Advertisement

ಗುಡ್ಡ ಕುಸಿತದ ಭೀತಿ; ಅಪಾಯಕ್ಕೆ ಮೊದಲು ಬೇಕಿದೆ ಕ್ರಮ

11:00 PM Jan 18, 2021 | Team Udayavani |

ಬಂಟ್ವಾಳ: ಹಲವು ಕಡೆ ಗುಡ್ಡ ಕುಸಿತದ ಘಟನೆಗಳು ನಡೆದು ಜೀವ ಹಾನಿ, ಆಸ್ತಿಪಾಸ್ತಿ ಹಾನಿಯ ಘಟನೆಗಳು ನಮ್ಮ ಕಣ್ಣ ಮುಂದಿದೆ. ಕೆಲವೊಂದಕ್ಕೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೆ ಹಾಗಾಗುತ್ತದೆ. ಬಂಟ್ವಾಳ ಪುರಸಭೆ ವ್ಯಾಪ್ತಿಯ ಗೂಡಿನಬಳಿಯಲ್ಲೂ ಇಂತಹ ಗುಡ್ಡವೊಂದು ಅಪಾಯದ ಸ್ಥಿತಿಯ ಲ್ಲಿದ್ದು, ಸಂಬಂಧಪಟ್ಟವರು ಈಗಲೇ ಎಚ್ಚೆತ್ತು ಕೊಳ್ಳಬೇಕಿದೆ.

Advertisement

ಗೂಡಿನಬಳಿಯ ಈ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾದಲ್ಲಿ ಸ್ಥಳೀಯ ಮನೆಗಳಿಗೆ ಹಾನಿಯಾಗುವ ಜತೆಗೆ ರಸ್ತೆ ಸಂಪರ್ಕವೂ ಕಡಿತಗೊಳ್ಳುತ್ತದೆ. ಜತೆಗೆ ಪುರಸಭೆ ಹಲವು ವಾರ್ಡ್‌ಗಳ ನೂರಾರು ಮನೆಗಳಿಗೆ ನೀರಿನ ಸಂಪರ್ಕವೂ ಕಡಿತಗೊಳ್ಳುತ್ತದೆ. ಹೀಗಾಗಿ ಅಪಾಯ ಸಂಭವಿಸುವ ಮೊದಲು ಬೃಹತ್‌ ತಡೆಗೋಡೆ ನಿರ್ಮಾಣದ ಅಗತ್ಯವಿದೆ.

ಗುರುಪುರ ಘಟನೆ ನೆನಪು :

ಗೂಡಿನಬಳಿಯ ಅಪಾಯದ ಸ್ಥಿತಿ ಕಳೆದ ಮಳೆಗಾಲದಲ್ಲಿ ಗುರುಪುರ ಮಠದಗುಡ್ಡೆ (ಬಂಗ್ಲೆಗುಡ್ಡೆ)ಯಲ್ಲಿ ನಡೆದ ಘಟನೆಯನ್ನು ನೆನಪಿಸುತ್ತದೆ. ಗೂಡಿನ ಬಳಿಯ ಪ್ರದೇಶವೂ ಅದೇ ರೀತಿಯ ಜನ ವಸತಿಯ ಪ್ರದೇಶವಾಗಿದ್ದು, ಗುಡ್ಡದ ತಳಭಾಗದಲ್ಲಿ ಹಲವಾರು ಮನೆಗಳಿವೆ.

ಗುಡ್ಡೆ ಕುಸಿತ-ಗೋಣಿಚೀಲ ಪರಿಹಾರ :

Advertisement

ಗೂಡಿನಬಳಿಯಿಂದ ಎತ್ತರ ಪ್ರದೇಶ ದಲ್ಲಿರುವ ಮನೆಗಳು ಹಾಗೂ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ಪಕ್ಕದಲ್ಲೇ ಹತ್ತಾರು ಮನೆಗಳಿದ್ದು, ಒಂದು ವೇಳೆ ಈ ಗುಡ್ಡ ಕುಸಿದಲ್ಲಿ ಹತ್ತಾರು ಮನೆಗಳಿಗೆ ಹಾನಿಯಾಗಲಿದೆ. ಕಳೆದ ಕೆಲವು ತಿಂಗಳ ಹಿಂದೆ ಇಲ್ಲಿ ಗುಡ್ಡ ಕುಸಿತ ಉಂಟಾದಾಗ ತಹಶೀಲ್ದಾರ್‌ ಸೂಚನೆಯಂತೆ ಎಂಜಿನಿಯರ್‌ ಪರಿಶೀಲನೆ ನಡೆಸಿ ಮರಳು ತುಂಬಿದ ಗೋಣಿ ಚೀಲಗಳನ್ನು ಇರಿಸಲಾಗಿತ್ತು. ನೂರಾರು ಗೋಣಿಗಳನ್ನು ಒಂದರ ಮೇಲೊಂದರಂತೆ ಇಡಲಾಗಿದೆ. ಆದರೆ ಇದೀಗ ಬಿಸಿಲಿನ ತೀವ್ರತೆಗೆ ಗೋಣಿಗಳು ಹರಿದು ಮರಳು ಕೆಳಗೆ ಬೀಳುತ್ತಿದೆ. ಒಂದು ವೇಳೆ ಜೋರಾಗಿ ಮಳೆ ಬಂದು ನೀರು ಒಳ ನುಗ್ಗಿದರೆ ಗೋಣಿ ಚೀಲಗಳು ಕೂಡ ಕೆಳಗೆ ಬೀಳುವ ಸ್ಥಿತಿ ಇದೆ. ರಸ್ತೆಗೆ ತಾಗಿಕೊಂಡೇ ಗುಡ್ಡ ಕುಸಿದಿದ್ದು, ಇನ್ನು ಸ್ಪಲ್ಪ ಕುಸಿದರೂ, ಈ ಭಾಗಕ್ಕೆ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ಇಲ್ಲಿ 2 ಕಡೆಗಳಲ್ಲಿ ಗುಡ್ಡ ಕುಸಿದಿದ್ದು, ಎರಡೂ ಕಡೆಯೂ ಗೋಣಿ ಚೀಲಗಳನ್ನು ಇಡಲಾಗಿದೆ.

ಗುಡ್ಡ ಜರಿದರೆ ರಸ್ತೆ ಸಂಪರ್ಕ ಕಡಿತ :ವಾರ್ಡ್‌ಗಳಿಗೆ ನೀರು ಪೂರೈಸುವ ಟ್ಯಾಂಕ್‌ :

ಗೂಡಿನಬಳಿಯಲ್ಲಿ ಗುಡ್ಡದ ಮೇಲ್ಭಾಗದಲ್ಲಿ ಪುರಸಭೆಯ ಹಲವು ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುವ ಟ್ಯಾಂಕ್‌ ಇದ್ದು, ಟ್ಯಾಂಕ್‌ಗೆ ನೀರು ಪೂರೈಕೆ ಮಾಡುವ ಪೈಪ್‌ ಹಾಗೂ ಅದರಿಂದ ನೀರು ಪೂರೈಕೆಯಾಗುವ ಟ್ಯಾಂಕ್‌ ಇದೇ ರಸ್ತೆಯ ತಳಭಾಗದಲ್ಲಿದೆ. ಹೀಗಾಗಿ ಗುಡ್ಡ ಕುಸಿಯುವ ವೇಳೆ ಪೈಪ್‌ಲೈನ್‌ ಸಂಪರ್ಕ ಕಡಿತಗೊಂಡರೆ ಭಾರೀ ನಷ್ಟವಾಗಲಿದೆ. ಜತೆಗೆ ಹಲವು ತಿಂಗಳುಗಳ ಕಾಲ ನೀರು ಪೂರೈಕೆಗೂ ತೊಂದರೆ ಎದುರಾಗುವ ಆತಂಕವಿದೆ.

ದ.ಕ. ಜಿಲ್ಲಾಧಿಕಾರಿಗಳಿಂದ ಸಮಸ್ಯೆ ಕುರಿತು ಪರಿಶೀಲನೆಗೆ ಪುರಸಭೆಗೆ ಬಂದಿದೆ. ಅದಕ್ಕೆ ತಡೆಗೋಡೆ ಅಗತ್ಯವಾಗಿದ್ದು, ಹೆಚ್ಚಿನ ಅನುದಾನ ಬೇಕಾಗುತ್ತದೆ. ಆದರೆ ಪುರಸಭೆಯ ಅನುದಾನದಿಂದ ಅದು ಅಸಾಧ್ಯವಾಗಿದೆ. ಹೀಗಾಗಿ ಶಾಸಕರ ಮೂಲಕ ಸರಕಾರದಿಂದ ಅನುದಾನಕ್ಕಾಗಿ ಮನವಿ ಮಾಡಲಾಗುವುದು. ಸಾಮಾನ್ಯ ತಡೆಗೋಡೆಗಿಂತಲೂ ಹೆಚ್ಚು ಬಲಿಷ್ಠ ಇರುವ ತಡೆಗೋಡೆ ಬೇಕಾಗುತ್ತದೆ.-ಮಹಮ್ಮದ್‌ ಶರೀಫ್‌, ಅಧ್ಯಕ್ಷರು, ಪುರಸಭೆ, ಬಂಟ್ವಾಳ.

Advertisement

Udayavani is now on Telegram. Click here to join our channel and stay updated with the latest news.

Next