Advertisement
ಕಳೆದ ಒಂದು ವಾರದಿಂದ ಮಡಿಕೇರಿ ತಾಲೂಕಿನ ವಿವಿಧ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಆರಂಭಗೊಂಡಿದೆ. ಆಳ ಪ್ರದೇಶ ತುಂಬುತ್ತಾ ಸಾಗಿ, ನಗರದ ನೀರಿನ ಪೂರೈಕೆಗಾಗಿ ಕಲ್ಲುಮುಟ್ಲು ಬಳಿ ನಿರ್ಮಿಸಿದ ಮರಳಿಕಟ್ಟ ತುಂಬಿ ಹೆಚ್ಚುವರಿ ನೀರು ನದಿ ಕೆಳಭಾಗಕ್ಕೆ ಹರಿದಿದೆ. ಹೀಗಾಗಿ ಓಡಾಬಾೖ ಮೊದಲಾದೆಡೆ ಬರಡು ನೆಲವಾಗಿ ಬದಲಾಗಿದ್ದ ಪಯಸ್ವಿನಿಯಲ್ಲಿ ನೀರು ಹರಿದಿದೆ. ಆಳ ಪ್ರದೇಶ ತುಂಬಿದೆ. ಕೆಲ ದಿನಗಳ ಕಾಲ ನಿರಂತರ ಮಳೆ ಸುರಿದರೆ, ನಗರದ ನೀರಿನ ಬವಣೆಗೆ ಪರಿಹಾರ ದೊರೆಯಬಹುದು.
ಚೆಂಬು, ಅರಂತೋಡು ಮೊದಲಾದೆಡೆ ನದಿಯಲ್ಲಿ ಕೆಂಬಣ್ಣದ ನೀರು ಹರಿಯು ತ್ತಿದ್ದು, ಕ್ರಮೇಣ ಮರಳಿನ ಕಟ್ಟದಲ್ಲಿ ಸಂಗ್ರಹಗೊಂಡಿರುವ ನೀರಿಗೆ ಸೇರಲಿದೆ. ಇಲಿಂದ್ಲ ನೀರನ್ನು ಶುದ್ಧೀಕರಿಸಿ ನಗರಕ್ಕೆ ಪೂರೈಕೆ ಘಟಕ ಇದ್ದರೂ, ಅಲ್ಲಿನ ಶುದ್ಧೀಕರಣ ಯಂತ್ರ ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲ. ಕೆಂಬಣ್ಣದ ನೀರೇ ನಳ್ಳಿ ಮೂಲಕ ಮನೆಗಳಿಗೆ ಹರಿಯಲಿದೆ. ಇಂತಹ ಸಮಸ್ಯೆ ಈ ಹಿಂದೆಯೂ ಆಗಿದೆ. ಮಳೆ ಬಂದು ನದಿಯಲ್ಲಿ ನೀರು ತುಂಬಿದ್ದರೂ, ಜನರ ಪಾಲಿಗೆ ಶುದ್ಧ ನೀರಿನ ಕೊರತೆ ಉಂಟಾಗುತ್ತದೆ. ಹಾಗಾಗಿ ನದಿಯಲ್ಲಿ ನೀರಿದ್ದರೂ, ಇಲ್ಲದಿದ್ದರೂ ಸಮಸ್ಯೆ ತಪ್ಪದು ಎನ್ನುತ್ತಾರೆ ನಗರದ ನಿವಾಸಿಗಳು.