ಕಾಳಗಿ: ಕೃಷಿ ಜೊತೆ ಜೊತೆಗೆ ಕುರಿ ಹಾಗೂ ಗೋವು ಸಾಕಾಣಿಕೆ ಮಾಡುವುದರಿಂದ ರೈತ ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢನಾಗುತ್ತಾನೆ ಎಂದು ರದ್ದೆವಾಡಿ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನಿ ಡಾ| ಜೈಶಂಕರ ಹೇಳಿದರು.
ಟೆಂಗಳಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈಜ್ಞಾನಿಕ ಪದ್ಧತಿಯಲ್ಲಿ ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ರೈತರು ಪ್ರತಿ ವರ್ಷ ಅತಿವೃಷ್ಟಿ ಅನಾವೃಷ್ಟಿಯಿಂದ ಕೃಷಿಯಲ್ಲಿ ನಿರಂತರ ನಷ್ಟ ಅನುಭವಿಸಿ ಸಾಲಭಾದೆ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕಾದರೆ ರೈತರು ಕೃಷಿ ಜೊತೆಗೆ ಕುರಿ, ಆಡು, ಗೋವು, ಹೈನುಗಾರಿಕೆಯಂತ ಉಪಕಸುಬನ್ನು ಮಾಡಿದಾಗ ಅಧಿಕ ಲಾಭ ಗಳಿಸಿ ಸದೃಢನಾಗುತ್ತಾರೆ ಎಂದರು.
ವಿದ್ಯಾವಂತ ಯುವಕರು ನೌಕರಿಗಾಗಿ ಅಲೆದಾಡಿ ಸಮಯ ಕಳೆಯುವುದರ ಬದಲು ಹಳ್ಳಿಯಲ್ಲೇ ಸ್ವಯಂ ಉದ್ಯೋಗ ಸೃಷ್ಟಿಸಿ ಮಾಲಿಕರಾಗಿ ಉತ್ತಮ ಆದಾಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಪಶು ವೈದ್ಯಾಧಿಕಾರಿ ಡಾ| ಅಣ್ಣರಾವ್ ಪಾಟೀಲ ಮಾತನಾಡಿ, ದಿನೆ ದಿನೇ ಕುರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ರೈತರು ಹಳೆಯ ಪದ್ಧತಿಯಂತೆ ಕುರಿ ಸಾಕಾಣಿಕೆ ಮಾಡದೆ, ಹಟ್ಟಿ ಪದ್ಧತಿ ಮೂಲಕ 2ರಿಂದ3 ತಿಂಗಳ 2500-3000ರೂ.
ಬೆಲೆಯ ಗಂಡು ಕುರಿ ತಂದು ಐದಾರು ತಿಂಗಳು ಸಲುಹಿ ಒಂಭತ್ತು ತಿಂಗಳಿಗೆ ಪಟ್ಟಣಗಳಲ್ಲಿ ಮಾರಾಟ ಮಾಡಿದರೆ ಒಂದು ಗಂಡು ಕುರಿ ಸುಮಾರು 12,000-15,000ರೂ. ವರೆಗೆ ಮಾರಾಟವಾಗುತ್ತವೆ. ಈ ಮಾದರಿಯಲ್ಲಿ 2-3 ಗುಂಪು ರಚಿಸಿ ಅವುಗಳಿಗೆ ಜಂತು ನಾಶಕ, ಕರಳು ಬೇನೆ, ಹಿರೆ ಬೇನೆ ರೋಗದ ವಿರುದ್ಧ ಲಸಿಕೆ ಹಾಕಿಸಿ ಲಾಲನೆ, ಪೋಷಣೆ ಮಾಡಿದರೆ ತಿಂಗಳಿಗೆ 5ರಿಂದ 6 ಲಕ್ಷ ರೂ. ಆದಾಯ ಗಳಿಸಬಹುದಾಗಿದೆ ಎಂದು ಹೇಳಿದರು. ರೈತರಾದ ಭೀಮಾಶಂಕರ, ಹನೀಫಸಾಬ ಅಫಘಾನ ಹಾಗೂ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.