Advertisement

ಕಿಮ್ಸ್‌ ನಲ್ಲಿ ನಡೆದ ಮೊದಲ ಮೂತ್ರಪಿಂಡ ಕಸಿ ಯಶಸ್ವಿ

12:15 PM Apr 23, 2022 | Team Udayavani |

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಮೊದಲ ಯಶಸ್ವಿ ಕಿಡ್ನಿ ಕಸಿ ಮಾಡಲಾಗಿದ್ದು, ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತೆಯಲ್ಲಿ ಕೈಗೊಂಡ ರಾಜ್ಯದ ಮೊದಲ ಕಿಡ್ನಿ ಕಸಿ ಇದಾಗಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇರ ರಕ್ತ ಸಂಬಂಧಿಯಿಂದ ದಾನ ಪಡೆದ ಮೂತ್ರಪಿಂಡ ಕಸಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ಪರವಾನಗಿ ದೊರೆತಿತ್ತು. ತಕ್ಷಣಕ್ಕೆ ಕಾರ್ಯಪ್ರವೃತ್ತರಾದ ಕಿಮ್ಸ್‌ ಮೂತ್ರಪಿಂಡ ಶಾಸ್ತ್ರ, ಮೂತ್ರ ಶಾಸ್ತ್ರ ತಜ್ಞರು, ಅರವಳಿಕೆ ತಜ್ಞರು, ಇನ್ನಿತರ ಸಿಬ್ಬಂದಿ ಯಶಸ್ವಿ ಕಿಡ್ನಿ ಕಸಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ 22 ವರ್ಷದ ಯುವಕನಿಗೆ ಕಿಡ್ನಿ ಕಸಿ ಮಾಡಲಾಗಿದೆ ಎಂದರು.

ಈ ಹಿಂದೆ ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಸುಧಾಕರ ಅವರು ಕಿಮ್ಸ್‌ಗೆ ಭೇಟಿ ನೀಡಿದ್ದಾಗ ಕಿಡ್ನಿ ಕಸಿ ಆರಂಭಿಸುವ ಘೋಷಣೆ ಮಾಡಿದ್ದರು. ಅದರಂತೆ ಅಗತ್ಯ ಪರವಾನಗಿ, ಸೌಲಭ್ಯಗಳನ್ನು ನೀಡಿದ್ದರಿಂದ ಕಿಮ್ಸ್‌ನಲ್ಲಿ ಕಿಡ್ನಿ ಕಸಿ ಆರಂಭಗೊಂಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕಿಡ್ನಿ ಕಸಿಗೆ 6ರಿಂದ ಹಿಡಿದು 10 ಲಕ್ಷ ರೂ.ವರೆಗೆ ಶುಲ್ಕ ಪಡೆಯಲಾಗುತ್ತದೆ. ಆದರೆ ಕಿಮ್‌ Õನಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದವರು, ಪರಿಶಿಷ್ಟ ಜಾತಿ, ಪಂಗಡದವರಿಗೆ ಉಚಿತವಾಗಿ ಕಿಡ್ನಿ ಕಸಿ ಮಾಡಲಾಗುತ್ತದೆ. ಎಪಿಎಲ್‌ ಕಾರ್ಡ್‌ ಹೊಂದಿದವರು 1.5 ಲಕ್ಷ ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ಮೂತ್ರಪಿಂಡ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ವೆಂಕಟೇಶ ಮೊಗೇರ ಮಾತನಾಡಿ, ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದದ ಬೀಳಗಿ ತಾಲೂಕಿನ ಯುವಕ ಬಾಗಲಕೋಟೆಯಲ್ಲಿ ಡಯಾಲಿಸಿಸ್‌ ಪಡೆದುಕೊಂಡು ನಂತರ ಹುಬ್ಬಳ್ಳಿ-ಧಾರವಾಡದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ. ಬಿಪಿಎಲ್‌ ಕಾರ್ಡ್‌ ಹೊಂದಿರುವ ಈ ವ್ಯಕ್ತಿ ಅಲ್ಲಿ ವೆಚ್ಚ ಅಧಿಕವಾಗಲಿದೆ ಎಂದು ಕಿಮ್ಸ್‌ಗೆ ದಾಖಲಾಗಿದ್ದ. ಯುವಕನ ತಾಯಿ ತಮ್ಮ ಒಂದು ಮೂತ್ರಪಿಂಡ ನೀಡಲು ಮುಂದಾಗಿದ್ದರಿಂದ ಕಸಿ ಮಾಡಲಾಗಿದ್ದು, ಇಬ್ಬರೂ ಉತ್ತಮ ರೀತಿಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದರು.

ಮೂತ್ರಪಿಂಡ ಕಸಿಗೆ ರಕ್ತದ ಕಣಗಳ ಹೊಂದಾಣಿಕೆ ಅಗತ್ಯ. ಈ ಪ್ರಕರಣದಲ್ಲಿ ಯುವಕನ ರಕ್ತದ ಗುಂಪು ಬಿ ಪಾಸಿಟಿವ್‌ ಇದ್ದರೆ ತಾಯಿ ರಕ್ತದ ಗುಂಪು ಒ ಪಾಸಿಟಿವ್‌ ಇತ್ತು. ಎರಡು ಕಣಗಳು ಹೊಂದಾಣಿಕೆಯಾದವು. ಈ ಹೊಂದಾಣಿಕೆ ಕುರಿತು ಪರೀಕ್ಷೆಗೆ ಬೆಂಗಳೂರಿನ ಮೆಡಿಕಲ್‌ ಸೇವಾ ಟ್ರಸ್ಟ್‌ಗೆ ಕಳುಹಿಸಬೇಕಾಗಿದ್ದು, ಇದಕ್ಕೆ ಪ್ರತಿ ರೋಗಿಗೆ ಸುಮಾರು 30-40 ಸಾವಿರ ರೂ. ವೆಚ್ಚವಾಗುತ್ತದೆ. ಈ ಸೌಲಭ್ಯ ಕಿಮ್ಸ್‌ನಲ್ಲಿಯೇ ಆರಂಭಿಸುವ ಚಿಂತನೆ ಇದ್ದು, ಯಂತ್ರೋಪಕರಣ, ನುರಿತ ತಜ್ಞರ ಅಗತ್ಯವಿದೆ. ಕಿಮ್ಸ್‌ಗೆ ತಿಂಗಳಿಗೆ ಸುಮಾರು 1,000 ಜನರು ಡಯಾಲಿಸಿಸ್‌ಗೆ ಬರುತ್ತಿದ್ದು, ಇದರಲ್ಲಿ ಸುಮಾರು 200 ಜನರು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ 5-6 ಜನರು ಕಿಡ್ನಿ ಕಸಿಗೆ ನೋಂದಣಿ ಮಾಡಿದ್ದಾರೆ ಎಂದು ತಿಳಿಸಿದರು.

Advertisement

ಮೂತ್ರಶಾಸ್ತ್ರ ತಜ್ಞ ಡಾ| ಆರ್‌.ಆರ್‌.ರಾಯ್ಕರ್‌ ಮಾತನಾಡಿ, ದಾನಿಯಿಂದ ಕಿಡ್ನಿ ದಾನ ಪಡೆದು ರೋಗಿಗೆ ಅದನ್ನು ಅಳವಡಿಸುವುದು ಏಕಕಾಲಕ್ಕೆ ನಡೆಯಬೇಕಾಗುತ್ತದೆ. ಮೂತ್ರಪಿಂಡ ತೆಗೆದು, ಜೋಡಿಸುವ ಕ್ರಿಯೆಯಲ್ಲಿ 45 ನಿಮಿಷದಿಂದ ಒಂದು ತಾಸಿನೊಳಗೆ ಅತ್ಯಂತ ಮಹತ್ವದ ಅವಧಿಯಾಗಿದ್ದು, ಇದರೊಳಗೆ ಎಲ್ಲವೂ ಸಮರ್ಪಕ ಆಗದಿದ್ದರೆ ಕಿಡ್ನಿ ಕಸಿ ವೈಫಲ್ಯಗೊಳ್ಳುವ ಸಾಧ್ಯತೆ ಇರುತ್ತದೆ ಎಂದರು.

ಅರವಳಿಕೆ ವಿಭಾಗದ ಮುಖ್ಯಸ್ಥೆ ಡಾ| ಮಾಧುರಿ ಮಾತನಾಡಿ, ಕಿಡ್ನಿ ಕಸಿಯಲ್ಲಿ ದಾನ ನೀಡುವವರು ಹಾಗೂ ಕಸಿಗೆ ಒಳಗಾಗುವವರಿಗೆ ಏಕಕಾಲಕ್ಕೆ ಅರವಳಿಕೆ ಅವಶ್ಯ. ಕಿಮ್ಸ್‌ನಲ್ಲಿ ಕೈಗೊಂಡ ಮೊದಲ ಯಶಸ್ವಿ ಕಿಡ್ನಿ ಕಸಿಯಲ್ಲಿ ಅರವಳಿಕೆ ನೀಡಿಕೆಗೆ ಎರಡು ತಂಡಗಳನ್ನು ಮಾಡಲಾಗಿತ್ತು. ತಾಯಿ ಮತ್ತು ಮಗನಿಗೆ ಅರವಳಿಕೆ ಪ್ರತ್ಯೇಕವಾಗಿ ನೀಡಲಾಯಿತು. ಶಸ್ತ್ರಚಿಕಿತ್ಸೆ ನಂತರವೂ ನೋವು ತಡೆದುಕೊಳ್ಳುವ ನಿಟ್ಟಿನಲ್ಲಿ ಅರವಳಿಕೆ ಅವಶ್ಯಕತೆ ಇರುತ್ತದೆ ಎಂದು ಹೇಳಿದರು.

ಕಿಡ್ನಿ ಕಸಿ ಯಶಸ್ವಿ ಕಾರ್ಯದಲ್ಲಿ ಡಾ| ವೆಂಕಟೇಶ ಮೊಗೇರ, ಡಾ| ಮಯ್ನಾ, ಡಾ| ಎಂ.ಆರ್‌. ಪಾಟೀಲ, ಡಾ| ವಿವೇಕ ಗಾಣಿಗೇರ, ಡಾ| ಜಯದೀಪ ರತ್ಕಲ್‌, ಡಾ| ಮಂಜುಪ್ರಸಾದ, ಡಾ| ರವಿಕುಮಾರ ಜಾಧವ, ಡಾ| ಸಂಪತ್‌ಕುಮಾರ, ಡಾ| ತಕಪ್ಪ, ಡಾ| ಮಾಧುಶ್ರೀ, ಡಾ| ಭೋಸ್ಲೆ, ಡಾ| ಶೀತಲ್‌ ಹಿರೇಗೌಡರ ತಂಡ, ಕಿಡ್ನಿ ಕಸಿ ಸಂಯೋಜಕರಾಗಿ ಶಿವಾನಂದ ಹೊಣಕೇರಿ, ನರ್ಸಿಂಗ್‌ ವಿಭಾಗದಿಂದ ಬಿ. ಹನ್ನಪಾಲ್‌, ರತ್ನಾ, ಮಂಜುಳಾ ಇನ್ನಿತರರನ್ನೊಳಗೊಂಡ ತಂಡ ಶ್ರಮಿಸಿದೆ.

ರೋಟರಿ ಕ್ಲಬ್‌ ವಿವಿಧ ಯಂತ್ರೋಪಕರಣ ಸೇರಿದಂತೆ ಹಲವು ರೀತಿಯ ನೆರವು ನೀಡಿದೆ. ಸುದ್ದಿಗೋಷ್ಠಿಯಲ್ಲಿ ಡಾ| ಈಶ್ವರ ಹೊಸಮನಿ, ಡಾ| ಅರುಣಕುಮಾರ, ಡಾ| ರಾಜಶೇಖರ, ದೇವರಾಜ ನಾಯಕ, ಕೇವಲ್‌ ಲುಂಕೆರ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next