ಚಾಮರಾಜನಗರ: ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಸ್ಥಳೀಯ ಅರಣ್ಯ ಸಿಬ್ಬಂದಿ ನೆರವಿನೊಂದಿಗೆ ನಗರದಲ್ಲಿ ಬಂಧಿಸಿದ್ದಾರೆ.
ಬೆಂಗಳೂರು ಮಾಗಡಿಯ ರಾಜು ಎಂ. (35), ಕೊಡಗು ಜಿಲ್ಲೆಯ ಭಾಗಮಂಡಲದ ಪ್ರವೀಣ (34), ಕುಶಾಲನಗರದ ವಿಶ್ವನಾಥ (37), ಶಿವಮೊಗ್ಗ ಜೆ.ಸಿನಗರದ ಪ್ರಸನ್ನ ಕುಮಾರ (29), ಶಿವಮೊಗ್ಗದ ಚಾಲುಕ್ಯನಗರದ ಲಜ್ಜಿ ಕುರಿಯನ್ (42) ಬಂಧಿತರು.
ಶಿವಮೊಗ್ಗದ ಚಾಲುಕ್ಯನಗರದ ಥಾಮಸ್ (35) ಪ್ರಮುಖ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.
ಸದರಿ ಆರೋಪಿಗಳು ನಕ್ಷತ್ರ ಆಮೆಯನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಶಿವಮೊಗ್ಗ ಪೊಲೀಸರಿಗೆ ದೊರೆತಿತ್ತು. ಶಿವಮೊಗ್ಗ ಪೊಲೀಸರು ಖರೀದಿದಾರರ ಸೋಗಿನಲ್ಲಿ ಆರೋಪಿಗಳಿಗೆ ಕರೆ ಮಾಡಿ ಚಾಮರಾಜನಗರಕ್ಕೆ ಬರುವುದಕ್ಕೆ ಹೇಳಿದ್ದರು. ಆರೋಪಿಗಳು ಬರುವುದಕ್ಕೆ ಮೊದಲೇ ಚಾಮರಾಜನಗರ ತಲುಪಿದ್ದ ಪೊಲೀಸರ ತಂಡ, ಸ್ಥಳೀಯ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರ ನೆರವು ಪಡೆದರು. ಕಾರಿನಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳನ್ನು ನಕ್ಷತ್ರ ಆಮೆಗಳ ಸಮೇತ ಬಂಧಿಸಿದರು.
ಬಂಧನದ ನಂತರ ಆರೋಪಿಗಳ ಕೋವಿಡ್ ಪರೀಕ್ಷೆ ಮಾಡಿಸಿ, ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಸ್‌ಐ ಪ್ರಸಾದ್, ಸಿಬ್ಬಂದಿಗಳಾದ ನಂದಕುಮಾರ್, ಚಿಕ್ಕಶಂಕರನಾಯಕ, ಬಂಗಾರು, ರಾಜಶೇಖರ್, ಮಲ್ಲೇಶನಾಯಕ, ರಾಜು, ಚಾಮರಾಜನಗರ ವಲಯ ಅರಣ್ಯ ಅಧಿಕಾರಿ ಅಭಿಲಾಷ್, ಅರಣ್ಯ ರಕ್ಷಕ ಹೇಮಂತ್, ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.