Advertisement
ಹೌದು, ಶ್ರೀಗಂದಧ ಗುಡಿ ಎಂದೇ ವಿಶ್ವಭೂಪಟದಲ್ಲಿ ಗುರುತಿಸಿ ಕೊಂಡಿರುವ ಕರುನಾಡಿನ ಅರಣ್ಯ ಸಂಪತ್ತು ನಿರ್ವಹಣೆಗೆ ಅಗತ್ಯ ಸಿಬಂದಿ ಇಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ. ಇಲಾಖೆಯಲ್ಲಿನ ಸಿಬಂದಿ ಕೊರತೆಯು ವಿವಿಧ ಮೂಲಗಳಿಂದ ವನ್ಯಜೀವಿ ಮತ್ತು ಅರಣ್ಯ ಸಂಪತ್ತು ನಾಶಕ್ಕೆ ಕಾರಣವಾ ಗಿದೆ. ಕಾಡನ್ನು ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿ ರುವ 731 ಅರಣ್ಯ ರಕ್ಷಕ (ಫಾರೆಸ್ಟ್ ಗಾರ್ಡ್) ಹುದ್ದೆಗಳು ಕಳೆದ 3 ವರ್ಷಗಳಿಂದ ಭರ್ತಿಯಾಗಿಲ್ಲ.
ಪಶ್ಚಿಮ ಘಟ್ಟದ ಪಾಲು
ಕರ್ನಾಟಕವು 1,91,791 ಚದರ ಕಿ.ಮೀ. ಭೂಭಾಗ ಹೊಂದಿದ್ದು, ಈ ಪೈಕಿ 38,724 ಚ.ಕಿ.ಮೀ. ಅರಣ್ಯ ಪ್ರದೇಶಗಳಿವೆ. ರಾಜ್ಯದ ಶೇ.60ರಷ್ಟು ಅರಣ್ಯಗಳು ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ. ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಔಷಧೀಯ ಸಸ್ಯ ಪ್ರಭೇದಗಳ ವೈವಿಧ್ಯತೆ ಹೊಂದಿವೆ. ಈ ವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯ ಗುರುತಿಸಲಾಗಿದೆ. ಇನ್ನು ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಗಳಿಂದಾಗಿ ಸಮೃದ್ಧವಾ ಗಿದ್ದು, ಭಾರತದ ಶೇ.25ರಷ್ಟು ಆನೆ ಸಂತತಿ ಹಾಗೂ ಶೇ. 18 ರಷ್ಟು ಹುಲಿ ಸಂತತಿ ಹೊಂದಿದೆ. 5 ರಾಷ್ಟ್ರೀಯ ಉದ್ಯಾನವನಗಳು, 30 ವನ್ಯಜೀವಿ ಅಭಯಾರಣ್ಯಗಳು ಹಾಗೂ 16 ಸಂರಕ್ಷಿತ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶ ವನ್ಯಜೀವಿ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ.
Related Articles
ಅರಣ್ಯ ಸಿಬಂದಿ ಕೊರತೆಯು ಟಿಂಬರ್ ಮಾಫಿಯಾ, ಕಾಡು ಪ್ರಾಣಿಗಳ ಬೇಟೆಗಾರರಿಗೆ ವರದಾನವಾದರೆ, ಸೂಕ್ತ ನಿರ್ವಹಣೆ ಇಲ್ಲದೇ ಕೆಲ ಕಾಡುಗಳು ಅವಸಾನದ ಅಂಚಿನತ್ತ ಸಾಗುತ್ತಿವೆ. ರಾಜ್ಯದ ದಟ್ಟ ಅಡವಿಯಲ್ಲಿರುವ ಬೆಲೆ ಬಾಳುವ ಶ್ರೀಗಂಧ, ರಕ್ತಚಂದನ, ತೇಗ, ಹೊನ್ನೆ, ಬೀಟೆ ಸೇರಿದಂತೆ ಸಂಪದ್ಭರಿತ ಮರಗಳು ಮಾಯವಾಗುತ್ತಿವೆ. ಕಾಡಂಚಿನ ಸಾವಿರಾರು ಎಕರೆ ಪ್ರದೇಶಗಳು ಈಗಾಗಲೇ ಒತ್ತುವರಿಯಾಗಿವೆ. ಜತೆಗೆ, ಕಾಡ್ಗಿಚ್ಚು, ಕಾಡು ಪ್ರಾಣಿಗಳ ಬೇಟೆಗಳ ನಿಯಂತ್ರಣ, ಸೂಕ್ಷ್ಮ ಅರಣ್ಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.
Advertisement
ಅರಣ್ಯ ಇಲಾಖೆಯ ಖಾಲಿ ಇರುವ ಅಗತ್ಯ ಹುದ್ದೆ ಭರ್ತಿ ಮಾಡುವ ನಿಟ್ಟಿನಲ್ಲಿ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಕೆಲವು ಸಿಬಂದಿ ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ಸಿಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.– ಜಾವೆದ್ ಅಖ್ತರ್, ಅಪರ ಮುಖ್ಯ ಕಾರ್ಯದರ್ಶಿ (ಅರಣ್ಯ), ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ – ಅವಿನಾಶ್ ಮೂಡಂಬಿಕಾನ