Advertisement

ಕುಟುಂಬವೇ ಖುಷಿಯ ಇಮ್ಮಡಿಸುವ ಪಟಾಕಿ…

11:49 AM Nov 14, 2020 | Nagendra Trasi |

ಹಬ್ಬ ಬಂತೆಂದರೆ ಮನೆಯವರೆಲ್ಲ ಒಟ್ಟು ಸೇರಿ ಹಬ್ಬ ಆಚರಿಸುವುದರಲ್ಲಿ ಇರುವ ಖುಷಿ ಬೇರಾವುದರಲ್ಲಿಯೂ ಸಿಗಲಾರದು. ಇತ್ತೀಚೆಗೆ ಒತ್ತಡದ ಜೀವನದಿಂದ
ಕುಟುಂಬದ ಜತೆ ಸರಿಯಾಗಿ ದಿನಗಳನ್ನು ಕಳೆಯಲು ಕಷ್ಟವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಹಬ್ಬಗಳ ಸಂದರ್ಭ ಇವು ಸಮಸ್ಯೆಯಾಗುತ್ತದೆ.

Advertisement

ಈ ವರ್ಷವಂತೂ ದೂರದ ಊರುಗಳಿಗೆ ಹೋಗುವವರಿಗೆ ಕಷ್ಟವೇ. ಚಿಕ್ಕವರಿದ್ದಾಗ ಸಣ್ಣ ವಿಷಯಗಳಿಗೆ ಹೆಚ್ಚೆಚ್ಚು ಖುಷಿ ಪಡುತ್ತಿದ್ದ ನಾವು ಆ ಖುಷಿ ಗಳನ್ನು ಮರಳಿ ಪಡೆಯುವಲ್ಲಿ ವಿಫ‌ಲರಾಗಿದ್ದೇವೆ. ಬರಬರುತ್ತಾ ನಾವೆಲ್ಲರೂ ನಮ್ಮದೇ ಕುಟುಂಬವನ್ನು ಚಿಕ್ಕದಾಗಿ ಕಟ್ಟಿಕೊಂಡು ಅದೇ ನಮ್ಮ ಕುಟುಂಬವೆಂದು ಭಾವಿಸಿ ಅದೇ ಚೌಕಟ್ಟಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸುತ್ತಿದ್ದೇವೆ. ಮುಂದೆ ಮಕ್ಕಳಿಗೆ ಕುಟುಂಬವೆಂದರೆ ನಾನು, ಅಮ್ಮ, ಅಪ್ಪ ಎಂದಾಗಿ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸಂತೋಷಗಳು ಹಂಚಿಕೊಂಡಾಗ ಮಾತ್ರ ಇಮ್ಮಡಿಗೊಳ್ಳುತ್ತದೆ ಎಂಬುದನ್ನು ಮಕ್ಕಳಿಗೂ ಹೇಳಿಕೊಡಬೇಕು.

ಹಿಂದೆ ನಾವು ಪಟ್ಟ ಖುಷಿಯನ್ನು ನಮ್ಮ ಮುಂದಿನ ತಲೆಮಾರಿನವರು ಅನುಭವಿಸಲು ಬಿಡುವುದು ನಮ್ಮ ಕೈಯಲ್ಲಿಯೇ ಇದೆ. ಅದನ್ನು ನಾವು ಆನಂದಿಸಲು ಬಿಡದೆ ಮಕ್ಕಳ ಮೇಲೆ ಗೂಬೆ ಕೂರಿಸುವುದು ತಪ್ಪಾಗುತ್ತದೆ. ಏಕೆಂದರೆ ನಾವು ಹೇಳಿಕೊಟ್ಟ ಸಂಸ್ಕಾರವನ್ನೇ ಮಕ್ಕಳು ಕಲಿಯುವುದು. ಹಾಗಾಗಿ ಯಾವುದನ್ನು ಹೇಳಿಕೋಡಬೇಕು, ಯಾವುದನ್ನು ಹೇಳಿಕೊಡಬಾರದು ಎಂಬುದನ್ನು ನೀವೇ ಅಳೆದು ತೂಗಿ ನೋಡಿಕೊಳ್ಳಬೇಕು.

ನಿಮ್ಮ ತಂದೆ – ತಾಯಿ ನಿಮಗೆ ಕೊಟ್ಟ ಖುಷಿಯ ದುಪ್ಪಟ್ಟನ್ನು ನಿಮ್ಮ ಮಕ್ಕಳಿಗೆ ನೀಡಿದಾಗ ಮಾತ್ರ ಬದುಕಿನ ದೊಡ್ಡ ಸಾರ್ಥಕತೆಯ ಅರಿವಾಗುವುದು. ನಗರ ಪ್ರದೇಶದಲ್ಲಿ ವಾಸಿಸುವವರು ಹಳ್ಳಿಗಳಲ್ಲಿ ಮನೆಯಿದ್ದರೆ ಒಂದೆರಡು ದಿನದ ಮಟ್ಟಿಗಾದರೂ ಮಕ್ಕಳನ್ನು ಕರೆದುಕೊಂಡು ಹೋಗಿ ಎಲ್ಲರೊಂದಿಗೆ ಹಬ್ಬ ಆಚರಿಸಿ. ಆಗ ಮಕ್ಕಳು ಎಲ್ಲರೊಂದಿಗೆ ಬೆರೆಯುವುದನ್ನು ಕಲಿಯುವುದಲ್ಲದೇ, ಅಲ್ಲಿಯ ಆಚಾರ- ವಿಚಾರ ಪದ್ಧತಿಗಳನ್ನು ನೋಡುತ್ತಾರೆ.

ಮುಂದೆ ಹೆಚ್ಚಾಗಲಾರದಿದ್ದರೂ ಸ್ವಲ್ಪ ಮಟ್ಟಿಗಾದರೂ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಬದಲಾವಣೆ ಅನಿವಾರ್ಯವಾದರೆ ಆ ಬದಲಾವಣೆಯೊಂದಿಗೆ
ಹಳೆತನದ ಸೊಬಗನ್ನು ಸೇರಿಸಿ ಸಾಗಿದಾಗ ಮಾತ್ರ ಅದಕ್ಕೊಂದು ಕಳೆ. ಆ ಹೊಸತನ ಕ್ಕೊಂದು ಮೆರುಗು. ಹಾಗಾಗಿ ದೀಪಾವಳಿ ಎಂದಲ್ಲ; ಹಬ್ಬಗಳೆಲ್ಲವನ್ನು
ಕುಟುಂಬದ ಜತೆ ಆಚರಿಸಿ ಖುಷಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next