Advertisement

ಎರಡು ದೀಪಗಳ ಜ್ವಾಲೆ ಒಂದೇ ಆಗುವ ಹಾಗೆ

01:12 AM Mar 17, 2021 | Team Udayavani |

ಒಮ್ಮೆ ಗೌತಮ ಬುದ್ಧ ಸಣ್ಣ ಪಟ್ಟಣವೊಂದಕ್ಕೆ ಪ್ರವಚನ ನೀಡಲು ಆಗಮಿಸಿದ್ದ. ಪಟ್ಟಣದ ಜನರೆಲ್ಲ ಸೇರಿದ್ದರು. ಆದರೆ ಸಾಕಷ್ಟು ಹೊತ್ತು ಸರಿದರೂ ಬುದ್ಧ ಪ್ರವಚನ ಆರಂಭಿ ಸುವಂತೆ ಕಾಣಲಿಲ್ಲ. ಅವನ ದೃಷ್ಟಿ ದೂರದಲ್ಲೆಲ್ಲೋ ನೆಟ್ಟಿತ್ತು. ಜನರು ಕಾಯುತ್ತ ಇದ್ದರು…

Advertisement

ಬುದ್ಧ ಆ ಪಟ್ಟಣವನ್ನು ಪ್ರವೇಶಿಸು ವಾಗ ದಾರಿಯಲ್ಲಿ ಒಬ್ಬ ಬಾಲಕಿ ಅವನನ್ನು ಸಂಧಿಸಿದ್ದಳು. ಆಕೆಯ ವಯಸ್ಸು ಹದಿಮೂರು ದಾಟಿರಲಿಕ್ಕಿಲ್ಲ. ಅವಳ ಕೈಯಲ್ಲೊಂದು ಬುತ್ತಿಚೀಲ. “ಅಪ್ಪ ಹೊಲದಲ್ಲಿ ಕಾಯು ತ್ತಿದ್ದಾರೆ, ಅವರಿಗೆ ಬುತ್ತಿ ಕೊಟ್ಟು ಬರುತ್ತೇನೆ. ನಾನು ಬರುವ ತನಕ ಪ್ರವಚನ ಆರಂಭಿಸ ಬೇಡಿ’ ಎಂದು ವಿನಂತಿಸಿ ಕೊಂಡಿದ್ದಳು ಆಕೆ. ಬುದ್ಧ ಆಕೆಗೆ ಮಾತು ಕೊಟ್ಟಿದ್ದ.
ಇನ್ನೂ ಸ್ವಲ್ಪ ಕಾದ ಬಳಿಕ ಜನರಲ್ಲಿ ತಲೆ ಹಣ್ಣಾದ ಕೆಲವರು ಹೇಳಿದರು, “ಇನ್ನು ಆರಂಭಿಸಬಹುದಲ್ಲ? ಬರಬೇಕಾದ ಪ್ರಮುಖರೆಲ್ಲ ಬಂದಿದ್ದಾರೆ…’

“ನಾನು ಯಾರಿಗಾಗಿ ಇಷ್ಟು ದೂರ ಬಂದಿದ್ದೇನೋ ಆ ವ್ಯಕ್ತಿ ಇನ್ನೂ ಆಗಮಿಸಿಲ್ಲ. ಹಾಗಾಗಿ ಇನ್ನಷ್ಟು ಹೊತ್ತು ಕಾಯಲೇ ಬೇಕು…’
ಸ್ವಲ್ಪ ಹೊತ್ತು ಕಳೆದ ಬಳಿಕ ಬಾಲಕಿ ಓಡೋಡಿ ಬಂದಳು. “ಸ್ವಲ್ಪ ತಡವಾಯಿತು, ಕ್ಷಮಿಸಿ. ಆದರೆ ನಾನು ಬಾರದೆ ನೀವು ಪ್ರವಚನ ಆರಂಭಿಸಲಿಕ್ಕಿಲ್ಲ ಎಂಬ ಖಾತರಿ ನನಗಿತ್ತು. ಏಕೆಂದರೆ ನೀವು ನನಗೆ ಮಾತು ಕೊಟ್ಟಿದ್ದಿರಲ್ಲ! ನೀವು ನನಗೆ ಕೊಟ್ಟ ವಚನವನ್ನು ಉಳಿಸಿಕೊಳ್ಳುತ್ತೀರಿ ಅಂತಲೂ ಗೊತ್ತಿತ್ತು. ಏಕೆಂದರೆ, ನನಗೆ ಬುದ್ಧಿ ತಿಳಿದಾಗಿನಿಂದ ನಾನು ನಿಮ್ಮನ್ನು ಭೇಟಿಯಾಗಲು, ನಿಮ್ಮ ಮಾತುಗಳನ್ನು ಆಲಿಸಲು ಕಾತರಿಸು ತ್ತಿದ್ದೇನೆ. ನಿಮ್ಮ ಹೆಸರನ್ನು ಮೊದಲ ಬಾರಿ ಕೇಳಿದಾಗ ನನಗೆ ಪ್ರಾಯಃ ನಾಲ್ಕು ವರ್ಷವಾಗಿದ್ದಿರಬೇಕು. ಆಗಿನಿಂದಲೂ ನನ್ನ ಕಿವಿಗಳಲ್ಲಿ, ಹೃದಯದಲ್ಲಿ ಏನೋ ಒಂದು ಅನುರಣಿಸುತ್ತಿದೆ. ನಾನು ಹತ್ತು ವರ್ಷಗಳಿಂದ ಕಾಯುತ್ತಿದ್ದೇನೆ, ಈಗ ನೀವು ಕೆಲವು ನಿಮಿಷ ಕಾಲ ನನಗಾಗಿ ಕಾಯುತ್ತೀರಿ ಎಂಬುದು ನನಗೆ ಖಚಿತವಿತ್ತು…’ ಎಂದಳು ಬಾಲಕಿ.

“ನಿನ್ನ ಕಾಯುವಿಕೆ ವ್ಯರ್ಥವಾದುದಲ್ಲ ಮಗಳೇ. ನಾನು ಅಷ್ಟು ದೂರದಿಂದ ಇಲ್ಲಿಗೆ ಬಂದಿರುವುದು ನಿನಗಾಗಿಯೇ ವಿನಾ ಮತ್ತೇನೂ ಅಲ್ಲ.

ಬುದ್ಧ ಪ್ರವಚನ ಆರಂಭಿಸಿದ. ಅದನ್ನು ಶ್ರದ್ಧೆಯಿಂದ ಆಲಿಸಿದ ಬಾಲಕಿ ಪ್ರವಚನ ಮುಗಿದ ಬಳಿಕ, “ನನ್ನನ್ನು ಶಿಷ್ಯೆಯಾಗಿ ಸ್ವೀಕರಿಸಿ’ ಎಂದು ಬೇಡಿ ಕೊಂಡಳು. ಪ್ರವಚನ ವನ್ನು ಪಟ್ಟಣಿಗರೆಲ್ಲರೂ ಕೇಳಿದ್ದರೂ ಬುದ್ಧನ ಅನುಯಾಯಿ ಆಗಲು ಮುಂದೆ ಬಂದದ್ದು ಆ ಪುಟ್ಟ ಬಾಲಕಿ ಮಾತ್ರ.

Advertisement

ಅಂದು ರಾತ್ರಿ ಬುದ್ಧ ಮಲಗುವ ಹೊತ್ತಿಗೆ ಅವನ ಪ್ರಧಾನ ಶಿಷ್ಯ ಆನಂದ ಬಂದು ವಂದಿಸಿ ನಿಂತುಕೊಂಡ. “ನಿದ್ದೆ ಹೋಗುವ ಮುನ್ನ ಒಂದು ಪ್ರಶ್ನೆಯಿದೆ. ಈ ಪಟ್ಟಣಕ್ಕೆ ಬಂದ ಹಾಗೆ ಯಾವುದಾದರೂ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಒಂದು ಸೆಳೆತವನ್ನು ಅನುಸರಿಸಿ ನೀವು ಮುಂದಡಿ ಇರಿಸುತ್ತೀರಾ?’ ಎಂದು ಕೇಳಿದ.

“ನಿಜ. ನನ್ನ ಪ್ರಯಾಣಗಳು ನಿರ್ಧಾರವಾಗುವುದು ಹಾಗೆ. ಎಲ್ಲೋ ಯಾರಿಗೋ ನನ್ನನ್ನು ಭೇಟಿಯಾಗುವ ದಾಹ ಉಂಟಾದರೆ ಅದು ನನ್ನನ್ನು ಅಯಸ್ಕಾಂತದಂತೆ ಸೆಳೆಯುತ್ತದೆ. ಆ ದಿಕ್ಕಿನಲ್ಲಿ ಹೊರಡುತ್ತೇನೆ – ಈ ಪಟ್ಟಣದಲ್ಲಿ ಈ ಬಾಲಕಿಯ ಕರೆಯನ್ನು ಅನುಸರಿಸಿ ಬಂದ ಹಾಗೆ’ ಎಂದ ಬುದ್ಧ.

ಗುರು, ಶಿಷ್ಯನಿರುವ ದಿಕ್ಕಿನಲ್ಲಿ ಹೊರಡುತ್ತಾನೆ; ಶಿಷ್ಯ, ಗುರುವಿರುವ ಕಡೆಗೆ ಸೆಳೆಯಲ್ಪಡುತ್ತಾನೆ.
ಇಲ್ಲಿ ನಡೆಯುವ ಭೇಟಿ ದೇಹ ಗಳದ್ದಲ್ಲ; ಮನಸ್ಸುಗಳದ್ದು, ಆತ್ಮಗಳದ್ದು. ಎರಡು ನಂದಾದೀಪಗಳನ್ನು ಅತೀ ಹತ್ತಿರ ತಂದಾಗ ದೀಪಗಳು ಮಾತ್ರ ಎರಡಾಗಿ ರುತ್ತವೆ; ಜ್ವಾಲೆ ಒಂದೇ ಆಗುತ್ತದೆ, ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತದೆ. ಎರಡು ದೇಹಗಳ ನಡುವೆ ಆತ್ಮ ಒಂದೇ ಎಂಬ ಹಾಗೆ ಇರುವಾಗ ಅದನ್ನು ಒಂದು ಸಂಬಂಧ ಎಂದು ವ್ಯಾಖ್ಯಾನಿಸುವುದು ಕಷ್ಟ. ಅದನ್ನು ಬಣ್ಣಿಸಲು ಪದಗಳೇ ಇಲ್ಲ; ಭಾಷೆ ದುರ್ಬಲ ಅನ್ನಿಸುವ ಸಂದರ್ಭವದು. ಅದು ಅನುಭವಕ್ಕೆ ಮಾತ್ರ ನಿಲುಕುವುದು.
( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next