Advertisement

ಸ್ತ್ರೀ ಎಂದರೆ ಶ್ರೀಗಂಧ

03:50 AM Apr 26, 2017 | |

ಬಾಲ್ಯದಲ್ಲಿ ತಂದೆಯ ಆಸರೆಯಲ್ಲಿ, ಯೌವ್ವನದಲ್ಲಿ ಗಂಡನ ಆಸರೆಯಲ್ಲಿ ಮತ್ತು ಮುಪ್ಪಾವಸ್ಥೆಯಲ್ಲಿ ಮಗನ ಆಸರೆಯಲ್ಲಿ ಇರಬೇಕು. ಏಕೆಂದರೆ ಅವಳು ಹೆಣ್ಣು, ಅವಳು ಪರಾವಲಂಬಿ ಎಂದು ನೂರಾರು ವರ್ಷಗಳ ಹಿಂದೆಯೇ ಹಿರಿಯರು ಹೇಳಿದ್ದರಂತೆ. ಈಗಲೂ ಇದನ್ನೇ ಅದೆಷ್ಟೋ ಮಂದಿ ನಂಬಿಕೊಂಡಿದ್ದಾರೆ. ಆದರೆ ಇದು ಅವರವರ ತಪ್ಪು ತಿಳಿವಳಿಕೆ ಮಾತ್ರ. ಅರ್ಥವಿಲ್ಲದ ಇಂಥಾ ನಂಬಿಕೆಗಳು ಈಗಲೂ ಉಳಿದಿರಲು ಕಾರಣ, ಹೆಣ್ಣಿನ ನಿಸ್ವಾರ್ಥ ಮನಸ್ಸು. ಹೌದು ಅವಳು ತನ್ನ ಕನಸುಗಳನ್ನು ಮುರಿದು, ಮನಸ್ಸನ್ನು ಗಟ್ಟಿ ಮಾಡಿಕೊಂಡು ಬೇರೆಯವರ ಆಸೆ- ಆಕಾಂಕ್ಷೆಗಳಿಗೆ ಬೆಲೆ ಕೊಡುತ್ತಾಳೆ. ಅವರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಾಣುತ್ತಾಳೆ. ಇದನ್ನರಿಯದವರು ಅವಳು ಪರಾವಲಂಬಿ ಅನ್ನುತ್ತಾರೆ, ಸ್ತ್ರೀ ಎಂದು ಕೀಳಾಗಿ ಕಾಣುತ್ತಾರೆ. ಅವಳು ಕೂಡ ಕೇವಲ ತನ್ನ ಸ್ವಾರ್ಥ ಸಾಧಿಸಿಕೊಂಡಿದ್ದರೆ ಇಂದು ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಇರುತ್ತಿರಲಿಲ್ಲ.

Advertisement

ಅವಳಿಗೆ 21 ವರ್ಷ. ಆಕೆ ಶಿಕ್ಷಕಿಯಾಗಬೇಕೆಂಬ ಕನಸು ಕಂಡವಳು, ಅದಕ್ಕಾಗಿ ತುಂಬಾ ಕಷ್ಟಪಟ್ಟವಳು. ಹಗಲು- ರಾತ್ರಿ ಎನ್ನದೆ ತುಂಬಾ ಇಷ್ಟಪಟ್ಟು ಓದುತ್ತಿದ್ದವಳು. ಈ ಮಧ್ಯೆ ಅವಳ ಕನಸಿಗೆ ಪೆಟ್ಟು ಬೀಳುವಂಥ ಘಟನೆಯೊಂದು ನಡೆಯಿತು. ಓದಿನ ಪ್ರಾಮುಖ್ಯತೆ ಅರಿಯದ, ಅದರಲ್ಲೂ ಹೆಣ್ಣಿಗೆ ಓದು ಅಗತ್ಯವೇನಲ್ಲ ಎಂದು ತಿಳಿದಿದ್ದ ದಿನಗಳವು. ಅವಳು ಡಿ. ಎಡ್‌ ದ್ವಿತೀಯ ವರ್ಷ ಓದುತ್ತಿರುವಾಗ ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡಿದರು. ಕೇವಲ 6 ತಿಂಗಳು ಮಾತ್ರವೇ ಇತ್ತು ಅವಳು ಶಿಕ್ಷಕಿಯಾಗುವ ಕನಸು ಈಡೇರಲು. ಆದರೆ ಅದ್ಯಾಕೋ ಅವಳು ಪರಿಪರಿಯಾಗಿ ಬೇಡಿದರೂ, ಅಂಗಲಾಚಿದರೂ ಯಾರೂ ಕೇಳಲಿಲ್ಲ. ಮದುವೆಯಾದ ಮೇಲೆ ಶಿಕ್ಷಣ ಮುಂದುವರಿಸುವಂತೆ ಹೇಳಿ ಮದುವೆ ಮಾಡಿಯೇ ಬಿಟ್ಟರು. ಹುಡುಗನ ಮನೆಯವರು ಅವಳನ್ನು ಓದಿಸಲು ಒಪ್ಪಿದರು.

ಆದರೆ ನಂತರದ ಜೀವನ ಅವಳಂದುಕೊಂಡಂತಿರಲಿಲ್ಲ. ಮಾತು ಕೊಟ್ಟವನು ಮರೆತುಬಿಟ್ಟಿದ್ದ! ತುಂಬಾ ವಿಚಿತ್ರವಾಗಿದ್ದ ವರ್ತನೆ ಅವನದ್ದಾಗಿತ್ತು. ಹೀಗಾಗಿ, ಅವಳಿಗೆ ಮುಂದೆ ಓದಲಾಗಲಿಲ್ಲ. ಪರಿಣಾಮ, ಮುಖ್ಯಪರೀಕ್ಷೆಯಲ್ಲಿ ಫೇಲಾದಳು. ಈ ಬಗ್ಗೆ ತುಂಬಾ ಅಸಮಾಧಾನಗೊಂಡಳು. ಹೇಗಾದ್ರೂ ಸರಿ, ಶಿಕ್ಷಕಿಯಾಗಲೇಬೇಕೆಂದು ಮುಂದಿನ ದಿನಗಳಲ್ಲಿ ಪರೀಕ್ಷೆ ಬರೀತಾನೇ ಹೋದಳು. ಆದರೆ ಫ‌ಲಿತಾಂಶ ಮಾತ್ರ ಅವಳ ಪರ ಇರಲಿಲ್ಲ. ಈ ಮಧ್ಯೆ ಗಂಡನ ನಿಜ ಸ್ವರೂಪ ಬಯಲಾಗುತ್ತಾ ಹೋಯಿತು. ದಿನನಿತ್ಯ ಮಾನಸಿಕವಾಗಿ ಹಿಂಸಿಸತೊಡಗಿದ. ಹೊಡೆಯತೊಡಗಿದ. ಇದನ್ನು ಸಾಕಷ್ಟು ದಿನಗಳವರೆಗೆ ಅವಳು ಗುಟ್ಟು ಮಾಡಿದ್ದಳು. ಅದು ವಿಪರೀತವಾದಾಗ ತವರು ಮನೆಗೆ ಬಂದಳು. ಬಂದವಳು ಯಾವ ವಿಷಯವನ್ನೂ ಹೇಳಲಿಲ್ಲ. ತಾಯಿ ಚಿಂತಿತಳಾಗುತ್ತಾಳೆ, ಅಪ್ಪನ ಮರ್ಯಾದೆ ಹಾಳಾಗುತ್ತೆ. ಮನೆಯಲ್ಲಿ, ಮದುವೆಯಾಗಬೇಕಾದ ಹೆಣ್ಣುಮಕ್ಕಳಿದ್ದಾರೆ. ಅವರ ಭವಿಷ್ಯಕ್ಕೆ ತೊಂದರೆಯಾಗಬಾರದು… ಹೀಗೆಲ್ಲಾ ಯೋಚಿಸಿ ಸುಮ್ಮನಿದ್ದಳು. 

ಎಲ್ಲರ ಬಗ್ಗೆ ಯೋಚಿಸುತ್ತಿದ್ದ ಅವಳು ತನ್ನ ಭವಿಷ್ಯವನ್ನೇ ಮರೆತಿದ್ದಳು! ಆದರೂ ಹೇಗೋ ಮನೆಯವರಿಗೆ ವಿಷಯ ತಿಳಿಯಿತು. ಸಂಬಂಧಿಕರು ಅವಳಿಗೇ  ಬುದ್ದಿ ಹೇಳಿ ವಾಪಸ್‌ ಗಂಡನ ಮನೆಗೆ ಕಳಿಸಿಕೊಟ್ಟರು. ಅವಳು ಎಲ್ಲವನ್ನೂ ಮರೆತುಬಿಡೋಣವೆಂದು ಹೋದಳು. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿದಳು. ಅವಳ ಗಂಡನ ಹುಚ್ಚಾಟಗಳು ದಿನದಿನವೂ ಹೆಚ್ಚುತ್ತಲೇ ಹೋದವು. ಇದನ್ನೆಲ್ಲಾ ನೆನಪಿಸಿಕೊಂಡು ಅವಳು ಹೇಳಿದ ಮಾತೊಂದು ತುಂಬಾ ನೋವು ಕೊಡುವಂತಿತ್ತು. ಅದು- “ಗಂಡ ಕುಡುಕನಾಗಿದ್ದರೆ ಸಹಿಸಿಕೊಳ್ಳಬಹುದು, ದೈಹಿಕವಾಗಿ ಹೊಡೆದರೆ ಆ ಗಾಯ ಸ್ವಲ್ಪ ದಿನಗಳ ನಂತರ ವಾಸಿಯಾಗಬಹುದು. ಆದರೆ ಮಾನಸಿಕವಾಗಿ ಅವನು ಕೊಡುವ ಹಿಂಸೆ ಹೆಣ್ಣಿಗೆ ಬದುಕುವ ಆಸೆಯಿಂದ ದೂರಾಗುವಂತೆ ಮಾಡುತ್ತೆ’ ಅಂತ.    

ಅವಳ ಗಂಡ, ಚಿಕ್ಕ ವಯಸ್ಸಿನ ಹುಡುಗನಿಂದ, ಹಣ್ಣು- ಹಣ್ಣಾದ ಮುದುಕರ ತನಕ ಸಂಬಂಧ ಕಲ್ಪಿಸುತ್ತಿದ್ದನಂತೆ. “ಜೀವನದಲ್ಲಿ ಯಾರು ಬದಲಾದರೂ ಅನುಮಾನ ಪಡುವ ವ್ಯಕ್ತಿ ಮಾತ್ರ ಬದಲಾಗಲ್ಲ. ಅಂಥವನ ಜೊತೆ ಬದುಕುವುದಕ್ಕಿಂತ ಸಾಯುವುದೇ ಮೇಲು!’ ಎಂದು  ಹೇಳುವಾಗ ಅವಳ ಎದೆಯಲ್ಲಿ ಅಡಗಿದ್ದ ಜಾÌಲಾಮುಖೀ ಸಿಡಿದು ಆಕೆಯ ಕಣ್ಣುಗಳು ಕೆಂಡದಂತೆ ಕೆಂಪಾಗಿದ್ದವು. ಇಷ್ಟಾದರೂ, ಅವನನ್ನು ಬಿಟ್ಟು ಬದುಕಲು ಇಷ್ಟಪಡದೆ, ಈ ಸಮಾಜಕ್ಕೆ ಹೆದರಿದ ಆಕೆ ಮತ್ತೆ ಗಂಡನ ಮನೆಗೇ ಹೋದಳು. ಏಕೆಂದರೆ ಆಕೆಗೆ ಎರಡು ಮುದ್ದಾದ ಮಕ್ಕಳಿದ್ದವು, ತಂದೆಯಿಲ್ಲದ ಮಕ್ಕಳನ್ನು ಕಂಡರೆ ಈ ಸಮಾಜ ಹೀಯಾಳಿಸುತ್ತದೆ, ಹೀನಾಯವಾಗಿ ನಡೆಸಿಕೊಳ್ಳುತ್ತದೆ ಎಂಬೆರಡು ಕಾರಣಗಳಿಗೆ! ತನ್ನ ಮಕ್ಕಳ ಭವಿಷ್ಯವಾದರೂ ಉಜ್ವಲವಾಗಿರಲಿ ಎಂದು. ಅವನು ತನ್ನೊಂದಿಗೆ ಸರಿಯಾಗಿ ನಡೆದುಕೊಳ್ಳದಿದ್ದರೂ ಪರವಾಗಿಲ್ಲ, ಮಕ್ಕಳಿಗಾದರೂ ಒಳ್ಳೆಯ ಅಪ್ಪನಾಗಿದ್ದರೆ ಸಾಕು ಎಂದು ಅವಳು ಯೋಚಿಸಿದ್ದಳು.

Advertisement

ಇನ್ನೊಬ್ಬಳು ಸುಂದರಿ. ಶಿಕ್ಷಣ ಮುಗಿಸಿ ಕೆಲವು ವರ್ಷ ನೌಕರಿ ಮಾಡಿದಳು. 26 ವರ್ಷದ ಆಕೆಗೆ ಇನ್ನೂ ಮದುವೆಯಾಗಿರಲಿಲ್ಲ. ಸುತ್ತಮುತ್ತಲಿನ ಜನ ತನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದುದನ್ನು ಕೇಳಿ ನೊಂದಿದ್ದಳು. ಅದಕ್ಕೇ ಮದುವೆಯಾಗಬೇಕೆಂದು ತೀರ್ಮಾನಿಸಿದಳು. ಕೆಲವು ಜನ ಬಂದುಹೋದರು. ಒಬ್ಬ ಶ್ರೀಮಂತ ಮನೆತನದವರು ಇವಳನ್ನು ಒಪ್ಪಿ ಮನೆ ತುಂಬಿಸಿಕೊಂಡರು. ಅವರು ಕೇವಲ ಹಣದ ವಿಚಾರದಲ್ಲಿ ಮಾತ್ರ ಶ್ರೀಮಂತರಾಗಿದ್ದರು ಎಂಬುದು ನಂತರ ಅವಳಿಗೆ ತಿಳಿಯಿತು. ಮದುವೆಯಾದ ನಂತರ ಇವಳನ್ನು ತವರುಮನೆಯಿಂದ ದೂರ ಮಾಡಿದರು. ಒಂದು ಮುದ್ದಾದ ಹೆಣ್ಣುಮಗುವೂ ಆಯಿತು. ಯಾವತ್ತೂ ತಾಯಿಯ ಮನೆಗೆ ಹೋಗದ ಆಕೆ ಇದ್ದಕ್ಕಿದ್ದಂತೆ ಕಂದಮ್ಮಳೊಂದಿಗೆ ತವರುಮನೆಗೆ ಬಂದಳು. ಎಷ್ಟು ದಿನವಾದರೂ ಅವಳು ಗಂಡನ ಮನೆಗೆ ಹೋಗದಿದ್ದುದನ್ನು ಕಂಡು ಜನ ನಾನಾ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಮೊದಲೇ ಕುಗ್ಗಿದ್ದವಳು ಇನ್ನಷ್ಟು ನೊಂದುಕೊಂಡಳು. ಆಮೇಲೆ ವಿಷಯ ಏನೆಂದು ಹೇಳಿದಳು. ಅವಳ ಗಂಡನ ಮನೆಯವರು ಅವಳನ್ನು ವಿಚ್ಛೇದನಕ್ಕಾಗಿ ಪೀಡಿಸತೊಡಗಿದ್ದರು. ಆದರೆ ಆಕೆಗೆ ಮಾತ್ರ ಅದು ಇಷ್ಟವಿರಲಿಲ್ಲ. ಗಂಡ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಎಂದಲ್ಲ. ತನ್ನ ಮಗಳಿಗೆ ಅಪ್ಪ ಇಲ್ಲದಂತೆ ಮಾಡಬಾರದು ಎಂಬ ಒಂದೇ ಕಾರಣಕ್ಕೆ! “ಬೇಕಾದರೆ ಅವನ ಮನೆಯಲ್ಲಿ ಯಾವುದೋ ಮೂಲೆಯಲ್ಲಿರುತ್ತೇನೆ. ಆದರೆ ಶಾಶ್ವತವಾಗಿ ಅಪ್ಪನ ಮನೆಗೆ ಮಾತ್ರ ಬರಲಾರೆ’ ಎಂದಿದ್ದಳು ಆಕೆ. 

ಈ ಎರಡೂ ಕತೆಗಳ ಅಮ್ಮಂದಿರಿಗೆ ಬೇಕಾಗಿದ್ದಿದ್ದು ಒಂದೇ… ತಮ್ಮ ಮಕ್ಕಳಿಗೆ ಅಪ್ಪ ಬೇಕು. ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಎಂದು. ಹೀಗೆ ಅದೆಷ್ಟೊ ಹೆಣ್ಣುಮಕ್ಕಳು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಂಡು ಬೇರೆಯವರಿಗೆ ನೆಮ್ಮದಿ, ಸಂತೋಷ ನೀಡಿದ್ದಾರೆ. ತಮಗಿಂತ ಬೇರೆಯವರ ಆಸೆ- ಕನಸುಗಳನ್ನು ಈಡೇರಿಸುವುದರಲ್ಲೇ ಹೆಚ್ಚು ಆನಂದ ಕಂಡಿದ್ದಾರೆ. ಒಂದರ್ಥದಲ್ಲಿ, ಶ್ರೀಗಂಧದ ಕೊರಡಿನಂತೆಯೇ ಬದುಕು ಸವೆಸುವ ಅವಳು ತ್ಯಾಗ, ಕರುಣೆ, ವಾತ್ಸಲ್ಯದ ಪ್ರತಿನಿಧಿಯಾಗಿಯೇ ಬಾಳಿದರೂ, ಬಹಳ ಸಂದರ್ಭದಲ್ಲಿ ಅದು ಗಣನೆಗೆ ಬರುವುದಿಲ್ಲ. ಹೆಣ್ಣು, ಅದೆಷ್ಟು ಸ್ಥಿತಪ್ರಜ್ಞೆ ಎಂದರೆ, ತನಗೆ ಪೆಟ್ಟಿನ ಮೇಲೆ ಪೆಟ್ಟು ಬಿದ್ದರೂ ಮೊನವಾಗಿದ್ದು ಬಿಡುತ್ತಾಳೆ. ಥೇಟ್‌ ಶ್ರೀಗಂಧದ ಹಾಗೆ!

ಗೌರಿ ಭೀ. ಕಟ್ಟಿಮನಿ, ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next