ಬೆಳಗಾವಿ: ಹಿಜಾಬ್ ಆತಂಕ ಹಾಗೂ ಗೊಂದಲದ ಮಧ್ಯೆ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.
ಆದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತಿದ್ದ ಆರು ಜನ ನಕಲಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಅವರನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಚಿಕ್ಕೋಡಿ ಪಟ್ಟಣದ ಶಾಲೆಯೊಂದರಲ್ಲಿ ಬೇರೆ ವಿದ್ಯಾರ್ಥಿಗಳ ಪರ ಪರೀಕ್ಷೆ ಬರೆಯಲು ಬಂದಿದ್ದ ಆರು ಜನ ನಕಲಿ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಈ ಘಟನೆ ಹೊರತುಪಡಿಸಿದರೆ ಜಿಲ್ಲಾದ್ಯಂತ ಪರೀಕ್ಷೆ ಸುಗಮವಾಗಿ ನಡೆದಿದೆ. ಪರೀಕ್ಷೆ ಮೊದಲ ದಿನ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರುವ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಸೂಕ್ತ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಆದರೆ ಎಲ್ಲಿಯೂ ಅಂತಹ ಗೊಂದಲ ಉಂಟಾದ ಇಲ್ಲವೇ ಹಿಜಾಬ್ ಧರಿಸಿ ಬಂದ ಪ್ರಕರಣಗಳು ವರದಿಯಾಗಿಲ್ಲ. ಹಿಜಾಬ್ ಧರಿಸಿ ಬಂದವರಿಗೆ ಅದನ್ನು ತೆಗೆದು ಪರೀಕ್ಷಾ ಕೇಂದಕ್ಕೆ ತೆರಳಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.
ಬೆಳಗಾವಿ ನಗರದಲ್ಲಿ ಬೆಳಿಗ್ಗೆ ಪರೀಕ್ಷಾ ಕೇಂದಕ್ಕೆ ಭೇಟಿ ನೀಡಿದ ಶಾಸಕ ಅನಿಲ ಬೆನಕೆ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಶುಭ ಕೋರಿದರು. ಯಾವುದೇ ಆತಂಕ ಇಲ್ಲದೇ ಧೈರ್ಯದಿಂದ ಪರೀಕ್ಷೆ ಬರೆಯುವಂತೆ ಹುರಿದುಂಬಿಸಿದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 33,807 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 44,780 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 139 ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 157 ಪರೀಕ್ಷಾ ಕೇಂದ್ರ ತೆರೆಯಲಾಗಿದೆ.
ಸೋಮವಾರ ನಡೆದ ಪ್ರಥಮ ಭಾಷೆ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಣಿ ಮಾಡಿದ್ದ ವಿದ್ಯಾರ್ಥಿಗಳಲ್ಲಿ 430 ವಿದ್ಯಾರ್ಥಿಗಳು ಗೈರಾಗಿದ್ದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 663 ವಿದ್ಯಾರ್ಥಿಗಳು ಗೈರಾಗಿದ್ದರು. ಆದರೆ ಯಾವುದೇ ಡಿಬಾರ್ ಆಗಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ಕಾರಣದಿಂದ ಕಳೆದೆರಡು ವರ್ಷ ನಿರ್ಬಂಧ ಹಾಗೂ ಗೊಂದಲ ನಿರ್ಮಾಣವಾಗಿತ್ತು. ಆದರೆ ಈ ವರ್ಷ ಕೋವಿಡ್ ಆತಂಕ ದೂರವಾಗಿರುವುದರಿಂದ ಪರೀಕ್ಷೆ ಬರೆಯಲು ಮುಕ್ತ ಅವಕಾಶ ಸಿಕ್ಕಿದೆ. ಅದಕ್ಕೆ ತಕ್ಕಂತೆ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಕಡೆ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.