Advertisement

ಹೂವು ಗೆಲುವೆಲ್ಲಾ ನಂದೆಂದಿತು…

11:43 AM Aug 20, 2019 | Sriram |

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಎಂದರೆ ಕೇವಲ ಭತ್ತ ಎನ್ನುವಂಥ ಪರಿಸ್ಥಿತಿ ಇದೆ. ಹೀಗಿರುವಾಗ ಅದೇ ಪ್ರದೇಶದ ಯಡಹಳ್ಳಿ ಗ್ರಾಮದ ಯುವ ರೈತ ಭೀಮಾಶಂಕರ ಹೂವಿನ ಕೃಷಿ ಮಾಡುವ ಮೂಲಕ ಹೊಸತನಕ್ಕೆ ತೆರೆದುಕೊಂಡಿದ್ದಾರೆ. ಭೀಮಾಶಂಕರ ಯಂಕಣ್ಣ ಅವರು ಪದವೀಧರರಾಗಿದ್ದು, ಭತ್ತದ ಹೊರತಾಗಿಯೂ ಏನಾದರೂ ಬೆಳೆಯಬೇಕು ಎಂದು ಆಲೋಚಿಸುತ್ತಿರುವಾಗ ಅವರಿಗೆ ಹೊಳೆದದ್ದು ಹೂವಿನ ಕೃಷಿ. ಆ ಸಮಯದಲ್ಲಿ ಅವರಿಗೆ ಮಾರ್ಗದರ್ಶನ ಸಿಕ್ಕಿದ್ದು ಸಂಬಂಧಿ ಕುಂಬಾರಪೇಟದ ಹನುಮೇಶಗೌಡ ಪಾಟೀಲ ಅವರಿಂದ.

Advertisement

ಅದರಂತೆ ಮಹಾರಾಷ್ಟ್ರದ ನಾಂದೇಡಗೆ ತೆರಳಿ ಅಲ್ಲಿಂದ 3300ಕ್ಕೂ ಹೆಚ್ಚು ದುಂಡು ಮಲ್ಲಿಗೆ ಸಸಿಗಳನ್ನು ತಂದು 2 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದರು. ಅದರಲ್ಲಿ ಸುಮಾರು 500 ಸಸಿಗಳು ಮುದುಡಿ ಹೋದರೂ, ಇನ್ನುಳಿದ ಸಾವಿರಾರು ಗಿಡಗಳು ಚೆನ್ನಾಗಿ ಬೆಳೆದು ಅವರ ಮೊಗದಲ್ಲಿ ಸಂತಸ ತಂದವು. ಇಂದು ಅವರ ತೋಟದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂ ಅರಳಿ ನಿಂತಿದೆ. ಇದರಿಂದಾಗಿ ಸ್ವಂತ ದುಡಿಮೆಯ ಕನಸಿನ ಜೊತೆಗೆ ಹತ್ತಾರು ಕಾರ್ಮಿಕರಿಗೆ ಕೆಲಸ ನೀಡುತ್ತಿರುವುದರಿಂದ ಹೆಮ್ಮೆಯನ್ನೂ ಅನುಭವಿಸುತ್ತಿದ್ದಾರೆ.

ಉಳಿದಂತೆ ಸುಮಾರು 100 ಸಾಗವಾನಿ ಮರಗಳನ್ನು ಬೆಳೆಸುತ್ತಿದ್ದು, ಅವು ಕೂಡಾ ಚೆನ್ನಾಗಿ ಬೆಳೆಯುತ್ತಿವೆ. ಮೀನು ಸಾಕಣೆಯನ್ನೂ ಮಾಡುತ್ತಿರುವ ಭೀಮಾಶಂಕರ ಅವರು ಈವರೆಗೆ ಏನಿಲ್ಲವೆಂದರೂ 80,000 ಮೀನುಗಳನ್ನು ಮಾರಾಟ ಮಾಡಿದ್ದಾರೆ. ಟಗರು ಸಾಕಣಿಕೆಗಾಗಿ ಕೆನರಾ ಬ್ಯಾಂಕ್‌ ಮತ್ತು ದೇವರಾಜ ಅರಸ್‌ ನಿಗಮದಿಂದ ನೆರವು ಪಡೆದುಕೊಂಡಿದ್ದಾರೆ. ಟಗರು ಸಾಕಣಿಕೆಯಿಂದ ಹೂವಿನ ಕೃಷಿಗೂ ಪ್ರಯೋಜನವಾಗಿದೆ. ಹೂವಿನ ಗಿಡಗಳಿಗೆ ಕೊಟ್ಟಿಗೆ ಗೊಬ್ಬರದ ಅಗತ್ಯವಿತ್ತು. ಕೊಟ್ಟಿಗೆಯಲ್ಲಿರುವ ಟಗರುಗಳಿಂದಾಗಿ ಗೊಬ್ಬರ ಸುಲಭವಾಗಿ ಸಿಕ್ಕಿತ್ತು.

ಹೂವಿನಿಂದ ಆದಾಯ
ಕಡಿಮೆ ಖರ್ಚಿನಲ್ಲಿ ಹೂವಿನ ಕೃಷಿ ಮಾಡುತ್ತಿದ್ದು, ಸದ್ಯ ಪ್ರತಿದಿನ 12ರಿಂದ 15 ಕೆಜಿ ಹೂ ದೊರೆಯುತ್ತಿದೆ. ಮಾರುಕಟ್ಟೆಯ ಲೆಕ್ಕದಲ್ಲಿ ಏನಿಲ್ಲವೆಂದರೂ 5,500 ರು. ದಿನಕ್ಕೆ ಆದಾಯ ಲಭ್ಯವಾಗುತ್ತಿದೆ. ಕೆಲಸಗಾರರ ಸಂಬಳ ಕಳೆದರೆ ಕಡಿಮೆಯೆಂದರೂ 4,000 ರು. ಕೈಗೆ ಸಿಗುತ್ತದೆ.

– ಗೋಪಾಲ್‌ ರಾವ್‌ ಕುಲಕರ್ಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next