ಜಗ್ಗೇಶ್ ಅಂದರೆ ಹಾಸ್ಯ ನೆನಪಾಗುತ್ತೆ. ಅವರ ಹಾಸ್ಯಭರಿತ ಮಾತುಗಳು ತೇಲಾಡುತ್ತವೆ. ಹಾಗೆಯೇ ಅಷ್ಟೇ ಗಂಭೀರವಾಗಿಯೂ ಮಾತಾಡುತ್ತಾರೆ. ಕನ್ನಡದ ನೆಲ,ಜಲ,ಭಾಷೆ ವಿಷಯ ಬಂದಾಗಲಂತೂ ಅಷ್ಟೇ ಪ್ರೀತಿಯಿಂದ ಮಾತಾಡುತ್ತಾರೆ. ಈಗ ಅವರು ಕನ್ನಡ ಸರ್ಕಾರಿ ಶಾಲೆ ಕುರಿತು ಮಾತಾಡುತ್ತಿದ್ದಾರೆ. ಹಾಗಂತ, ಬೇರೇನೋ ಅರ್ಥ ಕಲ್ಪಿಸಿಕೊಳ್ಳುವುದು ಬೇಡ. ಅವರೊಂದು ಚಿತ್ರ ಮಾಡುತ್ತಿದ್ದಾರೆ.
ಆ ಚಿತ್ರದಲ್ಲಿ “ಕನ್ನಡ ಮೇಷ್ಟ್ರು’ ಪಾತ್ರ ನಿರ್ವಹಿಸುತ್ತಿದ್ದಾರೆ. ಆ ಕುರಿತು ಸಾಕಷ್ಟು ಗಂಭೀರವಾಗಿಯೇ ಮಾತಾಡುತ್ತಾರೆ ಜಗ್ಗೇಶ್. ಅವರ ಮಾತುಗಳಲ್ಲಿದ್ದ ಗಂಭೀರತೆ ಹೀಗಿತ್ತು. “ನಾನು ಆ ಪಕ್ಷ, ಈ ಪಕ್ಷ ಅಂತ ಹೇಳುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಒಂದೇ. ಅವರಿಗೆ ಬೇಕಾಗಿರೋದು, ತಮಗೆ ವೋಟ್ ಹಾಕಿದವರಿಗೆ ಏನೇನು ಫ್ರೀ ಆಗಿ ಕೊಡಬಹುದೋ, ಅದನ್ನ ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳೋದು. ನೀವು ಏನಾದ್ರೂ ಕೊಡಿ ಅಥವಾ ಬಿಡಿ.
ಆದರೆ, ಅದರ ಜೊತೆ ವಿದ್ಯೆಯನ್ನ ಮಾತ್ರ ಫ್ರೀ ಆಗಿ ಕೊಡಿ. ನೀವು ಅದೊಂದನ್ನ ಕೊಟ್ರೆ, ಉಳಿದದ್ದು ಅದರ ಹಿಂದೆ ತನ್ನಿಂದ ತಾನೇ ಬರುತ್ತದೆ. ಮೇ-ಜೂನ್ ತಿಂಗಳು ಬಂತೆಂದರೆ, ಎಷ್ಟೋ ಪೋಷಕರ ಮುಖ ಬಾಡಿ ಹೋಗುತ್ತದೆ. ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು? ಅದಕ್ಕೆ ಹೇಗೆ ಹಣ ಹೊಂದಿಸಿಕೊಳ್ಳಬೇಕು ಎಂಬ ಚಿಂತೆ ಶುರುವಾಗುತ್ತೆ. ಇವತ್ತು ಮಕ್ಕಳನ್ನ ಶಾಲೆಗೆ ಸೇರಿಸೋದು ಅಂದರೆ, ಪೋಷಕರಿಗೆ ಭಯವಾಗುತ್ತೆ. ಹಾಗಾಗಿ ವಿದ್ಯೆ ಕೊಡುವತ್ತವೂ ಗಮನಹರಿಸಬೇಕಿದೆ’ ಎಂಬುದು ಅವರ ಮಾತು.
ಜಗ್ಗೇಶ್ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ನಟಿಸುತ್ತಿದ್ದು, ಅದರಲ್ಲಿ ಅವರದು ಮೇಷ್ಟ್ರು ಪಾತ್ರ. ಸೋಮವಾರವಷ್ಟೇ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಜಗ್ಗೇಶ್ ಕಂಡ ಇವತ್ತಿನ ಕನ್ನಡ ಶಾಲೆಗಳಿಗೆ ಕಳುಹಿಸುವ ಅನೇಕ ಪೋಷಕರ ಮನಸ್ಥಿತಿ, ಅವರ ತುಮುಲ-ತಳಮಳಗಳ ಬಗ್ಗೆ ಹೇಳುತ್ತಲೇ ಹೋಗುತ್ತಾರೆ. “ಒಂದು ಗಂಭೀರ ವಿಷಯವನ್ನು ಈ ಚಿತ್ರದಲ್ಲಿ ನವಿರಾದ ಹಾಸ್ಯದ ಮೂಲಕ ಹೇಳುತ್ತಿರುವ ಅವರಿಗೆ ಈ ವಿಷಯ ಜನಕ್ಕೆ ಮುಟ್ಟಿದ್ರೆ ಇದೊಂದು ಆಂದೋಲನವಾಗುತ್ತೆ’ ಎಂಬ ನಂಬಿಕೆ ಇಟ್ಟಿದ್ದಾರೆ.