Advertisement
‘ಜೋರು ಬರಗಾಲ ಬಂದು, ಹುಣಸೆ ಮರ ಪೂರ್ತಿ ಒಣಗಿ ಎಲೆ ಉದುರಿಸಿ ಬಿಸಿಲಿಗೆ ಕಾಯಬೇಕು. ಹೀಗಾದರೆ ಮುಂದಿನ ವರ್ಷ ಮರ ಭರ್ಜರಿ ಹೂವರಳಿಸಿ ಕಾಯಿ ಬಿಡ್ತದೆ ಎಂದು’ ಗದಗದ ಶಿರಹಟ್ಟಿ ರೈತರೊಬ್ಬರು ಹೇಳಿದ್ದರು. ಅಂದರೆ, ಬರ ಈ ಮರಕ್ಕೆ ಇಷ್ಟವೆಂದಾಯ್ತು. ‘ಬಿದಿರುಗಳದಾಗ ಬಡಿದು ಹುಣಸಿ ಕಾಯಿ ಕೊಯ್ಯಬೇಕು, ಟೊಂಗೆಗೆ ಹೊಡೆದು ಗಾಯ ಮಾಡಿದ್ರೆ ಫಸಲು ಜಾಸ್ತಿ’ ಎಂಬುದು ಕುಷ್ಟಗಿಯ ದೇವೇಂದ್ರಪ್ಪ ಬಲೂಟಗಿಯವರ ಮಾತು. ನಮ್ಮ ಕಡೀ ಮಳೀನೇ ಬಂದಿಲ್ಲ, ದನಕರು ಕುಡಿಯಾಕ ನೀರಿಲ್ಲ, ಹೊಲದಾಗ ಬೆಳೆ ಇಲ್ಲ. ಹುಣಸೆ, ಬೇಲದಲ್ಲಿ ಫಲ ಚೆನ್ನಾಗಿದೆಯೆಂದು ಬಳ್ಳಾರಿಯ ಕೂಡ್ಲಗಿಯ ಕೃಷಿಕ ವಿಶ್ವೇಶ್ವರ ಸಜ್ಜನ್ ಹೇಳುತ್ತಾರೆ. ತುಮಕೂರು ತೋನಕೆರೆ ಪ್ರದೇಶದಲ್ಲಿ ಬರದಲ್ಲಿ ಹುಣಸೆ ಫಸಲು ಚೆನ್ನಾಗಿದೆ.
Related Articles
Advertisement
ಒಮ್ಮೆ ತೀರಾ ಲಾಭದಾಯಕವಾಗಿ ಬೆಳೆಯಲು ಯೋಗ್ಯವಲ್ಲದಿದ್ದರೂ ಅಡಿಕೆ, ತೆಂಗು, ಬಾಳೆ, ಕಾಫಿ, ಮಾವು, ಹಲಸು ಮುಂತಾದ ಸಸ್ಯಗಳ ಜೊತೆ ಕೆಲವಾದರೂ ಕಾಡು ಮೂಲದ ಸಸ್ಯಗಳನ್ನು ಉಳಿಸಿ ಬೆಳೆಸಬೇಕು. ಕಾಡು ಕಾಳು ಮೆಣಸಿನ ಬಳ್ಳಿ ತೋಟದಲ್ಲಿ ಒಂದೆರಡಾದರೂ ಇದ್ದರೆ ಕಸಿ ಮಾಡಿ ರೋಗಸಹಿಷ್ಣು ಬಳ್ಳಿಯನ್ನು ಅಭಿವೃದ್ಧಿಪಡಿಸಲು ಅನುಕೂಲವಾಗಬಹುದು. ಕಾಡಿನ ರಾಮಪತ್ರೆಗೆ ತೋಟದ ಜಾಯಿಕಾಯಿ ಕಸಿ ಮಾಡಬಹುದು. ಕಾಡಿನ ತಂಪು ನೆಲೆಯಲ್ಲಿ ಬೆಳೆಯುವ ಚಕ್ರಾಣಿ ಔಷಧ ಸಸ್ಯ, ಅಡಿಕೆ ತೋಟದ ಜವುಗು ನೆಲೆಯಲ್ಲಿ ಬದುಕಿ ಬಳಕೆಗೆ ಸಿಗುತ್ತದೆ. ಸದಾ ನೀರು ಹರಿಯುವ ನೆಲೆಯಲ್ಲಿ ಊರಿದ ಬಜೆ ಸಸ್ಯ ಯಾವತ್ತೂ ಬದುಕಿದ್ದು ಮದ್ದಿಗೆ ನೆರವಾಗುತ್ತದೆ. ನೇರಳೆ, ಮಾವು, ಹಲಸು, ಹೆಬ್ಬಲಸು, ಬೈನೆ ಮುಂತಾದ ಕಾಡು ಫಲವೃಕ್ಷಗಳು ತೋಟದ ಸನಿಹದಲ್ಲಿದ್ದರೆ ವನ್ಯಮೃಗಗಳ ಹಾವಳಿ ಕಡಿಮೆಯಾಗುತ್ತದೆ. ಪಶ್ಚಿಮದ ಬಿಸಿಲು ಪ್ರಹಾರಕ್ಕೆ ಮರ ಸಾಯುವುದಿಲ್ಲ.
ಭೂಮಿಯಲ್ಲಿ ಉತ್ತಮ ಫಲವನ್ನು ಒಂದು ಮರ ನೀಡುತ್ತದೆಂದರೆ ಅದು ಮರದ ತಾಕತ್ತು. ಆ ಫಲಕ್ಕೆ ಉತ್ತಮ ಮಾರುಕಟ್ಟೆ ವಿಸ್ತರಿಸುವ ಜಾಣ್ಮೆ ನಮಗೆ ಬೇಕು. ಇದಕ್ಕೆ ಅಗತ್ಯ ಸಂಶೋಧನೆ, ಸಂಸ್ಕರಣೆಯ ಪರಿಜ್ಞಾನ, ಆಹಾರ-ವೈವಿದ್ಯ ಜ್ಞಾನದ ನೆರವು ಅಗತ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲರಲ್ಲಿ ಆರೋಗ್ಯದ ಕುರಿತು ಕಾಳಜಿ ಹೆಚ್ಚಿದೆ. ಉತ್ತಮ ಆರೋಗ್ಯ ನೀಡುವ ಫಲ ಖರೀಸಲು ಎಲ್ಲರೂ ಆಸಕ್ತಿ ವಹಿಸಿದ್ದಾರೆ. ಆದರೆ ಮಾರುಕಟ್ಟೆಯ ಆಹಾರ ಸರಕಿನಲ್ಲಿ, ಆಯುರ್ವೇದ ಮದ್ದಿನಲ್ಲಿ ಎಷ್ಟು ಸತ್ಯ-ಸತ್ವವಿದೆಯೆಂದು ಗೊತ್ತಾಗುತ್ತಿಲ್ಲ. ಜನಜಾಗೃತಿ, ಸರಕಾರದ ನೀತಿಗಳಿಂದಾಗಿ ಸಾವಯವ ಮಾರುಕಟ್ಟೆ ಬೆಳೆದಿದೆ. ನಿಜವಾದ ಸಾಚಾ ಬೆಳೆ ಎಷ್ಟಿದೆಯೆಂದು ಕೃಷಿ ನೆಲೆ ಸುತ್ತಾಡಿದರೆ ಅರ್ಥವಾಗುತ್ತದೆ. ಕಾಡು ಸಸ್ಯದ ಹೂವು, ಫಲ, ತೊಗಟೆ, ಚಿಗುರು, ಎಲೆ, ಬೇರು, ಬೀಜಗಳು ಔಷಧ ತಯಾರಿಕೆಯಲ್ಲಿ ಮಹತ್ವವಿದೆ. ತಂಬುಳಿ, ಕಷಾಯ, ಚಟ್ನಿ ಮುಂತಾದ ಸತ್ವಯುತ ಸಾವಯವ ಆಹಾರವಾಗಿ ಬೇಡಿಕೆ ಇದೆ. ಜನಪದ ಅಡುಗೆ ಆಹಾರ, ಆರೋಗ್ಯಕ್ಕೆ ಒತ್ತು ನೀಡಿದೆ. ಅದರಕ್ಕೆ ಕಹಿ, ಉದರಕ್ಕೆ ಸಿಹಿಯೆಂದು ಸಾರಿದೆ. ಕೃಷಿಕರು ಕಳೆದುಕೊಂಡಿದ್ದನ್ನು ಬಿದ್ದಲ್ಲಿಯೇ ಹುಡುಕಬೇಕು. ಹೀಗಾಗಿ ಸ್ಥಳೀಯ ಅರಣ್ಯ ಸಸ್ಯಗಳಿಗೆ ತೋಟದಲ್ಲಿ ಸ್ವಲ್ಪ ಆಶ್ರಯ ನೀಡಿದರೆ ಕೃಷಿಕರ ಬದುಕು ಬದಲಿಸಬಹುದು.
ಮಲೆನಾಡು, ಕರಾವಳಿ, ಅರೆಮಲೆನಾಡಿನ ನೆಲೆಗಳಲ್ಲಿ ಹಳ್ಳಿ ಸುತ್ತಾಡಿ ಪಾರಂಪರಿಕ ಆಹಾರಗಳ ಪಟ್ಟಿ ತಯಾರಿಸಿದರೆ, ನೂರಾರು ಅರಣ್ಯ ಸಸ್ಯಗಳ ಪರಿಚಯವಾಗುತ್ತದೆ. ಇಂಥ ಅಪರೂಪದ ಸಸ್ಯಗಳ ಅರಣ್ಯ, ಕಾಲಾಂತರದಲ್ಲಿ ನಾಶವಾಗುತ್ತ ಇಂದು ಏಕಜಾತಿಯ ಅಕೇಶಿಯಾ, ತೇಗ, ನೀಲಗಿರಿ, ಗಾಳಿ ನೆಡುತೋಪುಗಳು ನಿಂತಿವೆ. ಸ್ಥಳೀಯ ಸಸ್ಯಗಳ ಬಳಕೆ ಜ್ಞಾನ, ಮಹತ್ವದ ಅರಿವಿಲ್ಲದವರು ಅಧಿಕಾರಿಗಳಾಗಿ ಅರಣ್ಯಾಡಳಿತಕ್ಕೆ ನಿಂತಿದ್ದಾರೆ. ಶೀಘ್ರ ಬೆಳೆಯುವ ನೆಡುತೋಪು ಬೆಳೆಸಿ ಕಟಾವು ಮಾಡಿ ಉದ್ಯಮಗಳಿಗೆ ಸಾಗಿಸುವುದು ಸರಳ ಕೆಲಸವಾಗಿದೆ. ಇದು ಕೃಷಿ ನೆಲೆಯಲ್ಲಿ ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ. ಆಹಾರ, ಔಷಧಕ್ಕೆ ಅಗತ್ಯ ಸಸ್ಯ ಕೈಗೆಟುಕದೇ ಅರಣ್ಯವಾಸಿಗಳ ಸಸ್ಯ ಸಂಬಂಧಗಳು ಕುಸಿಯುತ್ತ ಜ್ಞಾನ ಬತ್ತುತ್ತಿದೆ.
ಪಶ್ಚಿಮ ಘಟ್ಟದ ಕಾಡು ಅಮೂಲ್ಯ, ಅದ್ಬುತವೆಂದು ನಗರದಲ್ಲಿ ಕುಳಿತು ಹೇಳಬಹುದು, ಭಾಷಣ ಬಿಗಿಯಬಹುದು. ಆದರೆ ಸ್ಥಳೀಯರಿಗೆ ಹೇಗೆ ಮುಖ್ಯವೆಂದು ಪರಂಪರೆ ಬಳಕೆ ತಿಳುವಳಿಕೆಯ ಮೂಲಕ ಅರಿಯದಿದ್ದರೆ ಕಾಡಿನ ಪ್ರೀತಿ ಹಬ್ಬುವುದಿಲ್ಲ. ಕೃಷಿಯೋಗ್ಯ ಸಸ್ಯಗಳನ್ನು ಗುರುತಿಸಿ, ಉಳಿಸಿ ಬಳಸದಿದ್ದರೆ ಕೃಷಿಕರ ಆಹಾರ ಆರೋಗ್ಯ ಹಾಳಾಗುತ್ತದೆ. ಅರಣ್ಯ ಸಸ್ಯ ಬಳಸಿ ಅಡುಗೆ ತಯಾರಿಸುವ ಅಮ್ಮನ ಅಡುಗೆ ಜ್ಞಾನ ಅಮ್ಮನ ಉಪ್ಪಿನಕಾಯಿಯಂತೆ ಜನಪ್ರಿಯವಾಗುವ ಕಾಲ ಈಗ ಸನ್ನಿಹಿತವಾಗಿದೆ. ಉತ್ತಮ ಪರಿಸರ, ನೆಲಜಲ ಸಂರಕ್ಷಣೆ, ಆರೋಗ್ಯ, ಆರ್ಥಿಕತೆಯ ಜೊತೆ ಕೃಷಿ ಸಂಬಂಧ ವೃದ್ಧಿಯಾಗಲು ಕಾಡು ಸಸ್ಯಗಳು ಕೃಷಿ ನೆಲೆಗೆ ಬರಬೇಕಿದೆ.
ಮುಂದಿನ ಸಂಚಿಕೆ: ಗುಮ್ಮನ ಗೂಟ ಹಾಗೂ ಸಿವೆಟ್ ಕಾಫೀ