ಮೈಸೂರು: ಭಾರತ “ಎ’ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಪ್ರವಾಸಿ ಇಂಗ್ಲೆಂಡ್ ಲಯನ್ಸ್ ಫಾಲೋಆನ್‌ಗೆ ಗುರಿಯಾಗಿದೆ. ಇಲ್ಲಿನ “ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಮೈದಾನ’ ದಲ್ಲಿ ನಡೆಯುತ್ತಿರುವ ದ್ವಿತೀಯ
ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ “ಎ’ 392 ಪೇರಿಸಿದರೆ, ಜವಾಬು ನೀಡಿದ ಇಂಗ್ಲೆಂಡ್ ಲಯನ್ಸ್ 140 ರನ್ನಿಗೆ ಸರ್ವಪತನ ಕಂಡಿತು.
252 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಪ್ರವಾಸಿ ತಂಡ ಮರಳಿ ಬ್ಯಾಟಿಂಗಿಗೆ ಇಳಿದಿದ್ದು, 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 24 ರನ್ ಮಾಡಿದೆ.
ಭಾರತ “ಎ’ 3ಕ್ಕೆ 282 ರನ್ ಮಾಡಿದಲ್ಲಿಂದ ಗುರುವಾರದ ಆಟ ಆರಂಭಿಸಿತ್ತು. ಆದರೆ ದ್ವಿತೀಯ ದಿನದಾಟದಲ್ಲಿ ಇದೇ ಲಯಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಕೀಪರ್ ಶ್ರೀಕರ್ ಭರತ್ (46) ಹೊರತುಪಡಿಸಿದರೆ ಉಳಿದವರೆಲ್ಲ ಬೇಗನೇ ಆಟ ಮುಗಿಸಿ ಮರಳಿದರು.
ಪ್ರವಾಸಿಗರ ಕುಸಿತ: ಆತಿಥೇಯರನ್ನು ಬೇಗನೇ ಉರುಳಿಸಿದ ಇಂಗ್ಲೆಂಡ್ ಲಯನ್ಸ್ ತಂಡದ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಆತಿಥೇಯರ ಪರಿಣಾಮಕಾರಿ ಬೌಲಿಂಗಿಗೆ ಉತ್ತರಿಸಲು ಪರದಾಡತೊಡಗಿದ ಸ್ಯಾಮ್ ಬಿಲ್ಲಿಂಗ್ಸ್ ಬಳಗ ನಿರಂತರ ಕುಸಿತ ಅನುಭವಿಸುತ್ತ ಹೋಯಿತು. ನವದೀಪ್ ಸೈನಿ ಮತ್ತು ಶಹಾºಜ್ ನದೀಂ ತಲಾ 3 ವಿಕೆಟ್, ವರುಣ್ ಏರಾನ್ ಮತ್ತು ಜಲಜ್ ಸಕ್ಸೇನಾ ತಲಾ 2 ವಿಕೆಟ್ ಉರುಳಿಸಿ ಮೇಲುಗೈ ಒದಗಿಸಿದರು. 25 ರನ್ ಮಾಡಿದ ಒಲೀ ಪೋಪ್ ಅವರದೇ ಹೆಚ್ಚಿನ ಗಳಿಕೆ.
ಸಂಕ್ಷಿಪ್ತ ಸ್ಕೋರ್: ಭಾರತ “ಎ’-392 (ಎ. ಈಶ್ವರನ್ 117, ರಾಹುಲ್ 81, ಪಾಂಚಾಲ್ 50, ಚಾಪೆಲ್ 60ಕ್ಕೆ 4, ಬ್ರಿಗ್ಸ್ 71ಕ್ಕೆ 3). ಇಂಗ್ಲೆಂಡ್ ಲಯನ್ಸ್-140 (ಪೋಪ್ 25, ಹೋಲೆxನ್ 19, ಸೈನಿ 30ಕ್ಕೆ 3, ನದೀಂ 32ಕ್ಕೆ 3) ಮತ್ತು ವಿಕೆಟ್ ನಷ್ಟವಿಲ್ಲದೆ 24.