Advertisement

ವರ್ಷದ ಮೊದಲ ಅಧಿವೇಶನ ಕೇವಲ 5 ದಿನ!

03:45 AM Feb 06, 2017 | Team Udayavani |

ಬೆಂಗಳೂರು: ವರ್ಷಕ್ಕೆ 60 ದಿನಗಳ ಅಧಿವೇಶನ ಕರೆಯಬೇಕು ಎಂಬ ನಿಯಮ ಇದ್ದರೂ ಅದು ಜಾರಿಯಾಗುತ್ತಿಲ್ಲ ಎಂಬ ಕೊರಗಿನ ನಡುವೆಯೇ 2017ನೇ ಸಾಲಿನ ಅಧಿವೇಶನ ಆರಂಭವಾಗುತ್ತಿದ್ದು,  ಈ ವರ್ಷದ ಮೊದಲ ಅಧಿವೇಶನದ ಅವಧಿಯನ್ನು ಕೇವಲ ಐದು ದಿನಕ್ಕೆ ಸೀಮಿತಗೊಳಿಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Advertisement

ಅಷ್ಟೇ ಅಲ್ಲ, ಇತ್ತೀಚಿನ ವರ್ಷಗಳಲ್ಲಿ ವರ್ಷದ ಆರಂಭಿಕ ಅಧಿವೇಶನ ಇಷ್ಟು ಕಡಿಮೆ ದಿನ ನಡೆಯುತ್ತಿರುವುದು ಇದೇ ಮೊದಲಾಗಿದ್ದು ಈ ಬಗ್ಗೆ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರು ಈಗಾಗಲೇ ತಮ್ಮ ಅಸಮಾಧಾನ ಹೊರಹಾಕಿದ್ದು, ವಿಧಾನಸಭೆ ಪ್ರತಿಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಧಿವೇಶನದ ಅವಧಿಯನ್ನು 10 ಅಥವಾ 15 ದಿನಕ್ಕೆ ವಿಸ್ತರಿಸುವಂತೆ ಕಲಾಪದ ವೇಳೆ ಸರ್ಕಾರವನ್ನು ಒತ್ತಾಯಿಸುವುದಾಗಿ ಶೆಟ್ಟರ್‌ ಹೇಳಿದ್ದಾರೆ.

ವರ್ಷಕ್ಕೆ 60 ದಿನ ಅಧಿವೇಶನ ಕರೆಯಬೇಕು ಎಂಬ ಬೇಡಿಕೆ ಇದ್ದರೂ 1952ರ ನಂತರ ಅದು ಈಡೇರಿದ್ದು ಬಹಳ ಕಡಿಮೆ. ಅದರಲ್ಲೂ 1985ರ ನಂತರ ವರ್ಷಕ್ಕೆ 60 ದಿನ ಕಲಾಪ ನಡೆದ ಉದಾಹರಣೆಯೇ ಇಲ್ಲ. ಈ ಹಿನ್ನೆಲೆಯಲ್ಲಿ ಕಲಾಪವನ್ನು ಕನಿಷ್ಟ 60 ದಿನ ನಡೆಸಬೇಕು ಎಂಬ ಬಗ್ಗೆ ಸರ್ಕಾರ 2005ರಲ್ಲಿ ನಿಯಮ ರೂಪಿಸಿತ್ತು.

ಆದರೆ, ನಿಯಮ ರೂಪುಗೊಂಡಿತೇ ಹೊರತು ಅದು ಅನುಷ್ಠಾನಕ್ಕೆ ಬಂದಿರಲಿಲ್ಲ. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಈ ನಿಯಮವನ್ನು ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಹೇಳಿತ್ತು. ಆದರೆ, 2013ರ ಮೇ ತಿಂಗಳಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ 2015ರಿಂದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಭರವಸೆ ನೀಡಿತ್ತು. ಅದರಂತೆ 2015ರಲ್ಲಿ 59 ದಿನ ಕಲಾಪ ನಡೆಸುವ ಮೂಲಕ ಭರವಸೆ ಈಡೇರಿಸುವ ಮುನ್ಸೂಚನೆ ನೀಡಿತ್ತು.

Advertisement

ಆದರೆ, 2016ರಲ್ಲಿ ಭರವಸೆ ಹುಸಿಯಾಯಿತು. ಅಧಿವೇಶನ ಕರೆದಿದ್ದೇ ಒಟ್ಟು 47 ದಿನ. ಅದರಲ್ಲಿ ಗದ್ದಲದಿಂದಾಗಿ ಮಧ್ಯದಲ್ಲೇ ಅಧಿವೇಶನ ಮುಂದೂಡಿದ್ದರಿಂದ ಒಟ್ಟು ಕಲಾಪ ನಡೆದಿದ್ದು ಕೇವಲ 34 ದಿನ ಮಾತ್ರ.

ಇದೀಗ ವರ್ಷಾರಂಭದ ಅಧಿವೇಶನದಲ್ಲೇ ಕಲಾಪದ ದಿನಗಳನ್ನು ಮೊಟಕುಗೊಳಿಸುವ ಮೂಲಕ ಸರ್ಕಾರ ಈ ವರ್ಷವೂ ನಿಯಮಾವಳಿಯಂತೆ 60 ದಿನ ಕಲಾಪ ನಡೆಯುವುದು ಸಾಧ್ಯವಿಲ್ಲ ಎಂಬ ಮುನ್ಸೂಚನೆ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಮೊದಲ ಅಧಿವೇಶನ ಇಷ್ಟು ಕಡಿಮೆ ಅವಧಿ ನಡೆಯುತ್ತಿರುವುದು ಇದೇ ಮೊದಲು. 2012 ಮತ್ತು 2013ರಲ್ಲಿ ತಲಾ ಎಂಟು ದಿನ, 2014ರಲ್ಲಿ ಏಳು ದಿನ, 2016ರಲ್ಲಿ 10 ದಿನ ಮತ್ತು 2016ರಲ್ಲಿ ಆರು ದಿನ ಕಲಾಪ ನಡೆದಿತ್ತು.

ಅಧಿವೇಶನ ವಿಸ್ತರಿಸಲು ಒತ್ತಾಯ
ವರ್ಷದ ಮೊದಲ ಅಧಿವೇಶನದಲ್ಲಿ ಕಲಾಪದ ದಿನಗಳನ್ನು ಕೇವಲ ಐದು ದಿನಗಳಿಗೆ ಸೀಮಿತಗೊಳಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಕಲಾಪದ ದಿನಗಳನ್ನು ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.

ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ಬರ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಹೆಚ್ಚುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮುಂತಾದ ಪ್ರಮುಖ ವಿಚಾರಗಳು ಹೆಚ್ಚಾಗಿ ಚರ್ಚೆಯಾದರೆ ಸರ್ಕಾರದ ಬಣ್ಣ ಬಯಲಾಗುತ್ತದೆ. ಅದರಲ್ಲೂ ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫ‌ಲವಾಗಿದ್ದು, ಈ ಕುರಿತು ಹೆಚ್ಚು ಚರ್ಚೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಕಡಿಮೆ ದಿನ ನಿಗದಿಪಡಿಸಿದೆ ಎಂದು ಆರೋಪಿಸಿದ್ದಾರೆ.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರೂ ಕೇವಲ ಐದು ದಿನ ಕಲಾಪ ನಿಗದಿಪಡಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ರಾಜಕೀಯ ಗೊಂದಲದಲ್ಲಿರುವ ಕಾಂಗ್ರೆಸ್‌ಗೆ ಸರ್ಕಾರ ಉಳಿಸಿಕೊಂಡರೆ ಸಾಕು ಎನ್ನುವ ಪರಿಸ್ಥಿತಿ ಇದೆ. ಹೀಗಾಗಿ ನಾಮ್‌ಕಾವಾಸ್ತೆ ಈ ಅಧಿವೇಶನ ಕರೆದಿದ್ದಾರೆ. ಚರ್ಚೆಗೆ ಸಾಕಷ್ಟು ವಿಷಯಗಳಿದ್ದರೂ ಅದಕ್ಕೆ ಅವಕಾಶವಾಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ದೂರಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next