Advertisement

ಸ್ವರಾಜ್ಯ ಮೈದಾನದ ‘ಹೊಸ ಬಿಡಾರ’ದಲ್ಲಿ ಮೊದಲ ಸಂತೆ

11:53 AM Nov 18, 2017 | Team Udayavani |

ಮೂಡಬಿದಿರೆ: ಕಳೆದ ಸೋಮವಾರ ಸ್ವರಾಜ್ಯ ಮೈದಾನಕ್ಕೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಗೊಂಡು ‘ಹೊಸ ಬಿಡಾರ ಹೂಡಿರುವ’ ಮೂಡಬಿದಿರೆ ಪುರಸಭಾ ದಿನವಹಿ ಮಾರುಕಟ್ಟೆ ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲೇ ಪ್ರಸಿದ್ಧವೆನಿಸಿದ ಮೂಡಬಿದಿರೆಯ ಶುಕ್ರವಾರದ ಸಂತೆಯ ಮೊದಲ ದಿನದ ಅನುಭವ ಕುತೂಹಲಕಾರಿಯಾಗಿತ್ತು.

Advertisement

ಮೊದಲಿಗಿಂತ ಸಾಕಷ್ಟು ವಿಶಾಲವಾದ ಅವಕಾಶ ಲಭಿಸಿದ್ದು, ವ್ಯಾಪಾರಿಗಳ ನಡುವೆ ಸಾಕಷ್ಟು ಸ್ಥಳಾವಕಾಶವಿರುವುದರಿಂದ ಜನರಿಗೆ ಅನುಕೂಲಕರವಾಗಿ ತೋರಿತು.

ಹೊಸ ಜಾಗದಲ್ಲಿ ಜನ ಸಾಕಷ್ಟು ಸಂಖ್ಯೆಯಲ್ಲಿ ಕಂಡುಬಂದಂತೆ ತೋರಿದರೂ ಹೆಚ್ಚಿನ ವ್ಯಾಪಾರಿಗಳು ‘ವ್ಯಾಪಾರ ಡಲ್‌ ಮಹರಾಯರೆ, ಅಲ್ಲಿದ್ದಷ್ಟು ವ್ಯಾಪಾರ ಇಲ್ಲಿ ಕಾಣುತ್ತಿಲ್ಲ’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

20 ವರ್ಷಗಳಿಂದಲೂ ಮೂಡಬಿದಿರೆಗೆ ಬಂದು ವ್ಯಾಪಾರ ಮಾಡುತ್ತಿರುವ ಬಾಗಲಕೋಟೆಯ ಮೌಲಾ ಸಾಬ್‌, ತೊಕ್ಕೊಟ್ಟುವಿನ ಆಸಿಫ್‌, 15 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿರುವ ಹುಬ್ಬಳ್ಳಿಯ ಮೊಹಮ್ಮದ್‌, ಕುರುಕಲು ತಿಂಡಿ ಮಾರುವ ಅನ್ವರ್‌ ಹೇಳಿದ್ದಿಷ್ಟೇ.. ಏನೂ ವ್ಯಾಪಾರ ಸಾಲದು, ಡಲ್‌ ಹೊಡೀತಾ ಇದೆ’.

ಮಂಡಕ್ಕಿ ಮಾರುತ್ತಿರುವ ಮೂಲತಃ ಚಿಕ್ಕಬಳ್ಳಾಪುರದ, ಸದ್ಯ ಬಿ.ಸಿ. ರೋಡ್‌ ನಿವಾಸಿಯಾಗಿರುವ ಭಾಗ್ಯವತಿ ಅವರು
‘ಏನಿಲ್ಲಣ್ಣ, ಸಪ್ಪಗಿದೆ ಮಾರುಕಟ್ಟೆ’ ಎಂದರು. ಹಣ್ಣು ಹಂಪಲು ರಾಶಿ ಹಾಕಿಕೊಂಡಿರುವ ಬಳ್ಳಾರಿಯ ರಮೇಶ, ‘ಜನರಿಗೆ ಸ್ವಲ್ಪ ದೂರ ಆಗಿದೆ, ಹಾಗಾಗಿ ನಮಗೆ ಸ್ವಲ್ಪ ವ್ಯಾಪಾರ ಕಡಿಮೆ’ ಎಂದರು. ಆದರೆ ತರಕಾರಿ ವ್ಯಾಪಾರಿ ಸಂದೀಪ್‌, ‘ವ್ಯಾಪಾರ ಇದೆ, ಸ್ವಲ್ಪ ಕಡಿಮೆ ಇದ್ದರೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೀನು, ಮಾಂಸದ ವ್ಯಾಪಾರ ಮೊದಲಿನಿಂದಲೂ ಉತ್ಸಾಹದಲ್ಲೇ ಸಾಗುತ್ತಿರುವುದು ಕಂಡುಬಂತು.

Advertisement

ಧೂಳುಮಯ
ಆಟೋ, ಸ್ಕೂಟರ್‌, ಬೈಕ್‌, ಒಮ್ಮೊಮ್ಮೆ ಕಾರು ಎಲ್ಲವೂ ಮಾರುಕಟ್ಟೆಯ ಪ್ರಾಂಗಣದೊಳಗೇ ನುಗ್ಗಿ ಓಡಾಟ ನಡೆಸುವುದರಿಂದ ಮಾರುಕಟ್ಟೆ ಧೂಳುಮಯವಾಗುತ್ತಿದೆ. ವಾಹನಗಳು ಒಳಗೆ ಸಿಕ್ಕಾಪಟ್ಟೆ ತಿರುಗಾಡದಂತೆ ನೋಡಿಕೊಳ್ಳಬೇಕಾಗಿದೆ. ಆದರೆ ಮೂರು ದಿಕ್ಕುಗಳಲ್ಲಿ ಮಾರುಕಟ್ಟೆ ತೆರೆದುಕೊಂಡ ಸ್ಥಿತಿಯಲ್ಲಿರುವುದರಿಂದ ಸದ್ಯ ವಾಹನ ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿದೆ. ಕನಿಷ್ಟ ಮಾರುಕಟ್ಟೆಯೊಳಗೆ ಅಲ್ಲಲ್ಲಿ ಹಂಪ್‌ ಹಾಕುವ ಮೂಲಕ ವಾಹನಗಳ ಜೋರಾದ ಓಡಾಟ ನಿಯಂತ್ರಿಸಬಹುದು ಎಂದು ತೋರುತ್ತಿದೆ. ಮಾರುಕಟ್ಟೆಗೆ ಹೊಂದಿಕೊಂಡಂತಿರುವ ಜಾಗದಲ್ಲಿ ಈ ವಾಹನಗಳಿಗೆ ಪಾರ್ಕಿಂಗ್‌ ಕಲ್ಪಿಸಿಕೊಡಬಹುದಾಗಿದೆ. ಧೂಳಿನ ಸಮಸ್ಯೆಯ ಬಗ್ಗೆ ವೀಳ್ಯದೆಲೆ, ತರಕಾರಿ ವ್ಯಾಪಾರಿ ಡೆನಿಸ್‌ ಕುಟಿನ್ಹಾ , ಸಂತೆಗೆ ಬಂದಿದ್ದ ಗ್ರಾಹಕ ರಮೇಶ್‌ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next