Advertisement
ಈ ಸಹೋದರರ ತುತ್ತುಕಾರಗಳು ಕೊಳಲಿನ ಬಿದಿರಿನ ಮೇಲೆ ತುಟಿಗಳುಜ್ಜುವ ಸದ್ದು ಮಾಡುವುದಿಲ್ಲ. ಹೊರ ಬರುವುದು ನಾದ ಮಾತ್ರ. ಮೂಗಿನ ಉಸಿರೂ ಹೊರಬಾರದು. ಖಮಾಚ್, ರಂಜನಿ, ಮನೋರಂಜನಿಗಳಲ್ಲೆಲ್ಲಾ ಗಾಯಕೀ ಅಂಶಗಳು, ತಂತ್ರಗಾರಿಕೆಯ ಉತ್ತಮ ಸ್ವರೂಪಗಳು, ಅದ್ಭುತ ಎಂದೆನಿಸುವ ಮನೋಧರ್ಮ, ಪ್ರತಿಬಾರಿಯೂ ಮುಂದೇನು ಎನ್ನುವ ಕುತೂಹಲವನ್ನು ಹುಟ್ಟಿಸುವ ಕಲ್ಪನಾ ಸ್ವರವಿನ್ಯಾಸ ಈ ಈರ್ವರ ವಿಲಾಸ. ಕಾಂಬೋಧಿಯ ರಾಗರೂಪಕ್ಕೆ ಹೇಮಂತ-ಹೇರಂಭ ಅವರು ಹೊಸ ಹೊಸ ವರಸೆಗಳನ್ನು ನೀಡುತ್ತಾ “ಓ ರಂಗಶಾಯಿ’ಯನ್ನು ಹೊಸೆದರು. ಚಿಕ್ಕ ಗಾತ್ರದ, ಮಧ್ಯಗಾತ್ರದ ಮತ್ತು ಮಾರು ಗಾತ್ರದ ಬಾನ್ಸುರಿ ಕೊಳಲಿನಲ್ಲಿ ಇವರೀರ್ವರ ಕಾಂಬೋಧಿಯು ಲಾಲಿತ್ಯಪೂರ್ಣವಾಗಿ ಸರಸವಾಡಿತು,ಪ್ರೌಢತೆ ಯಿಂದ ಮೆರೆಯಿತು. ಪರಸ್ಪರ ಹೊಂದಾಣಿಕೆಯಿಂದ ಅಪ್ಯಾಯಮಾನವಾಗಿ ಬೆಳಗಿತು.ಒಂದೊಮ್ಮೆ ಇಬ್ಬರು ಸೋದರರು ಪಾಶ್ಚಾತ್ಯ ಮಾದರಿಯ ಕಾರ್ಡ್ ಸ್ವರಗಳನ್ನು ಬಳಸಿಕೊಂಡು ಒಂದಿಷ್ಟೂ ಚ್ಯುತಿ ಇಲ್ಲದೆ ಪರಿಪೂರ್ಣ ಹೊಂದಾಣಿಕೆಯೊಂದಿಗೆ ಉಸಿರು ಬಿಗಿಹಿಡಿದಂತೆ ನೀಡಿದ ಕಾಂಬೋಧಿಯನ್ನು ಯಾರೂ ಮರೆಯುವಂತಿಲ್ಲ. ವ್ಯಾಕರಣ ಶುದ್ಧತೆ, ರಾಗರೂಪದ ಸುಂದರತೆ, ಭಾವೋತ್ಕಟತೆಯನ್ನು ಮೇಳೈಸಿಕೊಂಡು ಪ್ರೌಢತೆಯನ್ನು ಪ್ರದರ್ಶಿಸುತ್ತಾ, ಚಮತ್ಕಾರಗಳ ಸರ್ಕಸ್ಸುಗಳಿಲ್ಲದೆ ಸಾಮಾನ್ಯ ಶ್ರೋತೃಗೂ ಸಂಗೀತವನ್ನು ತಲುಪಿಸಬಲ್ಲ ಅಸಾಮಾನ್ಯ ಬಲ ಈ ಸೋದರರಲ್ಲಿದೆ.
Related Articles
Advertisement