ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಜನರ ರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಓಡಾಡುವವರ ವಾಹನಗಳನ್ನು ಸೀಝ್ ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಶುಕ್ರವಾರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ಜಿಲ್ಲೆ ಇವರ ವತಿಯಿಂದ ಉಚಿತವಾಗಿ ನೀಡಲ್ಪಟ್ಟ ಕೋವಿಡ್-19 ಸೋಂಕು ಪತ್ತೆಹಚ್ಚಲು ಅಗತ್ಯವಿರುವ ಕಿಯೋಸ್ಕ್ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ವೈದ್ಯರ ತಂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲೆಗೆ ಮತ್ತಷ್ಟು ಪಿಪಿಟಿ ಕಿಟ್‌ಗಳ ಆವಶ್ಯಕತೆಯಿದೆ. ಇದಕ್ಕೆ ಬೇಕಿರುವಂತಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೋವಿಡ್-19 ಪ್ರಕರಣಗಳು ಕಡಿಮೆಯಾಗಿದೆ ಆದರೆ ಪೂರ್ಣಪ್ರಮಾಣದಲ್ಲಿ ನಿವಾರಣೆಯಾಗಿಲ್ಲ ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ ಎಂದರು. ಹೊರಜಿಲ್ಲೆಯ ವ್ಯಕ್ತಿಗಳಿಗೆ ತುರ್ತು ವೈದ್ಯಕೀಯ ನೆರವು ಬೇಕಿದ್ದರೆ ಮಾತ್ರ ಜಿಲ್ಲೆಯೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ವಿನಾಕಾರಣ ಯಾರು ಕೂಡ ಸುತ್ತಾಡುವಂತಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮಾದರಿ ದ್ರವ ಸಂಗ್ರಹಣೆಯ ಪ್ರಾತ್ಯಕ್ಷಿಕೆ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧೀರ್ ಚಂದ್ರ ಸೂಡ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಉಮೇಶ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ| ಪ್ರಕಾಶ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸರ್ಜನ್ ಡಾ| ಮಧುಸೂದನ್ ನಾಯಕ್ ವಂದಿಸಿದರು.
ಕಿಯೋಸ್ಕ್ ವಿಶೇಷತೆ
ಈ ಕಿಯೋಸ್ಕ್ ಟೆಲಿಫೋನ್ ಬೂತ್ ಮಾದರಿಯಂತೆ ತೋರುತ್ತದೆ. ಒಳಭಾಗದಲ್ಲಿ ವೈದ್ಯರು, ಪ್ಯಾರಾ ಮೆಡಿಕಲ್ ಸಿಬಂದಿ ಕುಳಿತು ಸೋಂಕಿತರ ಗಂಟಲು ದ್ರವವನ್ನು ಸಂಗ್ರಹಿಸುತ್ತಾರೆ. ಎರಡೂ ಕೈಗಳನ್ನು ಪೂರ್ಣವಾಗಿ ಮುಚ್ಚುವ ಗ್ಲೌಸ್ ಗಳನ್ನು ಧರಿಸಿ, ಗಂಟಲು ದ್ರವ ಸಂಗ್ರಹಿಸಬೇಕು. ಮತ್ತೆ ಗ್ಲೌಸ್‌ಗೆ ಕ್ರಿಮಿನಾಶಕ ಸಿಂಪಡನೆ ಮಾಡಿದರೆ ಸಾಕು. ಕಿಯೋಸ್ಕ್ ಒಳಗೆ ಕುಳಿತು ಕೆಲಸ ಮಾಡುವವರು ಸೋಂಕಿತರ ನೇರ ಸಂಪರ್ಕಕ್ಕೆ ಬರುವುದಿಲ್ಲ. ಗ್ಲೌಸ್‌ಗಳನ್ನು ಶುದ್ಧೀಕರಿಸಿ ಮರುಬಳಕೆಗೂ ಅವಕಾಶವಿದೆ. ಕೋವಿಡ್-19 ಆಸ್ಪತ್ರೆಗಳಲ್ಲಿ ಈ ಕಿಯೋಸ್ಕ್ ಬೇಕಾಗುತ್ತದೆ. ಗಂಟಲು ದ್ರವ ಸಂಗ್ರಹದಲ್ಲಿ ಇದು ಉಪಯೋಗಿ. ಕೋವಿಡ್-19 ನಿರ್ಮೂಲನೆ ಬಳಿಕವೂ ಸಾರ್ಸ್, ಇನ್‌ಫೂÉಯೆಂಜಾ ಮೊದಲಾದ ವೈರಾಣು ಸೋಂಕಿನ ಸಂದರ್ಭ ಕಿಯೋಸ್ಕ್ ಉಪಯೋಗಕ್ಕೆ ಬರುತ್ತದೆ.