Advertisement

ವಿಜ್ಞಾನ ಕಿಟ್ ಯೋಜನೆ ಅಂತಿಮಕ್ಕೆ ಸೂಚನೆ

06:48 AM Jan 30, 2019 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಆರು ಜಿಲ್ಲೆಗಳ 5517 ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಗಣಿತ, ವಿಜ್ಞಾನ ವಿಷಯಗಳ ಕಿಟ್‌ಗಳನ್ನು ಪೂರೈಸುವ ಸಲುವಾಗಿ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ತಾಂತ್ರಿಕ ವಿಷಯಗಳ ಕುರಿತು ಚರ್ಚಿಸಿ ಅಂತಿಮಗೊಳಿಸಬೇಕೆಂದು ಹೈ.ಕ.ಪ್ರ.ಅ. ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ್‌ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಹೈ.ಕ.ಪ್ರ.ಅ. ಮಂಡಳಿ ಸಭಾಂಗಣದಲ್ಲಿ ವಿಜ್ಞಾನ ಹಾಗೂ ಗಣಿತ ಕಿಟ್‌ಗಳನ್ನು ಖರೀದಿಸುವ ಸಂಬಂಧ ವಿವಿಧ ಸಂಸ್ಥೆಗಳೊಂದಿಗೆ ಚರ್ಚಿಸಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ-ವಿಜ್ಞಾನ ವಿಷಯಗಳಲ್ಲಿ ಮಾಡಿ ಕಲಿ ತತ್ವವನ್ನಾಧರಿಸಿ ಗುಣಾತ್ಮಕ ಶಿಕ್ಷಣ ನೀಡಲು ಎಂಟು ವಿದ್ಯಾರ್ಥಿಗಳಿಗೆ ಒಂದು ಕಿಟ್ ಒದಗಿಸಲು ಯೋಜನೆ ರೂಪಿಸಲಾಗಿದ್ದು, ವಿಜ್ಞಾನ ಮತ್ತು ಗಣಿತ ವಿಷಯಗಳ ಪಠ್ಯಗಳನ್ನಾಧರಿಸಿ ಕಿಟ್‌ಗಳಲ್ಲಿ ಇರಬೇಕಾದ ಉಪಕರಣಗಳು ಹಾಗೂ ಪ್ರಾತ್ಯಕ್ಷಿಕೆಗಳ ಖಚಿತ ಮಾಹಿತಿ ಸಂಗ್ರಹಿಸಬೇಕೆಂದರು.

ವಿಜ್ಞಾನ ಉಪಕರಣಗಳನ್ನು ಹೊಂದಿರುವ ಲ್ಯಾಬ್‌ ಇನ್‌ ಎ ಬಾಕ್ಸ್‌ ಎನ್ನುವ ಉಪಕರಣಗಳನ್ನು ಈಗಾಗಲೇ ರಾಜ್ಯದ ಗೌರಿಬಿದನೂರ ಹಾಗೂ ಇತರ ಜಿಲ್ಲೆಗಳ ಶಿಕ್ಷಣ ಇಲಾಖೆಯಲ್ಲಿ ಬಳಸಲಾಗುತ್ತಿದೆ. ಈ ಉಪಕರಣಗಳು ಮಕ್ಕಳಿಗೆ ವಿಷಯ ತಿಳಿಯುವಲ್ಲಿ ಎಷ್ಟರ ಮಟ್ಟಿಗೆ ಅನುಕೂಲವಾಗಿವೆ ಎನ್ನುವುದರ ಕುರಿತು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ವರದಿ ಸಂಗ್ರಹಿಸಬೇಕು. ಮಕ್ಕಳಿಗೆ ಉಪಯೋಗವಾಗಿದ್ದಲ್ಲಿ ಯೋಜನೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ವಿಜ್ಞಾನ ಕಿಟ್ ಪೂರೈಸಲು ಅಗಸ್ತ್ಯಾ ಮತ್ತು ಇಂಡಿಯನ್‌ ಲಿಟ್ರಸಿ ಪ್ರೊಜೆಕ್ಟ್‌ನವರು ಮುಂದೆ ಬಂದಿದ್ದು, ಗಣಿತ ಕಿಟ್‌ಗಳು ಪೂರೈಸುವವರು ಹಾಗೂ ಗಣಿತ ಕಿಟ್ ಕುರಿತು ಯಾವುದೇ ಸಿದ್ಧತೆಗಳು ಇಲ್ಲದ ಕಾರಣ ಗಣಿತ ಕಿಟ್‌ಗಳನ್ನು ಮುಂದಿನ ವರ್ಷದಿಂದ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಹೇಳಿದರು.

ಹೈ.ಕ. ಭಾಗದ 1130 ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸೆಸ್‌ ಪ್ರಾರಂಭಿಸಲು ಸಹ ಯೋಜನೆ ಹಮ್ಮಿಕೊಳ್ಳಲಾಗಿದೆ. ಸ್ಮಾರ್ಟ್‌ ಕ್ಲಾಸೆಸ್‌ ಪ್ರಾರಂಭಿಸಲು ಅವಶ್ಯಕವಿರುವ ಉಪಕರಣಗಳ ಕುರಿತು ಶಿಕ್ಷಣ ಇಲಾಖೆ ಆಯುಕ್ತರು ಮತ್ತು ನಿರ್ದೇಶಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಇದರಿಂದ ಮಕ್ಕಳಿಗೆ ಯಾವ ರೀತಿಯಲ್ಲಿ ಉಪಯೋಗವಾಗಲಿದೆ ಎನ್ನುವ ಕುರಿತು ವರದಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ| ಡಿ. ಷಣ್ಮುಖ ಮಾತನಾಡಿ, ಶಾಲೆಗಳಿಗೆ ವಿಜ್ಞಾನ ಮತ್ತು ಗಣಿತ ಕಿಟ್‌ಗಳನ್ನು ಪೂರೈಸಲು 1.88 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಎಚ್.ಕೆ.ಅರ್‌.ಡಿ.ಬಿ.ಗೆ ಸಲ್ಲಿಸಲಾಗಿದೆ. ವಿಜ್ಞಾನದ ಒಂದು ಕಿಟ್ನ್ನು ಎರಡು ವರ್ಷಗಳ ಕಾಲ ಬಳಸಬಹುದಾಗಿದೆ. ಇವುಗಳಲ್ಲಿರುವ ರಾಸಾಯನಿಕ ವಸ್ತುಗಳನ್ನು ಎರಡು ವರ್ಷಗಳ ಕಾಲ ಬಳಸಬಹುದಾಗಿದ್ದು, ಸುಮಾರು 40 ರಿಂದ 50 ಪ್ರತಿಶತ ಉಪಕರಣಗಳು ಮುಂದಿನ ದಿನಗಳಲ್ಲಿ ಮರು ಬಳಸಬಹುದು. ಒಂದು ಶಾಲೆಗೆ 30 ಕಿಟ್‌ಗಳನ್ನು ಸರಬರಾಜು ಮಾಡಿದಲ್ಲಿ ವಿಜ್ಞಾನ ಶಿಕ್ಷಕರು ಪಠ್ಯಕ್ರಮಕ್ಕೆ ಅನುಗುಣವಾಗಿ ಕಿಟ್‌ನಲ್ಲಿರುವ ಪ್ರಾತ್ಯಕ್ಷಿಕೆಗಳನ್ನು ಬಳಸಿಕೊಳ್ಳಬಹುದು. ಇದಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡಬೇಕಾಗುವುದು ಎಂದರು.

ಎಚ್.ಕೆ.ಆರ್‌.ಡಿ.ಬಿ. ಉಪ ಕಾರ್ಯದರ್ಶಿ ಡಾ| ಬಿ. ಸುಶೀಲಾ, ಜಂಟಿ ನಿರ್ದೇಶಕ ಬಸವರಾಜ, ಶಿಕ್ಷಣ ಸಲಹೆಗಾರ ಎಂ.ಬಿ. ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಟಿ. ನಾರಾಯಣಗೌಡ, ಇಂಡಿಯನ್‌ ಲಿಟ್ರಸಿ ಪ್ರೊಜೆಕ್ಟ್‌ನ ಪ್ರೀತಿ, ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಡಾ| ಜಗನ್ನಾಥ ಉಮಾಪತಿ ಡೆಂಗಿ, ಅಗಸ್ತ್ಯಾ ಫೌಂಡೇಶನ್‌ನ ಬಾಬುರಾವ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಬ್ದುಲ್‌ ಗನಿ ಮತ್ತಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next