Advertisement

ಬಾಗಿಲು ತೆಗೆದ ಕೃಷಿ ಉಪಕರಣಗಳ ಅಂಗಡಿ

01:16 AM Apr 07, 2020 | Sriram |

ಪುತ್ತೂರು/ಬಂಟ್ವಾಳ: ಲಾಕ್‌ಡೌನ್‌ ನಡುವೆಯೂ ಕೃಷಿ ಉಪಕರಣಗಳ ಅಂಗಡಿಗಳನ್ನು ತೆರೆಯಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದ್ದು, ಪುತ್ತೂರು ನಗರದಲ್ಲಿ ಕೆಲವು ಕೃಷಿ ಉಪಕರಣಗಳ ಅಂಗಡಿಗಳು ಸೋಮವಾರದಿಂದಲೇ ಬಾಗಿಲು ತೆರೆದು ಸೇವೆ ಆರಂಭಿಸಿವೆ.

Advertisement

ಲಾಕ್‌ಡೌನ್‌ ಕಾರಣಕ್ಕೆ ಕೆಲವು ದಿನಗಳಿಂದ ಎಲ್ಲ ವ್ಯಾಪಾರ ವಹಿವಾಟುಗಳೂ ಬಂದ್‌ ಆಗಿದ್ದವು. ಇದರಿಂದ ನೀರಾವರಿಗೆ ಅಗತ್ಯವಾದ ಪಂಪ್‌ಸೆಟ್‌, ಪೈಪ್‌ ಇತ್ಯಾದಿ ಸಿಗದೆ ರೈತರು ಸಂಕಷ್ಟಕ್ಕೊಳಗಾಗಿದ್ದರು. ಬಿರುಬೇಸಗೆಯ ಈ ದಿನಗಳಲ್ಲಿ ಕೃಷಿಗೆ ಪ್ರತಿದಿನ ನೀರು ಹಾಯಿಸುವುದು ಅನಿವಾರ್ಯವಾಗಿದ್ದು, ಪಂಪ್‌ಸೆಟ್‌ಗಳು ಕೆಟ್ಟುಹೋದರೆ ದುರಸ್ತಿ ಮಾಡುವ ಅಂಗಡಿಗಳೂ ಇಲ್ಲದೆ ಕೃಷಿಕರು ದಾರಿ ಕಾಣದಾಗಿದ್ದರು. ಕೆಲವು ಕಡೆ ತರಕಾರಿ, ತೋಟದ ಬೆಳೆಗಳಿಗೆ ನೀರು ಹಾಯಿಸಲಾಗದೆ ಅವು ಒಣಗುವ ಭೀತಿಯೂ ಕಾಡಿತ್ತು. ಅಷ್ಟರಲ್ಲಿ ಕೃಷಿ ಪೂರಕ ಮಳಿಗೆಗಳನ್ನು ತೆರೆದಿರುವುದು ಕೃಷಿಕರಲ್ಲಿ ಸಂತಸ ಮೂಡಿಸಿದೆ.

ಬಂಟ್ವಾಳ ತಾಲೂಕಿನ ಕೃಷಿ ಯಂತ್ರೋಪಕರಣಗಳ 10 ಮಳಿಗೆಯವರು ಪಾಸ್‌ಗೆ ಅರ್ಜಿ ಸಲ್ಲಿಸಿದ್ದು, 6 ಮಳಿಗೆಗಳಿಗೆ ಪಾಸ್‌ ಲಭ್ಯವಾಗಿದೆ. ಉಳಿದವರಿಗೂ ಸದ್ಯದಲ್ಲೇ ಅನುಮತಿ ಲಭಿಸಲಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.
“ಲಾಕ್‌ಡೌನ್‌ನಿಂದ ಕೃಷಿ ನೀರಾವರಿಗೂ ಸಂಕಷ್ಟ’ ಎಂಬ ವರದಿಯನ್ನು ಉದಯವಾಣಿ ಎಪ್ರಿಲ್‌ 5ರ ಸಂಚಿಕೆಯಲ್ಲಿ ಪ್ರಕಟಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next