ಬರೋಬ್ಬರಿ ಎರಡು ದಶಕಗಳ ಬಳಿಕ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಈ ಚುನಾವಣೆಯ ಐದು ಕುತೂಹಲಕಾರಿ ಘಟ್ಟಗಳನ್ನು ಇಲ್ಲಿ ವಿವರಿಸಲಾಗಿದೆ.
1 ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ
ಅಶೋಕ್ ಗೆಹ್ಲೋಟ್ ಸ್ಪರ್ಧೆ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗಾಂಧಿ ಕುಟುಂಬ ಸ್ಪರ್ಧಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ ಅನಂತರ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅ.22ರಂದು ಸ್ಪರ್ಧೆ ಕುರಿತು ಘೋಷಿಸಿದರು.
2 ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ರಾಜಸ್ಥಾನ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಒಬ್ಬ ವ್ಯಕ್ತಿ ಒಂದು ಹುದ್ದೆ’ ಘೋಷಣೆ ಮಾಡಿದರು. ಸಚಿನ್ ಪೈಲಟ್ ಅವರು ಮುಂದಿನ ಸಿಎಂ ಕನಸು ಕಂಡರು. ಆದರೆ ಸಿಎಂ ಆಯ್ಕೆ ಯಲ್ಲಿ ರಾಜಸ್ಥಾನ ಕಾಂಗ್ರೆಸ್ ಎರಡು ಬಣವಾಯಿತು. ಸ್ಪೀಕರ್ ಸಿ.ಪಿ.ಜೋಶಿ ಅವರನ್ನು ಮುಂದಿನ ಸಿಎಂ ಮಾಡ ಬೇಕೆಂದು ಅಶೋಕ್ ಗೆಹ್ಲೋಟ್ ಬಣ ಪಟ್ಟು ಹಿಡಿಯಿತು. ಬಿಕ್ಕಟ್ಟು ಹಿನ್ನೆಲೆಯಲ್ಲಿ ಗೆಹ್ಲೋಟ್ ಸ್ಪರ್ಧೆಯಿಂದೆ ಹಿಂದೆ ಸರಿದರು.
3 ದಿಗ್ವಿಜಯ್ ಸಿಂಗ್ ಪ್ರವೇಶ: ಗೆಹ್ಲೋಟ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಂತೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸ್ಪರ್ಧೆಯ ಇಂಗಿತವನ್ನು ವ್ಯಕ್ತಪಡಿಸಿದರು. ಇದಕ್ಕಾಗಿ ಪಕ್ಷದಿಂದ ನಾಮಪತ್ರ ಕೂಡ ಪಡೆದರು. ಆದರೆ ಖರ್ಗೆ ಅವರು ಸ್ಪರ್ಧಿಸುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಪರ್ಧೆ ಮಾಡದಿರುವ ತೀರ್ಮಾನಕ್ಕೆ ಸಿಂಗ್ ಬಂದರು.
4 ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ: ಅಂತಿಮವಾಗಿ ಗಾಂಧಿ ಕುಟುಂಬದ ಆಶೀರ್ವಾದ ದೊಂದಿಗೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಸೆ.30ರಂದು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನ ಬಹುತೇಕ ಹಿರಿಯ ನಾಯಕರು ಖರ್ಗೆ ಅವರ ಸ್ಪರ್ಧೆಯನ್ನು ಬೆಂಬಲಿಸಿದರು.
5 ಸ್ಪರ್ಧೆ ನೀಡಲು ಶಶಿ ತರೂರ್ ತೀರ್ಮಾನ: ಪ್ರಜಾಪ್ರಭುತ್ವ ರೀತಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಬಯಸಿದ ತಿರುವನಂತಪುರ ಸಂಸದ ಶಶಿ ತರೂರ್ ಸೆ.30ರಂದು ನಾಮಪತ್ರ ಸಲ್ಲಿಸಿದರು. ಆದರೆ ಬಹುತೇಕ ರಾಜ್ಯಗಳಲ್ಲಿ ಪ್ರದೇಶ ಕಾಂಗ್ರೆಸ್ ಪದಾಧಿಕಾರಿಗಳಿಂದ ಅವರು ನಿರೀಕ್ಷಿಸಿದಂತೆ ಅವರಿಗೆ ಬೆಂಬಲ ದೊರೆಯಲಿಲ್ಲ.