ಚಿಕ್ಕಬಳ್ಳಾಪುರ: ಶಾಂತಿ ಹಾಗೂ ಸೌಹಾರ್ದತೆಗೆ ಪ್ರತೀಕವಾಗಿರುವ ಪವಿತ್ರ ರಂಜಾನ್ (ಈದ್ ಉಲ್ ಫಿತ್ರ) ಹಬ್ಬವನ್ನು ಜಿಲ್ಲಾದ್ಯಂತ ಬುಧವಾರ ಮುಸ್ಲಿಂ ಬಾಂಧವರು ಭಕ್ತಿಭಾವದಿಂದ ಆಚರಿಸುವ ಮೂಲಕ ತಿಂಗಳಿಂದ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡ ಬಂದ ರಂಜಾನ್ ಉಪವಾಸ ವ್ರತಕ್ಕೆ ಅಂತಿಮ ತೆರೆ ಎಳೆದರು.
ಜಿಲ್ಲಾದ್ಯಂತ ಪವಿತ್ರ ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಬುಧವಾರ ಈದ್ಗಾ ಮೈದಾನಗಳು ಭರ್ತಿಯಾಗಿದ್ದವು. ಬೆಳಗ್ಗೆಯೆ ಜಿಲ್ಲೆಯ ನಗರ, ಪಟ್ಟಣಗಳಲ್ಲಿ ಶಾಂತಿ, ಸೌರ್ಹಾದತೆಯ ಪ್ರತೀಕವಾಗಿರುವ ರಂಜಾನ್ ಹಬ್ಬದ ಪ್ರಯುಕ್ತ ಭವ್ಯ ಮೆರವಣಿಗೆ ನಡೆಸಿದ ಮುಸ್ಲಿಮರು ಬಳಿಕ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಮೌಲ್ವಿಗಳು ರಂಜಾನ್ ಹಬ್ಬದ ಮಹತ್ವ ಸಾರುವ ಉಪನ್ಯಾಸ ನೀಡಿದರು. ಈದ್ಗಾ ಮೈದಾನಗಳಿಗೆ ರಾಜಕೀಯ ನಾಯಕರ ದಂಡು ಬೇಟಿ ನೀಡಿ ಹಬ್ಬದ ಶುಭಾಶಯ ಕೋರಿದ್ದು ಗಮನ ಸೆಳೆಯಿತು. ಜಿಲ್ಲಾದ್ಯಂತ ಈದ್ ಉಲ್ ಫಿತ್ರ ಆಚರಿಸುವ ಮೂಲಕ ತಿಂಗಳ ರಂಜಾನ್ ಹಬ್ಬದ ಸಂಭ್ರಮ ಸಡಗರ ತೆರೆ ಕಂಡಿತು. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿ ಜಿಲ್ಲಾದ್ಯಂತ ರಂಜಾನ್ ಸಂಭ್ರಮ ಕಳೆಗಟ್ಟಿತ್ತು. ನಗರದ ಪ್ರಶಾಂತ್ ನಗರದ ಬಳಿ ಇರುವ ಈದ್ಗಾ ಮೈದಾನದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಬಂಧುಗಳು ಪಾಲ್ಗೊಂಡು ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ನಡೆಸಿ ಗಮನ ಸೆಳೆದರು.
ಗಮನ ಸೆಳೆದ ಬೃಹತ್ ಮೆರವಣಿಗೆ: ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಗರದ ಬಿಬಿ ರಸ್ತೆ, ಬಜಾರ್ ರಸ್ತೆ, ಗಂಗಮ್ಮನ ಗುಡಿ ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು ನಗರಗಳಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಹೊಸ ಶ್ವೇತ ವರ್ಣದ ಉಡುಪುಗಳನ್ನು ಧರಿಸಿದ್ದ ಮುಸ್ಲಿಂ ಸಮುದಾಯದ ಹಿರಿಯರು, ಯುವಕರು ಭಾರೀ ಪ್ರಮಾಣದಲ್ಲಿ ಜಮಾಯಿಸಿ ನಗರಗಳ ಮುಖ್ಯ ರಸ್ತೆಗಳಲ್ಲಿ ಶಾಂತಿಯುತವಾಗಿ ಬೃಹತ್ ಮೆರವಣಿಗೆ ನಡೆಸಿದ ನಂತರ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಕ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಪ್ರತಿಯೊಬ್ಬರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮ ಗುರುಗಳು ವಿಶೇಷ ಉಪನ್ಯಾಸ ನೀಡಿ ಮೋಸ, ದೌರ್ಜನ್ಯ, ಕೆಟ್ಟ ಕೆಲಸಗಳನ್ನು ಮಾಡುವುದನ್ನು ಎಂದಿಗೂ ಇಸ್ಲಾಂ ಧರ್ಮ ಒಪ್ಪುವುದಿಲ್ಲ. ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕೆಂದು ಹೇಳಿ ಸೌರ್ಹಾದತೆಯ ಜೊತೆಗೆ ದಾನ, ಧರ್ಮದ ಪ್ರತೀಕವಾಗಿರುವ ರಂಜಾನ್ ಹಬ್ಬದ ಮಹತ್ವವನ್ನು ತಿಳಿಸಿಕೊಟ್ಟರು.
ಪರಸ್ಪರ ಹಬ್ಬದ ಶುಭಾಶಯ: ರಂಜಾನ್ ಪ್ರಯುಕ್ತ ಈದ್ಗಾ ಮೈದಾನಗಳಲ್ಲಿ ಸಾಮೂಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಎಲ್ಲಡೆ ಸಾಮಾನ್ಯವಾಗಿತ್ತು. ಹಲವು ಕಡೆ ಮುಸ್ಲಿಂ ಮುಖಂಡರು ಬಡ ಮುಸ್ಲಿಂರಿಗೆ ದಾನ, ಧರ್ಮ ಮಾಡಿದರು. ಉಪವಾಸ ಅಂತ್ಯಗೊಳಿಸಿದ ಮುಸ್ಲಿಂರು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ್ದ ನೆಚ್ಚಿನ ಮಾಂಸದೂಟಗಳ ಖಾದ್ಯಗಳನ್ನು ಸ್ನೇಹಿತರು, ನೆಂಟರ ಉಪಸ್ಥಿತಿಯೊಂದಿಗೆ ಸವಿದರು. ಸಾಮೂಹಿಕ ಪ್ರಾರ್ಥನೆ ನಡೆದ ಈದ್ಗಾ ಮೈದಾನದಲ್ಲಿ ತಿಂಡಿ, ತಿನಿಸುಗಳ ಮಾರಾಟ ಜೋರಾಗಿತ್ತು.
ಬಿಗಿ ಪೊಲೀಸ್ ಭದ್ರತೆ: ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಯಾವುದೇ ಅತಕರ ಘಟನೆಗಳು ಸೇರಿದಂತೆ ಗೊಂದಲ, ಅಶಾಂತಿಯ ವಾತಾವರಣ ಉಂಟಾಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ಮಾರ್ಗದರ್ಶನದಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಪ್ರಭುಶಂಕರ್ ಹಾಗೂ ಚಿಂತಾಮಣಿ ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಶ್ರೀನಿವಾಸ್ ನೇತೃತ್ವದಲ್ಲಿ ಜಿಲ್ಲಾದ್ಯಂತ ಅಯಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ನಗರದ ಪ್ರದೇಶದಲ್ಲಿ ತಲಾ ಒಂದೊಂದು ಕೆಎಸ್‌ಆರ್‌ಪಿ, ಡಿಆರ್ ತುಕಡಿಯ ಜೊತೆಗೆ ವ್ಯಾಪಕ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಜಿಲ್ಲೆಯ ಶಿಡ್ಲಘಟ್ಟ ಹಾಗೂ ಚಿಂತಾಮಣಿ ನಗರದಲ್ಲಿ ಹೆಚ್ಚುವರಿಯಾಗಿ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.