ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆಮಾಡಿದ್ದ ವ್ಯಕ್ತಿ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಗಿಲು ಕ್ರಾಸ್‌ನ ಶ್ರೀನಿವಾಸಪುರದ ನಿವಾಸಿ ಮುನಿಸ್ವಾಮಿ ಹಾಗೂ ಆತನ ಅಪ್ರಾಪ್ತ ಪುತ್ರ, ಸ್ಥಳೀಯ ನಿವಾಸಿ ಮೂರ್ತಿ ಎಂಬಾತನ ಜತೆ ಜಗಳವಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಲಾರಿ ಚಾಲಕ ಮುನಿರಾಜು, ಜಗಳ ಬಿಡಿಸಲು ಮುಂದಾಗಿದ್ದು, ಇದರಿಂದ ಸಿಟ್ಟಿಗೆದ್ದ ತಂದೆ, ಮಗ ಚಾಕುವಿನಿಂದ ಮುನಿರಾಜುವಿಗೆ ಇರಿದು ಪರಾರಿಯಾಗಿದ್ದರು. ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಪ್ರಕರಣದ ತನಿಖೆ ಚುರುಕುಗೊಳಿಸಿದ ಯಲಹಂಕ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಂ.ಬಿ.ರಾಮಕೃಷ್ಣ ರೆಡ್ಡಿ ನೇತೃತ್ವದ ತಂಡ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಮುನಿಸ್ವಾಮಿ ಹಾಗೂ ಆತನ ಮಗನನ್ನು ಬಂಧಿಸಿದೆ. ಸದ್ಯ ಕಾನೂನು ಸಂಘರ್ಷಕ್ಕೆ ಒಳಗಾದ ಆರೋಪಿಯನ್ನು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಆರೋಪಿ ಮುನಿಸ್ವಾಮಿ ಮನೆಯ ಮುಂಭಾಗದ ರಸ್ತೆಯಲ್ಲಿ ಮುನಿರಾಜು, ಟ್ರ್ಯಾಕ್ಟರ್ ಹಾಗೂ ಲಾರಿಯನ್ನು ವೇಗವಾಗಿ ಓಡಿಸಿಕೊಂಡು ಹೋದ ಎಂಬ ಕಾರಣಕ್ಕೆ ಇಬ್ಬರ ನಡುವೆ ಈ ಹಿಂದೆ ಜಗಳವಾಗಿತ್ತು. ಹಳೆಯ ವೈಶಮ್ಯ ಮನಸ್ಸಿನಲ್ಲಿ ಇರಿಸಿಕೊಂಡಿದ್ದ ಆರೋಪಿಗಳು, ಭಾನುವಾರ ರಾತ್ರಿ ಜಗಳ ಬಿಡಿಸಲು ಬಂದ ಮುನಿರಾಜುಗೆ ಚಾಕುವಿನಿಂದ ಇರಿದಿದ್ದಾರೆ.
ಜತೆಗೆ, ಹೇಮಂತ್ ಎಂಬಾತನಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದರು, ಸದ್ಯ ಹೇಮಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ವಿವರಿಸಿದರು. ವಿಚಾರಣೆ ವೇಳೆ ಆರೋಪಿಗಳು, ಕೊಲೆ ತಾವೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.