ನರಗುಂದ: ಜೀವ ಜಲಕ್ಕಾಗಿ ರೈತರ ಹೋರಾಟ ಕಡೆಗಣಿಸಿದ ವ್ಯಕ್ತಿಗಳಿಗೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀತಿ ಪಾಠವಾಗಿದೆ. ಮಲಪ್ರಭೆಗೆ ತಾಯಿ ಮಹದಾಯಿ ಜೋಡಣೆಯಾಗುವವರೆಗೂ ನಮ್ಮ ಹೋರಾಟ ಅಚಲ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಹೇಳಿದರು.
ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಗೆ ಒತ್ತಾಯಿಸಿ ಶುಕ್ರವಾರ 1681ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದ ಅವರು, ರೈತರ ಹೋರಾಟಕ್ಕೆ ನ್ಯಾಯಾಲಯ ನೆರವಾಗಿದೆ. ಇದನ್ನು ಸಂಪೂರ್ಣ ಸ್ವಾಗತಿಸುವುದಾಗಿ ತಿಳಿಸಿದರು. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಇದೊಂದು ಜಯದ ಮೆಟ್ಟಿಲು. ಈ ವಿಜಯ ರೈತರಿಗೆ ಸೇರಿ ಹೋರಾಟ ಬೆಂಬಲಿಸಿದ ನಾಡಿನ ಎಲ್ಲ ಮಠಾಧಿಧೀಶರು, ಸಂಘಟನೆಗಳು, ಎಲ್ಲ ಸ್ತರದ ಸಾರ್ವಜನಿಕರು, ಅಗೋಚರವಾಗಿ ಕೈಜೋಡಿಸಿದ ನಾಡಿನ ಸಮಸ್ತ ಆರು ಕೋಟಿ ಜನರಿಗೆ ಸಲ್ಲುತ್ತದೆ ಎಂದರು. ಈಗಾಗಲೇ ಸರ್ವೋತ್ಛ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಿದ್ದೆವು. ಆದೇಶ ಪ್ರತಿ 2-3 ದಿನಗಳಲ್ಲಿ ಕೈಸೇರಲಿದೆ. ಬಳಿಕ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದೆ ಸರ್ವೋತ್ಛ ನ್ಯಾಯಾಲಯಕ್ಕೆ ಹೋಗುವ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಮುನವಳ್ಳಿಯ ಗುರು ರಾಯನಗೌಡ್ರ ಮಾತನಾಡಿ, ಮಹದಾಯಿ ಯೋಜನೆಯನ್ನು ರಾಜಕಾರಣಿಗಳು ಚುನಾವಣೆಗೆ ಬಳಸಿಕೊಂಡರೂ ರೈತರಿಗೆ ಯಾವುದೇ ಸಹಕಾರ ನೀಡಲಿಲ್ಲ. ಅಂತಹ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸಲು ರೈತ ಸಂಘಟನೆಗಳು ಗಟ್ಟಿಗೊಳ್ಳಬೇಕು. ಇಂದು ಕಟಾವು ಹಂತದಲ್ಲೇ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಗೊಂಡಿದ್ದು, ರೈತರ ಹೋರಾಟಕ್ಕೆ ಸಂದ ಜಯ ಎಂದರು.
ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ ಮಾತನಾಡಿ, ಈ ದೇಶದ ವ್ಯವಸ್ಥೆ ಬದಲಾಯಿಸುವ ಶಕ್ತಿ ಪೆನ್ನಿಗಿದೆ. ಅಂತಹ ಪೆನ್ನು(ಮಾಧ್ಯಮ) ಈ ಹೋರಾಟಕ್ಕೆ ಶಕ್ತಿ ತುಂಬಿದ್ದು ಸ್ಮರಣೀಯ. ಒಂದು ಹೋರಾಟದಲ್ಲಿ ಗೆಲುವಿಗೆ ಸಹನೆ, ತಾಳ್ಮೆ ಅಗತ್ಯ. ಅದು ಈ ಹೋರಾಟದಲ್ಲಿದೆ ಎಂದು ಹೇಳಿದರು.
ಬಿ.ಎಸ್.ಉಪ್ಪಾರ, ಆನಂದ ತೊಂಡಿಹಾಳ, ಹೇಮಕ್ಕ ಗಾಳಿ, ಮಾನಂದಮ್ಮ ಹಿರೇಮಠ, ಅಣ್ಣಪ್ಪಗೌಡ ದೇಸಾಯಿ, ವೀರಬಸಪ್ಪ ಹೂಗಾರ, ಮಲ್ಲಿಕಾರ್ಜುನಯ್ಯ ಹಿರೇಮಠ, ರಾಘವೇಂದ್ರ ಗುಜಮಾಗಡಿ ಮಾತನಾಡಿದರು. ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಕಾರ್ಯದರ್ಶಿ ಫಕೀರಪ್ಪ ಜೋಗಣ್ಣವರ, ವೆಂಕಪ್ಪ ಹುಜರತ್ತಿ, ಶಿವಾನಂದ ಹಳಕಟ್ಟಿ, ಮನೇನಕೊಪ್ಪ, ಕಲ್ಲಪ್ಪ ಮೊರಬದ, ಮಾರುತಿ ಬಡಿಗೇರ, ವಾಸು ಚವ್ಹಾಣ, ವಿಶ್ವನಾಥ ಗುಡಿಸಾಗರ, ಎಚ್.ಸಿ.ಹಿರೇಹೊಳಿ, ಹನಮಂತ ಸರನಾಯ್ಕರ ಮತ್ತಿತರರಿದ್ದರು.