ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ 13 ವಲಯ ಗಳಲ್ಲಿಯೂ ಫೈರ್‌ಲೈನ್ (ಬೆಂಕಿರೇಖೆ) ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಬೆಂಕಿ ಆಕಸ್ಮಿಕದಿಂದ ಸಾಕಷ್ಟು ವನ್ಯ ಸಂಪತ್ತು, ಸಣ್ಣ ಜೀವಿಗಳು ಭಸ್ಮವಾಗುತ್ತಿದ್ದವು. ಇದನ್ನು ತಪ್ಪಿಸಲು ಕಳೆದ ಎರಡು ಮೂರು ವರ್ಷಗಳಿಂದ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಈ ಬಾರಿ ಹೆಚ್ಚಿನ ಜಾಗ್ರತೆವಹಿಸಿದ್ದು, ಕೆಲವು ಕಡೆ ಎರಡು ಬಾರಿ ಬೆಂಕಿ ರೇಖೆ ನಿರ್ಮಿಸುತ್ತಿದೆ.
ಮಾರ್ಚ್ 2014ರಲ್ಲಿ ಬಂಡೀಪುರಕ್ಕೆ ಹಾಗೂ 2017 ಫೆಬ್ರವರಿಯಲ್ಲಿ ಕಲ್ಕೆರೆಗೆ ಆಕಸ್ಮಿಕವಾಗಿ ಬಿದ್ದ ಬೆಂಕಿಯು ನಿಯಂತ್ರಣಕ್ಕೆ ಬಾರದೆ ಸಾವಿರಾರು ಎಕರೆಯಲ್ಲಿನ ವನ್ಯ ಸಂಪತ್ತು ನಾಶವಾಗಿತ್ತು. ಕಳೆದ ವರ್ಷ ಬಿದ್ದ ಉತ್ತಮ ಮಳೆಯಿಂದ ಗಿಡ ಮರಗಳು ಎಲೆಗಳನ್ನು ತುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವು. ಪ್ರಾಣಿಗಳಿಗೂ ಆಹಾರ ಸಿಕ್ಕಿತ್ತು. ಇದೀಗ ಬೇಸಿಗೆ ಆರಂಭವಾಗುತ್ತಿದ್ದು, ಮರಗಳು ಎಲೆ ಉದುರಿಸಲಾರಂಭಿಸಿವೆ. ಹಸಿರು ಹುಲ್ಲು ಒಣಗಿನಿಂತಿದೆ.
ಈ ಬಾರಿ ಬೇಸಿಗೆ ಪ್ರಾರಂಭವಾಗುವ ಮೊದಲೇ ಮೇಲುಕಾಮನಹಳ್ಳಿ ಬಳಿಯಿಂದ ಕೆಕ್ಕನಹಳ್ಳ, ಮದ್ದೂರಿನಿಂದ ಮೂಲೆಹೊಳೆ ವರೆಗಿನ ರಸ್ತೆ ಬದಿಯಲ್ಲಿನ ಒಣ ಹುಲ್ಲು ಹಾಗೂ ಬಳ್ಳಿ ಸುಡುವ ಕಾರ್ಯ ಭರದಿಂದ ಸಾಗಿದೆ. ಜನವರಿ ಮೊದಲನೇ ವಾರದಲ್ಲಿ ಮೊದಲಿಗೆ ಲಂಟಾನ ಹಾಗೂ ಕಳೆಗಳನ್ನು ತೆರವುಗೊಳಿಸಲಾಯಿತು. ಅಲ್ಲದೆ, ಕಾಡಿ ನೊಳಗೂ ಬೆಂಕಿಯು ವ್ಯಾಪಿಸಲು ಸಾಧ್ಯವಾಗದಂತೆ ಫೈರ್‌ಲೈನ್ ನಿರ್ಮಾಣ ಮಾಡಲಾಗಿದೆ.
ಈ ಕಾರ್ಯವನ್ನು ಫೆಬ್ರವರಿ ತಿಂಗಳೊಳಗೆ ಮುಗಿಸಲು ನಿರ್ಧರಿಸಲಾಗಿದ್ದು, ಉದ್ಯಾನದ 13 ವಲಯಗಳಲ್ಲಿಯೂ 300 ಇಲಾಖೆಯ ಸಿಬ್ಬಂದಿ ಜೊತೆಗೆ ದಿನಗೂಲಿ ನೌಕರರನ್ನು ಬಳಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಪ್ರತಿ ದಿನವೂ 25 ರಿಂದ 40 ದಿನಗೂಲಿ ನೌಕರರ ನೆರವಿನಿಂದ ಕನಿಷ್ಠ ದಿನಕ್ಕೆ 5 ಕಿ.ಮೀ. ಫೈರ್‌ಲೈನ್ ರಚನೆ ಮಾಡಲಾಗುತ್ತಿದೆ.
ದಿನೇ ದಿನೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಬೆಂಕಿಯ ಶಾಖದಿಂದ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿದೆ. ಫೈರ್‌ಲೈನ್ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ ಪ್ರತಿ ಸಿಬ್ಬಂದಿಗೂ 5 ಲೀಟರ್ ನೀರಿನ ಕ್ಯಾನ್ ಒದಗಿಸಲಾಗಿದೆ. ಬೆಂಕಿಯು ನಿಗದಿತ ರೇಖೆಯಿಂದ ಬೇರೆಡೆಗೆ ಹರಡದಂತೆ ಹಸಿರು ಸೊಪ್ಪು ಹಾಗೂ ಬಳ್ಳಿಯಿಂದ ಬಡಿದು ಆರಿಸುವ, ಸಾಧ್ಯವಾಗದಿದ್ದಲ್ಲಿ ನೀರು ಹಾಕಿ ನಿಯಂತ್ರಿಸುವ ಕೆಲಸ ಎಚ್ಚರಿಕೆಯಿಂದ ಮಾಡಲಾಗುತ್ತಿದೆ. ಇದಕ್ಕಾಗಿ ಟ್ಯಾಂಕರ್‌ಗಳಲ್ಲಿ ನೀರನ್ನು ಕೊಂಡೊಯ್ಯಲಾಗುತ್ತಿದೆ.
ಸ್ವಯಂಸೇವಾ ಸಂಸ್ಥೆಗಳ ನೆರವಿನಿಂದ ನೀಡಲಾದ ಬೆಂಕಿ ನಂದಿಸುವ ಉಪಕರಣಗಳನ್ನು ಬಳಕೆ ಮಾಡಲಾಗುತ್ತಿದ್ದು, ಟ್ರ್ಯಾಕ್ಟರ್‌ಗಳಿಗೆ ಟ್ಯಾಂಕರ್ ಅಳವಡಿಸಿ ನೀರು ತುಂಬಿಸಿಟ್ಟುಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಎಲ್ಲಾ ವಲಯ ಗಳಲ್ಲಿಯೂ ಫೈರ್‌ಲೈನ್ ನಿರ್ಮಾಣ ಕಾರ್ಯ ಕೊನೆ ಹಂತ ದಲ್ಲಿದೆ. ಅರಣ್ಯ ನಾಶದ ಬಗ್ಗೆ ಅರಿವು ಮೂಡಿಸುವ ಮೂಲಕ ಕಾಡಂಚಿನ ಗ್ರಾಮಗಳ ಜನರ ಸಹಕಾರ ಪಡೆಯಲಾಗುತ್ತಿದೆ. ಸದ್ಯ ಮರಗಳಿಂದ ಉದುರುತ್ತಿರುವ ಎಲೆಗಳಿಗೆ ಮತ್ತೂಮ್ಮೆ ಬೆಂಕಿಯಿಟ್ಟು ಸುಟ್ಟುಹಾಕ ಲಾಗುತ್ತಿದೆ. ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಅಂಬಾಡಿ ಮಾಧವ್, ನಿರ್ದೇಶಕ, ಹುಲಿಯೋಜನೆ, ಬಂಡೀಪುರ.