ಕೋಲಾರ: ಜಿಲ್ಲೆಯಲ್ಲಿ ಸ್ಥಾಪಿಸಲು ಮಂಜೂರಾತಿ ಪಡೆದಿರುವ ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣಕ್ಕೆ ತಡೆ ನೀಡಿ, ಸರ್ಕಾರದಿಂದ ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯದಿದ್ದರೆ ಜಿಲ್ಲೆಯ ಎಲ್ಲಾ ಜನಪ್ರತಿಧಿಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಚಿಮುಲ್‌ನ್ನು ವಿಂಗಡಣೆ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಒತ್ತಾಯಿಸಿದ್ದಾರೆ. ಆದರೆ, ಇಲ್ಲಿನ ಎಂವಿಕೆ ಗೋಲ್ಡನ್ ನಿರ್ಮಾಣ ಮಾಡಲು ಕ್ರಮ ಕೈಗೊಂಡಿರುವುದಕ್ಕೆ ಅಡ್ಡಿಪಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಚಾರವಾಗಿ ಸಚಿವ ಡಾ.ಕೆ.ಸುಧಾಕರ್ ಜತೆಗೆ ಚರ್ಚಿಸಲಾಗಿದ್ದು, ಗೋಲ್ಡನ್ ಡೇರಿಗೆ ಅಡ್ಡಿಪಡಿಸಿರುವ ಆದೇಶವನ್ನು ಸಹಕಾರ ಸಚಿವರ ಜತೆ ಚರ್ಚಿಸಿ ರದ್ದುಪಡಿಸುವುದಾಗಿ ಹೇಳಿದ್ದಾರೆ. ಎರಡೂ ಜಿಲ್ಲೆಯವರು ಅಣ್ಣ ತಮ್ಮಂದಿರಂತೆ ಇದ್ದು, ಕೋಚಿಮುಲ್‌ನಿಂದ ಅವರಿಗೆ ಹೋಗಬೇಕಾದ ಭಾಗವನ್ನು ವಿಂಗಡಣೆ ಮಾಡೋಣ, ಇದಕ್ಕೆಲ್ಲ ಸರ್ಕಾರದಿಂದ ತೀರ್ಮಾನ ಅಗಬೇಕಿದೆ ಎಂದು ಹೇಳಿದರು.
ಕೋಚಿಮುಲ್ ವಿಂಗಡಣೆ ಕರಿತು ವಿಧಾನ ಸಭೆ ಸಭಾಧ್ಯಕ್ಷ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಗೈರಾಗಿದ್ದರು. ಮತ್ತೂಮ್ಮೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಎರಡು ಮೂರು ದಿನದಲ್ಲಿ ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆದೇಶ ಹೊರಡಿಸಿರುವುದರಿಂದ ಎರಡೂ ಜಿಲ್ಲೆಗಳ ನಡುವೆ ಬೆಂಕಿ ಹಚ್ಚು ಕೆಲಸ ಅಗಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಗೇಶ್, ಆ ಪರಿಸ್ಥಿತಿ ಎದುರಾಗಲು ಅವಕಾಶ ನೀಡುವುದಿಲ್ಲ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಇದ್ದೇವೆ ಎಂದು ಹೇಳಿದರು.
ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಚಿಕ್ಕಬಳ್ಳಾಪುರ ಸಚಿವ ಡಾ.ಕೆ.ಸುಧಾಕರ್ ಸಹಕಾರ ಸಚಿವರ ಮೇಲೆ ಒತ್ತಡ ಹಾಕಿಸಿ ಟೆಂಡರ್‌ಗಳಿಗೆ ಅಡ್ಡಿಪಡಿಸಿ ಆದೇಶ ಮಾಡಿಸಿದ್ದಾರೆ. ಇದರಿಂಂದ ನಮಗೂ ಬೇಸರವಿದೆ. ಈ ವಿಚಾರವಾಗಿ ಎಲ್ಲಾರೂ ಒಟ್ಟಿಗೆ ಹೋರಾಟ ನಡೆಸುತ್ತೆವೆ.
ಇಲ್ಲಿ ನಾವೇನು ಕಂಡಂ ರಾಜಕಾರಣಿಗಳಲ್ಲ, ಯಾರಾದರು ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಿದರೆ ಹೋರಾಟ ಮಾಡುವುದು ಬರುತ್ತದೆ. ಆದೇಶ ಹೊರಡಿಸುವ ಮೊದಲು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳ ಗಮನಕ್ಕೂ ತರಬೇಕಿತ್ತು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸದ ಎಸ್.ಮುನಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.