್ಕೆ ಜಿಂಕೆ, ಕಾಡುಹಂದಿ, ಮೊಲ, ಸಾರಂಗ, ಚಿಪ್ಪು ಹಂದಿ, ನವಿಲು, ಕಾಡು ಕುರಿ ಹಾಗೂ ವಿವಿಧ ಬಗೆಯ ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ. ಈಗ ಕಾಡು ಪ್ರಾಣಿಗಳಿಗೆ ಕುಡಿಯಲು ನೀರು ಪೂರೈಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಸೇವೆ ಮೆಚ್ಚುಗೆಗೆ ಕಾರಣವಾಗಿದೆ.
ಕಾಡು ಪ್ರಾಣಿಗಳು ನೀರಿನ ತೊಟ್ಟಿಗೆ ಬಂದು ನೀರು ಕುಡಿಯುತ್ತಿರುವುದನ್ನು ಪ್ರತಿನಿತ್ಯ ಸಂಜೆ ನೋಡುತ್ತೇವೆ. ಇದರಿಂದ ಸಂತೋಷ ಆಗುತ್ತದೆ.
ಸಿದ್ಧಾರೂಢ ಹೊಕ್ಕುಂಡಿ, ಉಪ ವಲಯ ಅರಣ್ಯಾಧಿಕಾರಿ
ಕಾಡು ಪ್ರಾಣಿಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಅರಣ್ಯದಲ್ಲಿ ಹೆಚ್ಚು ಪ್ರಾಣಿಗಳಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮಾನವಿಯ ತೆಯಿಂದ ಕೆಲಸ ಮಾಡುತ್ತಿದ್ದಾರೆ.
ಸಂಜೀವಕುಮಾರ ಚವ್ಹಾಣ, ವಲಯ ವನ್ಯಜೀವಿಧಾಮ ಅರಣ್ಯಾಧಿಕಾರಿ, ಕುಂಚಾವರಂ
ಸಂಜೀವಕುಮಾರ ಚವ್ಹಾಣ, ವಲಯ ವನ್ಯಜೀವಿಧಾಮ ಅರಣ್ಯಾಧಿಕಾರಿ, ಕುಂಚಾವರಂ
ಶಾಮರಾವ ಚಿಂಚೋಳಿ