Advertisement

ಸಿರಗುಪ್ಪದಲ್ಲಿ ಜಿದ್ದಾಜಿದ್ದಿನ ಹೋರಾಟ

04:18 PM May 02, 2019 | pallavi |

ಕೊಪ್ಪಳ: ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬಳ್ಳಾರಿ ಜಿಲ್ಲೆ ಸಿರಗುಪ್ಪ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯದಾಟ ಭರ್ಜರಿಯಾಗಿ ನಡೆದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ ಎನ್ನುವ ಮಾತು ಕೇಳಿ ಬಂದಿವೆಯಾದರೂ ಮೇಲ್ನೊಟಕ್ಕೆ ಕಾಂಗ್ರೆಸ್‌ ಮುಂದಿದೆ ಎಂಬ ಚರ್ಚೆಗಳು ನಡೆದಿವೆ.

Advertisement

ಹೌದು.. ಮೈತ್ರಿ ಸರ್ಕಾರ, ಮಾಜಿ ಸಿಎಂ ಸಿದ್ದರಾಮಯ್ಯ ಆರ್ಭಟ ಕಾಂಗ್ರೆಸ್‌ಗೆ ಪ್ಲಸ್‌ ಆಗಿದ್ದರೆ, ಕಮಲಕ್ಕೆ ಮೋದಿ ಅಲೆಯೇ ಆಸರೆಯಾಗಿದೆ. 2014ರಲ್ಲಿ ಕಾಂಗ್ರೆಸ್‌ ಶಾಸಕ ಬಿ.ಎಂ. ನಾಗರಾಜ ಅವರ ಹಿಡಿತದಲ್ಲಿದ್ದ ಕ್ಷೇತ್ರ ಈ ಬಾರಿ ಬಿಜೆಪಿ ವಶದಲ್ಲಿದೆ.

ಕಳೆದ 2014ರಲ್ಲಿ ನಡೆದ ಲೋಕಸಭಾ ಸಮರದಲ್ಲಿ ಕರಡಿಗೆ ಕ್ಷೇತ್ರದ ಮತದಾರ 53,913 ಮತಗಳನ್ನು ನೀಡಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಹಿಟ್ನಾಳಗೆ 54,921 ಮತಗಳು ಬಂದಿದ್ದವು. ಬಿಜೆಪಿಗಿಂತ ಕೈ ಸಾವಿರ ಮತ ಪಡೆದು ಮುನ್ನಡೆ ಸಾಧಿಸಿತ್ತು. ಕೈ ಶಾಸಕ ಬಿ.ಎಂ. ನಾಗರಾಜ ಹಲವು ಪ್ರಯತ್ನ ನಡೆಸಿದರೂ ತಮ್ಮ ಪಕ್ಷದ ಅಭ್ಯರ್ಥಿಗೆ ದೊಡ್ಡ ಮಟ್ಟದ ಲೀಡ್‌ ಕೊಡಲಾಗಲಿಲ್ಲ. 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ನಡೆದ ಭಿನ್ನಮತ ಎರಡು ಗುಂಪುಗಳನ್ನು ಸೃಷ್ಟಿಸಿದೆ.

ಶಾಸಕ ಬಿ.ಎಂ. ನಾಗರಾಜ ಅವರಿಗೆ ಟಿಕೆಟ್ ತಪ್ಪಿಸುವಲ್ಲಿ ಕ್ಷೇತ್ರದಲ್ಲಿನ ಕೆಲವರು ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನಿಸಿ ಮುರಳಿಕೃಷ್ಣರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಕೈನಲ್ಲಿ ಫಾರವರ್ಡ್‌- ಬ್ಯಾಕ್‌ವರ್ಡ್‌ ಬಣ ಇರುವುದು ಅಲ್ಲಗಳೆಯುವಂತಿಲ್ಲ. ಇದು ಲೋಕಸಬಾ ಚುನಾವಣೆ ಮೇಲೂ ಪರಿಣಾಮ ಬೀರಿದೆ ಎನ್ನುವ ಮಾತಿದ್ದರೂ ಕಮಲಕ್ಕೆ ಹೇಳಿಕೊಳ್ಳುವಂತ ಬಲ ಸಿಕ್ಕಿಲ್ಲ.

ಕ್ಷೇತ್ರ ಬಿಜೆಪಿ ವಶದಲ್ಲಿದ್ದು, ಶಾಸಲ ಸೋಮಲಿಂಗಪ್ಪ 3ನೇ ಬಾರಿಗೆ ಶಾಸಕರಾಗಿದ್ದು, ರಾಜಕೀಯ ರಣತಂತ್ರ ಹೆಣೆದು ಬಿಜೆಪಿಗೆ ಹೆಚ್ಚು ಮತಗಳಿಕೆಗೆ ಪ್ರಯತ್ನಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಸೋಮಲಿಂಗಪ್ಪ ಅವರ ಜೊತೆಗೆ ಕ್ಷೇತ್ರಾದ್ಯಂತ ಪ್ರಚಾರ ನಡೆಸಿದ್ದಾರೆ. ಇನ್ನೂ ಕರಡಿ ಅವರು ಐದು ವರ್ಷದಲ್ಲಿ ತೆಕ್ಕಲಕೋಟೆ-ಸಿಂದಗೇರಿ ಎನ್‌ಎಚ್-156ಎ ರಸ್ತೆ ಅಭಿವೃದ್ಧಿ ಸೇರಿ ಕೆಲವೊಂದು ಹೆದ್ದಾರಿ, ಸಮುದಾಯ ಭವನ ನಿರ್ಮಿಸಿದ್ದಾರೆ ಎನ್ನುವ ಮಾತಿದ್ದರೂ ಅವರ ಬಗ್ಗೆ ವೈಯಕ್ತಿಕ ಅಭಿಪ್ರಾಯವಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಸೋಮಲಿಂಗಪ್ಪ ಅವರ ವರ್ಚಸ್ಸಿನಡಿಯೇ ಇಲ್ಲಿನ ಜನತೆ ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಆದರೆ ಇತ್ತೀಚೆಗೆ ಸೋಮಲಿಂಗಪ್ಪ ಅವರು ಪುತ್ರ ವೆಂಕಟಪ್ಪ, ಸಿದ್ದಪ್ಪ ಅವರಿಗೆ ಅಧಿಕಾರ ಕೊಟ್ಟಿದ್ದಾರೆ ಎನ್ನುವ ಆಪಾದನೆ ಕೇಳಿ ಬಂದಿದ್ದು, ಬಿಜೆಒಗೆ ಇದು ಮೈನಸ್‌ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

Advertisement

ಕ್ಷೇತ್ರದಲ್ಲಿ ಲಿಂಗಾಯತ, ನಾಯಕ, ಕುರುಬ ಸಮುದಾಯದ ಮತಗಳು ಫಲಿತಾಂಶದ ಮೇಲೆ ನಿರ್ಣಾಯಕ ಪಾತ್ರ ವಹಿಸಲಿವೆ. ಎಸ್‌ಟಿ ಮತಗಳು ಕೈ-ಕಮಲಕ್ಕೆ ಹಂಚಿಕೆಯಾಗಿರುವ ಮಾತು ಕೇಳಿದೆ. ಕುರುಬರ ಹಾಗೂ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್‌ ಬುಟ್ಟಿ ಸೇರಿವೆ. ಈ ಎಲ್ಲ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಮತ್ತೆ ಮುನ್ನಡೆ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಿದ್ದಾರೆ ಕ್ಷೇತ್ರದ ಜನತೆ.

ಪ್ರಮುಖವಾಗಿ ಆರ್‌ಎಸ್‌ಎಸ್‌ ಆಂತರಿಕವಾಗಿ ಮನೆ ಮನೆಗೆ ಪ್ರಚಾರ ನಡೆಸಿ ಕಮಲಕ್ಕೆ ಶಕ್ತಿ ತುಂಬಿದೆ. ಮೋದಿ ಅಲೆಯಿಂದ ಯುವಕರ ಮತಗಳು ಕಮಲಕ್ಕೆ ವರದಾನವಾಗಲಿವೆ. ಇನ್ನೂ ಕೈನಲ್ಲಿ ಬಣದ ಮಾತಿದ್ದರೂ ಒಗ್ಗಟ್ಟಿನ ಮಂತ್ರ ಹೆಣೆದಿದ್ದಾರೆ ಎಂದೆನ್ನಲಾಗುತ್ತಿದೆ. ಕೈ ನಾಯಕ ಮರುಳಿಕೃಷ್ಣ ಸೇರಿ ಇತರರು ತಮ್ಮ ಪಡೆಗಳೊಂದಿಗೆ ಅಭ್ಯರ್ಥಿ ಜೊತೆಗೆ ಭರ್ಜರಿ ಪ್ರಚಾರ ನಡೆಸಿ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಿರಗುಪ್ಪಾ ಕ್ಷೇತ್ರದಲ್ಲಿ ಕಳೆದ ಬಾರಿಯೂ ನಮಗೆ ಲೀಡ್‌ ಬರೆಲಿದೆ. ಈ ಬಾರಿಯೂ ಸ್ಥಳೀಯ ನಾಯಕರು, ಮಾಜಿ ಶಾಸಕರು, ಮುಖಂಡರೊಂದಿಗೆ ಒಗ್ಗಟ್ಟಿನಿಂದ ಪ್ರಚಾರ ನಡೆಸಿದ್ದೇವೆ. ಮೈತ್ರಿ ಸರ್ಕಾರದ ಸಾಧನೆ, ಸಿದ್ದರಾಮಯ್ಯ ಸರ್ಕರದ ಜನಪರ ಕಾರ್ಯಕ್ರಮಗಳಿಂದಾಗಿ ಈ ಬಾರಿಯೂ ನಮಗೆ ಹೆಚ್ಚು ಮತಗಳು ಲಭಿಸುವ ವಿಶ್ವಾಸದಲ್ಲಿದ್ದೇವೆ.

•ರಾಜಶೇಖರ ಹಿಟ್ನಾಳ, ಕಾಂಗ್ರೆಸ್‌ ಅಭ್ಯರ್ಥಿ

ದೇಶದ ಭದ್ರತೆ, ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಮೋದಿ ಅವರು ಶ್ರಮಿಸಿದ್ದಾರೆ. ಅವರ ಜನಪರ ಕಾಯಕ್ರಮ, ನಾನು ಸಿರಗುಪ್ಪಾ ಕ್ಷೇತ್ರದಲ್ಲಿ ಹೆದ್ದಾರಿ ಸೇರಿ ಹಲವು ಅಭಿವೃದ್ಧಿ ಕೆಲಸಗಲ ಪರಿಣಾಮದಿಂದ ಈ ಬಾರಿ ಪ್ಲಸ್‌ ಆಗಲಿದೆ. ಜೊತೆಗೆ ಶಾಸಕ ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಿದ್ದೇವೆ. ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಬರಲಿವೆ.

•ಸಂಗಣ್ಣ ಕರಡಿ, ಬಿಜೆಪಿ ಅಭ್ಯರ್ಥಿ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next