Advertisement
ನಾನು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ, ಮಂಚಿ ಗ್ರಾಮಕ್ಕೆ ಸಮೀಪವಿರುವ ಕಜೆ ಎಂಬ ಪುಟ್ಟ ಊರಿನವನು. ನಮ್ಮ ಪೂರ್ವಜರು ಸುಮಾರು ಇನ್ನೂರು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾರೆ. ಹಾಗಾಗಿ ಈ ಊರು ನನ್ನ ಕರುಳಬಳ್ಳಿಯೊಂದಿಗೆ ಬೆಸೆದುಕೊಂಡಿದೆ. ನಾನು ಮಣಿಪಾಲದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಹೋದವನು. ಅಲ್ಲಿ ಏಳು ವರ್ಷ ಸಾಫ್ಟ್ವೇರ್ ಕೆಲಸ. ಮಧ್ಯದಲ್ಲಿ ಒಂದೂವರೆ ವರ್ಷ ಇಂಗ್ಲೆಂಡ್‌ನಲ್ಲಿ ಕೆಲಸ ಮಾಡಿದೆ. ಬೆಂಗಳೂರಿನಲ್ಲಿದ್ದಾಗಲೇ ಕಜೆ, ಕೃಷಿ ಎರಡೂ ನನ್ನನ್ನು ಬಹುವಾಗಿ ಕಾಡುತ್ತಿದ್ದವು. ಹಳ್ಳಿಗೆ ವಾಪಸ್ ಹೋಗಿ ಕೃಷಿ ಮಾಡೋಣ ಅಂತ ಮನಸ್ಸು ಹೇಳುತ್ತಿತ್ತು. 2010ರಲ್ಲಿ ನಾನು ಮಂಗಳೂರಿಗೆ ಬಂದು, ಇನ್ಫೋಸಿಸ್ ಕಂಪನಿಗೆ ಸೇರಿದೆ. ಮನೆಗೆ ಬಂದರೂ, ಪೂರ್ಣ ಪ್ರಮಾಣದ ಕೃಷಿಗೆ ಮನಸ್ಸು ಹಿಂದೇಟು ಹಾಕುತ್ತಿತ್ತು. ಆದರೆ, ನಾನು ಐಟಿ ಕ್ಷೇತ್ರಕ್ಕೆ ಸೇರಿದವನಲ್ಲ ಅನ್ನೋದು ಕೂಡ ನನಗೆ ಅರ್ಥವಾಗಿತ್ತು. ಕೊನೆಗೆ, ಏಳೆಂಟು ವರ್ಷ ತಯಾರಿ ಮಾಡಿಕೊಂಡು, ಈಗ ಎರಡು ವರ್ಷಗಳಿಂದ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ.
ಕೆಲಸ ಬಿಡುವಾಗ ಖಂಡಿತವಾಗಿಯೂ ಭಯ ಆಗಿತ್ತು. ರಸ್ತೆಯಲ್ಲಿ ಹೋಗುವಾಗ ಅಪಘಾತದ ಭಯ ಹೇಗೆ ಸಾಮಾನ್ಯವೋ, ಕೃಷಿಯಲ್ಲಿ ನಷ್ಟದ ಭಯವೂ ಅಷ್ಟೇ ಸಾಮಾನ್ಯ. ಆ ಭಯದಿಂದಲೇ ರೈತರ ಮಕ್ಕಳು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಹಾಗೆ ಹೆದರಿಕೊಂಡಿದ್ದರೆ ಜೀವನ ಮಾಡೋಕೆ ಆಗುತ್ತದಾ? ನಾನಂತೂ ಮೈ ಚಳಿ ಬಿಟ್ಟು ಕೆಲಸ ಮಾಡಲು, ಕಷ್ಟ ನಷ್ಟಗಳನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧನಿದ್ದೆ. ಕಜೆ ವೃಕ್ಷಾಲಯ
ನಮ್ಮ ತಂದೆಯವರು ನೋಡಿಕೊಳ್ಳುತ್ತಿದ್ದ ಫಲವತ್ತಾದ ಭೂಮಿಯಲ್ಲಿಯೇ ಕೃಷಿ ಶುರುಮಾಡಿದೆ. ಯಾವುದನ್ನೂ ಹೊಸದಾಗಿ ಪ್ರಾರಂಭ ಮಾಡುವ ಕಷ್ಟ ನನ್ನ ಪಾಲಿಗೆ ಬರಲಿಲ್ಲ. ಮನೆಯವರಿಂದ ಒಳ್ಳೆಯ ಪ್ರೋತ್ಸಾಹವೂ ಸಿಕ್ಕಿತು. ಈಗ ಕಜೆ ವೃಕ್ಷಾಲಯ ಹೆಸರಿನಲ್ಲಿ ಕಾಡು ಬೆಳೆಸುತ್ತಿದ್ದೇನೆ. ಅಲ್ಲಿ ನೂರಾರು ಬಗೆಯ ಔಷಧೀಯ ಸಸ್ಯಗಳಿವೆ. ಅಧ್ಯಯನಕ್ಕೆಂದು ವಿದ್ಯಾರ್ಥಿಗಳು ಬರುತ್ತಿರುತ್ತಾರೆ. 20 ಎಕರೆಯಷ್ಟು ಜಾಗದಲ್ಲಿ, ಅಡಕೆ, ತೆಂಗು, ಬಾಳೆ, ಕೊಕ್ಕೋ, ಕಾಳುಮೆಣಸು, ಹಣ್ಣಿನ ಗಿಡಗಳು, ಭತ್ತ, ಲಿಂಬೆ, ಕಾಡಿನ ಗಿಡಗಳನ್ನು ಬೆಳೆಸಿದ್ದೇನೆ.
Related Articles
ನೀವೊಂದು ಎಂಎನ್‌ಸಿ ಅಲ್ಲಿ ಕೆಲಸ ಮಾಡುತ್ತಿದ್ದೀರಿ. ಯಾವುದೋ ದೇಶದ ಗ್ರಾಹಕರಿಗಾಗಿ ಬೆಂಗಳೂರಲ್ಲಿ ಕುಳಿತು ಕೆಲಸ ಮಾಡುತ್ತೀರಿ, ಕೋಡ್ ಬರೆಯುತ್ತೀರಿ ಅಂದುಕೊಳ್ಳಿ. ಆದರೆ, ನಿಮ್ಮ ಶ್ರಮದಿಂದ ಯಾರಿಗೆ ಲಾಭವಾಗುತ್ತಿದೆ, ಯಾರ ಮುಖದಲ್ಲಿ ನಗುವರಳುತ್ತಿದೆ ಅಂತಾನೇ ನಿಮಗೆ ಗೊತ್ತಾಗುವುದಿಲ್ಲ. ಕೆಲವೊಮ್ಮೆ ನೀವು ಯಾರಿಗಾಗಿ ಕೆಲಸ ಮಾಡುತ್ತಿದ್ದೀರಿ ಅನ್ನುವುದೂ ನಿಮಗೆ ಗೊತ್ತಿರುವುದಿಲ್ಲ. ತಿಂಗಳಾಂತ್ಯದಲ್ಲಿ ಕೈ ತುಂಬಾ ಸಂಬಳ ಸಿಗುತ್ತದೆ ಅಷ್ಟೇ. ನೀವು ಮಾಡುವ ಕೆಲಸ ಕಂಪನಿಗೆ ಲಾಭವನ್ನು ತಂದುಕೊಡದಿದ್ದರೂ, ಕಂಪನಿಯ ಒಟ್ಟು ಲಾಭದಿಂದ ನಿಮಗೆ ಸಂಬಳ ಸಿಗುತ್ತದೆ. ನನ್ನ ಪ್ರಕಾರ, ನಾವು ಮಾಡುವ ಕೆಲಸ ನಮ್ಮ ಲಾಭ-ನಷ್ಟದ ಮೇಲೆ ಪರಿಣಾಮ ಬೀರಬೇಕು. ಸಂಬಳ ಬರುತ್ತದೆ ಅನ್ನೋ ಒಂದೇ ಒಂದು ಕಾರಣಕ್ಕೆ ಮಾತ್ರ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ. ಹಾಗಾಗಿ, ಕೆಲಸ ಬಿಟ್ಟೆ.
Advertisement
ಹುಟ್ಟಿದ ಊರನ್ನು ಬಿಡಲಾಗದು…ನೀವು ಎಲ್ಲೇ ಹೋಗಿ, ಏನೇ ಕೆಲಸ ಮಾಡಿ, ಹುಟ್ಟೂರಿಗೆ ಮರಳುವ ಸೆಳೆತ ನಿಮ್ಮನ್ನು ಕಾಡಿಯೇ ಕಾಡುತ್ತದೆ. ನಾನು ಇಂಗ್ಲೆಂಡ್‌ನಲ್ಲಿದ್ದೆ. ಅಲ್ಲಿ ಧೂಳು, ಗಲೀಜು ಇಲ್ಲ. ಎಲ್ಲವೂ ಚೆನ್ನಾಗಿತ್ತು. ಆದರೆ, ಆ ಊರಿನ ಜೊತೆ ಭಾವನಾತ್ಮಕವಾಗಿ ಬೆಸೆದುಕೊಳ್ಳಲು ನನ್ನಿಂದ ಸಾಧ್ಯವೇ ಆಗಲಿಲ್ಲ. ನಾನು ಅಲ್ಲಿದ್ದಾಗಲೂ ಮಾನಸಿಕವಾಗಿ ಹಳ್ಳಿಗನಾಗಿಯೇ ಇದ್ದೆ. ಈ ಮಣ್ಣಿನಲ್ಲಿ ನನ್ನ ಪೂರ್ವಜರು ನೆಲೆಸಿದ್ದರು. ಇದನ್ನೆಲ್ಲ ಬಿಟ್ಟು ನನ್ನದಲ್ಲದ್ದನ್ನು ಅಪ್ಪಿಕೊಳ್ಳುವುದು ಕಷ್ಟ. ಹಳ್ಳಿಯ ಬಹುತೇಕ ಯುವಕರು ಈಗ ಸಾಫ್ಟ್ವೇರ್ ಕೆಲಸದಲ್ಲಿದ್ದಾರೆ. ಎಲ್ಲರೂ ಬೆಂಗಳೂರು ಸೇರಿದ್ದಾರೆ. ಹಾಗಾದ್ರೆ ಹಳ್ಳಿಯಲ್ಲಿ ಕೃಷಿ ಕೆಲಸ ಮಾಡೋರು ಯಾರು? ಕೃಷಿಗೆ ಪೂರಕವಾದ ಚಟುವಟಿಕೆಗಳು ಇರುತ್ತವಲ್ಲ, ಕತ್ತಿ, ಕೊಡಲಿ ತಯಾರಿಕೆ, ಕೊಯ್ಲು ಮಾಡೋದು.. ಅಂಥವಕ್ಕೆಲ್ಲ ಕೆಲಸಗಾರರ ಸಮಸ್ಯೆ ಇದೆ. ಒಬ್ಬ ಡಾಕ್ಟರ್, ಎಂಜಿನಿಯರ್‌ಗೆ ಸಿಗುವ ಗೌರವ ಕೃಷಿಕನಿಗೆ ಸಿಗುತ್ತಿಲ್ಲ. ಆ ಕಾರಣದಿಂದಲೂ ಕೃಷಿಯ ಬಗ್ಗೆ ಜನರಿಗೆ ನಿರಾಸಕ್ತಿ ಇರಬಹುದು. (ನಿರೂಪಣೆ: ಪ್ರಿಯಾಂಕ ಎನ್.) – ವಸಂತ ಕಜೆ