Advertisement
ಬೆಳ್ತಂಗಡಿ ತಾ|ನ ಬಾರ್ಯದ ಅಲಿಂಗಿರ ನಿವಾಸಿ ಸಂದೇಶ್ ಶೆಟ್ಟಿಯವರು ಭಾರತೀಯ ಭೂ ಸೇನಾ ಸಿಗ್ನಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಥುರಾದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಅವರು ಜೂ. 13ರಂದು ಹೃದಯಾಘಾತದಿಂದ ನಿಧನ ಹೊಂದಿದ್ದರು. ಅಲ್ಲಿ ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಗಳು ನಡೆದು, ಕೊರೊನಾ ನೆಗೆಟಿವ್ ವರದಿ ಬಂದ ಬಳಿಕ ಜೂ. 17ರಂದು ಪಾರ್ಥಿವ ಶರೀರವನ್ನು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ತರಲಾಗಿತ್ತು. ಅಲ್ಲಿಂದ ರಸ್ತೆ ಮಾರ್ಗವಾಗಿ ಆ್ಯಂಬುಲೆನ್ಸ್‌ನಲ್ಲಿ ಹುಟ್ಟೂರಿಗೆ ತರಲಾಯಿತು.
ಯೋಧನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ದಾರಿಯುದ್ದಕ್ಕೂ ಜನರು ಅಂತಿಮ ದರ್ಶನಗೈದು ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಅವರು ಕಲಿತ ಬಾರ್ಯ ಗ್ರಾಮದ ಪೆರಿಯೊಟ್ಟು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಇವರಿಗೆ ಸುಬೇದಾರ್ ಬಿಜು ನೇತೃತ್ವದ ಯೋಧರ ತಂಡ ಸೇನಾ ಗೌರವ ಸಲ್ಲಿಸಿತು. ಬಳಿಕ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಡಿವೈಎಸ್ಪಿ ದಿನಕರ ಶೆಟ್ಟಿ, ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕ ಈರಯ್ಯ, ಪಂ. ಅಧ್ಯಕ್ಷ ಪ್ರಶಾಂತ್ ಪೈ, ಉಪಾಧ್ಯಕ್ಷೆ ಹೇಮಾವತಿ, ಸದಸ್ಯ ಧರ್ಣಪ್ಪ, ಎಪಿಎಂಸಿ ಸದಸ್ಯ ಜಯಾನಂದ ಕಲ್ಲಾಪು, ಪದು¾ಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ, ಪ್ರಮುಖರಾದ ಜಯವಿಕ್ರಮ ಕಲ್ಲಾಪು, ಗುಣಾಕರ ಅಗ್ನಾಡಿ, ಮನೋಹರ್ ಶೆಟ್ಟಿ ಬಾರ್ಯ, ರವಿ ಶಿಲ್ಪಾ ಮತ್ತಿತರ ಜನಪ್ರತಿನಿಧಿಗಳು, ಸ್ಥಳೀಯ ಸಂಘ-ಸಂಸ್ಥೆಗಳ ಮುಖಂಡರು ಸಹಿತ ನೂರಾರು ಜನ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು. “ಭಾರತ್ ಮಾತಾ ಕೀ ಜೈ’, “ಅಮರ್ ರಹೇ… ಅಮರ್ ರಹೇ… ಸಂದೇಶ್ ಶೆಟ್ಟಿ ಅಮರ್ ರಹೇ…’ ಮತ್ತಿತರ ದೇಶ ಭಕ್ತಿ ಬಿಂಬಿತ ಘೋಷಣೆಗಳು ಈ ಸಂದರ್ಭ ಮುಗಿಲು ಮುಟ್ಟಿತ್ತು. ಬಾರ್ಯದ ಅಲಿಂಗಿರದಲ್ಲಿರುವ ಅವರ ಮನೆಗೆ ಪಾರ್ಥಿವ ಶರೀರವನ್ನು ಕೊಂಡೊಯ್ದು ಕುಟುಂಬ ವರ್ಗದವರಿಗೆ ಬಿಟ್ಟು ಕೊಡಲಾಯಿತು. ಅಲ್ಲಿ ಅಂತಿಮ ವಿಧಿ-ವಿಧಾನಗಳು ಮುಗಿದ ಬಳಿಕ ರಾತ್ರಿ ಸುಮಾರು 11ರ ಸುಮಾರಿಗೆ ಅವರ ಕುಟುಂಬಸ್ಥರು ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.
Related Articles
ಮೃತ ಯೋಧನ ಅಂತಿಮ ದರ್ಶನಕ್ಕೆ ನೆರೆದ ಜನರಲ್ಲಿ ಕೋವಿಡ್-19 ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಾಲೂಕು ದಂಡಾಧಿಕಾರಿಯವರು ತಮ್ಮ ವಾಹನಕ್ಕೆ ಅಳವಡಿಸಿದ ಧ್ವನಿವರ್ಧಕದ ಮೂಲಕ ಅರಿವು ಮೂಡಿಸಿದರು.
Advertisement