Advertisement
ಹತ್ತಿರದ ಇನ್ನೊಂದು ಮನೆಯಲ್ಲಿರುವ ಅಣ್ಣ ಮತ್ತವರ ಮನೆ ಮಂದಿ ಅಂದು ದೇವರಂತೆ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಇನ್ನೇನು ಅನ್ನ ಕಲಸಿ ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಭೀಕರ ಸ್ಫೋಟದಂತಹ ಸದ್ದು ಕೇಳಿಸಿತು. ಕಣ್ಣು ಮಿಟುಕಿಸುವಷ್ಟರಲ್ಲಿ ನೀರು ಮನೆಯೊಳಗೆ ನುಗ್ಗಿತ್ತು. ಹೊರ ಧಾವಿಸಿ ನೋಡಿದರೆ ಮನೆಯೆದುರಿನ ತೋಡು ಹೊಳೆಯಾಗಿತ್ತು. ಭಾರೀ ಮರಗಳು ಪರಸ್ಪರ ಲಟಲಟನೆ ಹೊಡೆದುಕೊಳ್ಳುತ್ತ, ಬೆಂಕಿಕಡ್ಡಿಗಳಂತೆ ತೇಲಿ ಬರುತ್ತಿದ್ದವು.
Related Articles
Advertisement
ಅಡಿಕೆ ಮರಗಳಿಲ್ಲದಿದ್ದರೆ ಮನೆಯೇ ಇರುತ್ತಿರಲಿಲ್ಲ: “ಸಾಗರವಾಗಿ ಹರಿದು ಬಂದ ನೀರಿನೊಂದಿಗೆ ತೇಲಿ ಬಂದದ್ದು ಮರಗಳ ರಾಶಿ. ನಮ್ಮ ತೋಟದ ಅಡಿಕೆ ಮರಗಳು ತಾವು ಮುರಿದು ಹೋದರೂ ಆ ಮರಗಳ ರಾಶಿಯನ್ನು ತಡೆದವು. ಇಲ್ಲದಿದ್ದರೆ ನಮ್ಮ ಮನೆಯ ಅವಶೇಷವೂ ಸಿಗುತ್ತಿರಲಿಲ್ಲ’ ಎಂದು ವಿಠಲ ಗೌಡ ಕಲ್ಲೊಲೆ ಕಣ್ಣಲ್ಲೇ ನೆರೆ-ಪ್ರವಾಹದ ಭೀಕರತೆಯನ್ನು ತೆರೆದಿಟ್ಟರು.
“ನನಗೆ ತಿಳಿದಿರುವಂತೆ ನಮ್ಮ ತಂದೆಯ ಕಾಲದಿಂದಲೇ ಇಲ್ಲಿ ವಾಸವಾಗಿದ್ದೇವೆ. ಎಷ್ಟೇ ಮಳೆ ಬಂದರೂ ಎರಡು ಬಾರಿ ನೀರು ಉಕ್ಕೇರುತ್ತದೆ, ಬಳಿಕ ಶಾಂತವಾಗುತ್ತದೆ. ಈ ಬಾರಿಯೂ ಅದೇ ರೀತಿ ಅಂದುಕೊಂಡಿದ್ದೆವು. ಆದರೆ ಹಾಗಾಗಲಿಲ್ಲ. ನೀರು ತೋಟದೊಳಗೆ ನುಗ್ಗಿದ ಮರುಕ್ಷಣವೇ ಮನೆಯನ್ನು ಬಿಡಲಿಲ್ಲ. ನಮ್ಮದು ಮಣ್ಣಿನ ಇಟ್ಟಿಗೆ ಮನೆ, ಕೊಟ್ಟಿಗೆಯಲ್ಲಿದ್ದ ಗೊಬ್ಬರ ನೀರಲ್ಲಿ ಕೊಚ್ಚಿ ಹೋಗಿ ಮರಳಿನ ರಾಶಿ ಬಿದ್ದಿವೆ. ಮನೆಯಲ್ಲಿ ವಾಸವಿರಲು ಸಾಧ್ಯವಿಲ್ಲ. ನಾನು ಅಂಗಡಿಯಲ್ಲೇ ರಾತ್ರಿ ಕಳೆಯುತ್ತಿದ್ದೇನೆ. ಇರುವ ಒಂದೆಕರೆ ಜಾಗದಲ್ಲಿ ಎಲ್ಲಿ ನೊಡಿದರಲ್ಲಿ ಮರಳೇ ತುಂಬಿದೆ. ಏನು ಮಾಡುವುದು ಎಂಬುದು ತೋಚುತ್ತಿಲ್ಲ’ ಎಂದು ಕಣ್ಣೀರಿಟ್ಟರು ವಿಠಲ ಗೌಡ.
ನೆರೆ ಆವರಿಸಿದ ಪ್ರದೇಶ ಮರು ನಿರ್ಮಾಣ: ಮಿತ್ತಬಾಗಿಲು ಗ್ರಾಮದ ಕುಕ್ಕಾವು ಪ್ರದೇಶ ಮರು ನಿರ್ಮಾಣದೆಡೆಗೆ ಸಾಗುತ್ತಿದೆ. ಸೇತುವೆ ಸಂಪರ್ಕ ಕಡಿದು 20 ಕಿ.ಮೀ.ಸುತ್ತಿ ಬರಬೇಕಿತ್ತು. ಸದ್ಯ ಸೇತುವೆ ಕಾಮಗಾರಿ ವೇಗದಿಂದ ಸಾಗುತ್ತಿದೆ. ಎಂಜಿನಿಯರ್ ಪರಿಶೀಲಿಸಿದ ಬಳಿಕ ಬಸ್ ಓಡಾಟಕ್ಕೆ ಅವಕಾಶ ಲಭಿಸಲಿದೆ. ಕೆಸರು ನುಗ್ಗಿದ ಮನೆಗಳೆಲ್ಲ ಸ್ವತ್ಛವಾಗುತ್ತಿವೆ. ವಿಸ್ತರಿಸಿದ ಹೊಳೆಯನ್ನು ಎರಡು ಬದಿ ಕಲ್ಲು ರಾಶಿ ಹಾಕಿ ಕುಗ್ಗಿಸುವ ಪ್ರಯತ್ನ ಮಾಡಲಾಗಿದೆ. ಆಹಾರ ಸಾಮಗ್ರಿಯ ಕಿಟ್ ವಿತರಿಸಲಾಗಿದ್ದು, ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾಮಗಾರಿ ಹಮ್ಮಿಕೊಂಡಿದೆ. ಗ್ರಾ.ಪಂ.ನಿಂದ ನಷ್ಟದ ಕುರಿತು ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಕುಕ್ಕಾವು ಗ್ರಾಮದಂಚಿನ 20ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು, ಸದ್ಯ ಅವರು ಬಾಡಿಗೆ ಮನೆಯಲ್ಲಿ ವಾಸಿಸಲು ನಿರ್ಧರಿಸಿದ್ದಾರೆ.
* ಚೈತ್ರೇಶ್ ಇಳಂತಿಲ